ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿರುವ ಸಿದ್ದು ಸರ್ಕಾರ: ಬೊಮ್ಮಾಯಿ
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಭಯೋತ್ಪಾದನೆ ಹತ್ತಿಕ್ಕಿದ್ದಾರೆ. ಭಯೋತ್ಪಾದಕರು ಇರುವಲ್ಲಿಗೆ ಹೋಗಿ ಅವರನ್ನು ಸದೆ ಬಡಿದಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಉಜ್ವಲಾ ಯೋಜನೆಯಡಿ ಉಚಿತ ಗ್ಯಾಸ್ ವಿತರಿಸಿದ್ದಾರೆ. ರೈತರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ: ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ
ಲಕ್ಷ್ಮೇಶ್ವರ(ಏ.10): ಕಾಂಗ್ರೆಸ್ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ವಿಶೇಷವಾಗಿ ಗೃಹಲಕ್ಷ್ಮೀ ಯೋಜನೆಯಡಿ ಇನ್ನೂ ಬಹಳಷ್ಟು ಮಹಿಳೆಯರಿಗೆ ಹಣ ಬಂದಿಲ್ಲ. ಹೀಗಾಗಿ ಕಾಂಗ್ರೆಸ್‌ನ ಗ್ಯಾರಂಟಿಗಳು ಸುಳ್ಳಿನ ಮೂಟೆಗಳಾಗಿವೆ ಎಂದು ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಸೋಮವಾರ ಲಕ್ಷ್ಮೇಶ್ವರ ತಾಲೂಕಿನ ವಿವಿಧ ಗ್ರಾಮಗಳಿಗೆ ಅವರು ಭೇಟಿ ನೀಡಿ ಚುನಾವಣೆ ಪ್ರಚಾರ ನಡೆಸಿದರು. ಬಸಾಪುರ, ರಾಮಗೇರಿ, ಶಿಗ್ಲಿ, ದೊಡ್ಡೂರು, ಸೂರಣಗಿ ಗ್ರಾಮಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.
ಬಿಜೆಪಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲ ವರ್ಗಗಳ ಜನರೂ ಬಹಿರಂಗವಾಗಿ ಬಂದು ಬೆಂಬಲ ಸೂಚಿಸುತ್ತಿದ್ದಾರೆ. ಹೀಗಾಗಿ ದೊಡ್ಡ ಅಂತರದಿಂದ ನಾನು ಗೆಲ್ಲುವ ವಿಶ್ವಾಸ ಇದೆ ಎಂದರು. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಭಯೋತ್ಪಾದನೆ ಹತ್ತಿಕ್ಕಿದ್ದಾರೆ. ಭಯೋತ್ಪಾದಕರು ಇರುವಲ್ಲಿಗೆ ಹೋಗಿ ಅವರನ್ನು ಸದೆ ಬಡಿದಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಉಜ್ವಲಾ ಯೋಜನೆಯಡಿ ಉಚಿತ ಗ್ಯಾಸ್ ವಿತರಿಸಿದ್ದಾರೆ. ರೈತರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಡವರು ಹಸಿವೆಯಿಂದ ನರಳಬಾರದು ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರಿಗೂ ಉಚಿತವಾಗಿ ಅಕ್ಕಿ ಕೊಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಹಿಡಿ ಅಕ್ಕಿ ಕೊಡದಿದ್ದರೂ ನಾವೇ ಅಕ್ಕಿಯನ್ನು ಕೊಡುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರು.
ದೇಶ ಉಳಿಸಲು ಬಿಜೆಪಿಗೆ ಮತ ಹಾಕಿ, ಗೆಲ್ಲಿಸಿ: ಬೊಮ್ಮಾಯಿ ಮನವಿ
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಶಾಸಕ ಡಾ. ಚಂದ್ರು ಲಮಾಣಿ, ಪ್ರೊ. ಎಸ್.ವಿ. ಸಂಕನೂರ ಮಾತನಾಡಿದರು.
ಸಣ್ಣವೀರಪ್ಪ ಹಳ್ಳೆಪ್ಪನವರ, ಸುನೀಲ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ರಮೇಶ ಹಾಳದೋಟದ, ಸೋಮಣ್ಣ ಡಾಣಗಲ್ಲ, ಶಂಕ್ರಣ್ಣ ಕಾಳೆ, ಲಿಂಗಶೆಟ್ಟಿ, ಭೀಮಣ್ಣ ಯಂಗಾಡಿ, ಮಂಜುನಾಥ ಮಾಗಡಿ, ಡಿ.ವೈ. ಹುನಗುಂದ, ಎಂ.ಎಸ್. ದೊಡ್ಡಗೌಡ್ರ, ಅಶೋಕ ಶಿರಹಟ್ಟಿ, ನೀಲೇಶ ಕಾಳೆ, ರಮೇಶ ದನದಮನಿ, ರುದ್ರಪ್ಪ ಲಮಾಣಿ ಇದ್ದರು.
ಕೇಂದ್ರ ಸರ್ಕಾರ ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಶ್ವೇತ ಪತ್ರ ಹೊರಡಿಸಲಿ: ಸಚಿವ ಎಚ್.ಕೆ.ಪಾಟೀಲ್
ಬಸವರಾಜ ಬೊಮ್ಮಾಯಿ ಅವರು ರಾಮಗೇರಿ ಹತ್ತಿರ ಬರುತ್ತಿದ್ದಂತೆ ಅಲ್ಲಿನ ಚೆಕ್‌ಪೋಸ್ಟ್ ಸಿಬ್ಬಂದಿ ಅವರ ಕಾರು ತಡೆದು ತಪಾಸಣೆ ನಡೆಸಿದರು. ಆನಂತರ ಅವರು ಬಸಾಪುರ ಗ್ರಾಮದ ಬಸವಣ್ಣ ದೇವರು, ರಾಮಗೇರಿಯ ಗ್ರಾಮ ದೇವತೆ ದ್ಯಾಮವ್ವ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಶಾಸಕರ ವಿರುದ್ಧ ಘೋಷಣೆ:
ಬಸವರಾಜ ಬೊಮ್ಮಾಯಿ ಅವರು ಶಿಗ್ಲಿಗೆ ಬರುತ್ತಿದ್ದಂತೆ ಶಾಸಕ ಡಾ. ಚಂದ್ರು ಲಮಾಣಿ ಅವರು ಬೊಮ್ಮಾಯಿ ಅವರೊಂದಿಗೆ ಪ್ರಚಾರದ ವಾಹನ ಹತ್ತಬಾರದು ಎಂದು ಬಿಜೆಪಿ ಯುವ ನಾಯಕ ಡಿ.ವೈ. ಹುನಗುಂದ ಅವರ ಬೆಂಬಲಿಗರ ಗುಂಪು ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೆ ಡಾ. ಚಂದ್ರು ಲಮಾಣಿ ವಿರುದ್ಧ ಘೋಷಣೆ ಕೂಗಿದರು. ಶಾಸಕರು ಕಾರ್ಯಕರ್ತರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಮುಖಂಡರ ಎದುರೇ ಹರಿಹಾಯ್ದರು. ಆಗ ಅಲ್ಲಿಯೇ ಇದ್ದ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಅವರು ಡಿ.ವೈ. ಹುನಗುಂದ ಅವರನ್ನು ಸಮಾಧಾನ ಮಾಡಿದ ನಂತರ ಹುನಗುಂದ ಅವರೂ ಕೂಡ ಪ್ರಚಾರ ವಾಹನ ಏರಿದರು. ಶಿಗ್ಲಿಯಿಂದ ಬೊಮ್ಮಾಯಿ ತೆರಳಿದ ನಂತರವೂ ಕಾರ್ಯಕರ್ತರ ಒಂದು ಗುಂಪು ಶಾಸಕರ ವಿರುದ್ಧ ಹರಿಹಾಯ್ದರೆ ಮತ್ತೊಂದು ಗುಂಪು ಅವರ ಪರವಾಗಿ ಜಯಕಾರ ಕೂಗಿತು.