ದೇಶ ಉಳಿಸಲು ಬಿಜೆಪಿಗೆ ಮತ ಹಾಕಿ, ಗೆಲ್ಲಿಸಿ: ಬೊಮ್ಮಾಯಿ ಮನವಿ
ದೇಶ ಉಳಿಸಲು ಬಿಜೆಪಿಗೆ ಮತ ಹಾಕಿ ಎಂದು ಗದಗ- ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ಅವರು ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಶಿಂಗಟಾಲೂರು, ಬಾಗೇವಾಡಿ, ಬಿಡನಾಳ, ಹಮ್ಮಗಿ ಗ್ರಾಮಗಳಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.
ಮುಂಡರಗಿ (ಏ.03): ದೇಶ ಉಳಿಸಲು ಬಿಜೆಪಿಗೆ ಮತ ಹಾಕಿ ಎಂದು ಗದಗ- ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ಅವರು ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಶಿಂಗಟಾಲೂರು, ಬಾಗೇವಾಡಿ, ಬಿಡನಾಳ, ಹಮ್ಮಗಿ ಗ್ರಾಮಗಳಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿ ಮಾತನಾಡಿದರು. ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಯುಪಿಎ ಅವಧಿಯಲ್ಲಿ ದೇಶದ ಯಾವ ಭಾಗದಲ್ಲಿ ನೋಡಿದರೂ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದವು. ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಿದರೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಪಾಕಿಸ್ತಾನಕ್ಕೆ ಪತ್ರ ಬರೆದು, ನಿಮ್ಮವರು ದಾಳಿ ಮಾಡಿದ್ದಾರೆ.
ಅವರಿಗೆ ಹೇಳಿ ಎನ್ನುತ್ತಿದ್ದರು. ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮೂಲಕ ನಿಮ್ಮ ದೇಶದ ಒಳಹೊಕ್ಕು ನಾವು ಹೊಡೆಯುತ್ತೇವೆ ಎಂಬ ಸಂದೇಶ ನೀಡುತ್ತಾರೆ. ಹೀಗಾಗಿ ಭಾರತದ ಬಗ್ಗೆ ಅವರಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಹೇಳಿದರು. ಇನ್ನು ಇಡೀ ವಿಶ್ವಕ್ಕೆ ಮಹಾಮಾರಿ ಕೊರೋನಾ ಬಂದಾಗ ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಎರಡು ಬಾರಿ ಉಚಿತ ಲಸಿಕೆ ಹಾಕಿಸಿದರು. ಹೀಗಾಗಿ ನಾವೆಲ್ಲರೂ ಇಂದು ಯಾವುದೇ ಭಯವಿಲ್ಲದೇ ಮಾಸ್ಕ್ ಹಾಕಿಕೊಳ್ಳದೇ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.
ಮುಂಡರಗಿ ತಾಲೂಕಿನಲ್ಲಿ ಇಂದು ಅಭೂತಪೂರ್ವ ಜನ ಬೆಂಬಲ ದೊರೆತಿದ್ದು, ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿ ಮಾಡಲು ಎಲ್ಲರೂ ಬಿಜೆಪಿಗೆ ಮತ ಹಾಕಿ ತಮ್ಮನ್ನು ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಪ್ರಚಾರದ ನಡುವೆಯೆ ಮುಂಡರಗಿ ತಾಲೂಕಿನ ಶಿಂಗಟಾಲೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಶಾಸಕ ಡಾ.ಚಂದ್ರು ಲಮಾಣಿ ಹಾಜರಿದ್ದರು.
ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚುವ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ಉತ್ತರಿಸಲಿದ್ದಾರೆ: ಬೊಮ್ಮಾಯಿ
ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಮುಖಂಡರಾದ ಲಿಂಗರಾಜಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ಕೊಟ್ರೇಶಪ್ಪ ಅಂಗಡಿ, ವೀರಣ್ಣ ತುಪ್ಪದ, ಹೆಚ್ ವಿರುಪಾಕ್ಷಗೌಡ, ಮೈಲಾರಪ್ಪ ಉದಂಡಿ, ಕೋಪಣ್ಣ ಕೊಪ್ಪಣ್ಣವರ, ಚನ್ನವೀರಪ್ಪ ಎಲಿಗಾರ, ಭೀಮಸಿಂಗ್ ರಾಠೋಡ, ಬಸವರಾಜ ಬಿಳಿಮಗ್ಗದ, ಪ್ರಶಾಂತಗೌಡ ಗುಡದಪ್ಪನವರ, ರವೀಂದ್ರಗೌಡ ಪಾಟೀಲ, ರಜನಿಕಾಂತ್ ದೇಸಾಯಿ, ಶ್ರೀನಿವಾಸ ಅಬ್ಬಿಗೇರಿ, ಕುಮಾರಸ್ವಾಮಿ ಹಿರೇಮಠ, ಕೊಟ್ರೇಶ ಬೊಳ್ಳೊಳ್ಳಿ, ಹನುಮಂತ ಚಬ್ಬಿ, ಅಶೋಕ ಶಿಗೇನಹಳ್ಳಿ, ದೇವ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.