ಹಾಸನದ ಮದ್ಯದಂಗಡಿ ವಿಚಾರಕ್ಕೆ ಜನತಾದರ್ಶನ ವೇದಿಕೆಯಲ್ಲಿ ಕಿತ್ತಾಡಿಕೊಂಡ ಶಾಸಕರು
ಹಾಸನ ಜನತಾದರ್ಶನ ವೇದಿಕೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.
ಹಾಸನ (ಅ.16): ಸರ್ಕಾರದಿಂದ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕು ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಸರ್ಕಾರದಿಂದ ಜನತಾದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಸರ್ಕಾರದಿಂದ ತಾಲೂಕು ಮಟ್ಟದಲ್ಲಿ ಏರ್ಪಡಿಸುವ ಜನತಾದರ್ಶನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸುವುದಕ್ಕಿಂತ ಶಾಸಕರ ಬಹಿರಂಗ ಜಗಳಕ್ಕೆ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ. ವೇದಿಕೆ ಮೇಲೆಯೇ ಸಾರ್ವಜನಿಕರ ಸಮಸ್ಯೆ ಆಲಿಸುವುದು ಬಿಟ್ಟು ವಾಕ್ಸಮರ ಮಾಡಿಕೊಳ್ಳುತ್ತಾ ಪುಡಿ ರೌಡಿಗಳಂತೆ ಹೊಡೆದಾಡುವುದಕ್ಕೆ ಮುಂದಾಗುವ ದೃಶ್ಯಗಳನ್ನು ಕೋಲಾರ ಜಿಲ್ಲಾ ಜನತಾದರ್ಶನ ವೇದಿಕೆಯಲ್ಲಿ ಕಣ್ಣಾರೆ ನೋಡಿದ್ದೇವೆ. ಈಗ ಇದೇ ತರಹದ ಹಾಸನದಲ್ಲಿ ನಡೆದಿದೆ.
ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸು- ಪಿಯುಸಿ ಸೆಕೆಂಡ್ ಕ್ಲಾಸು ಅದಕ್ಕೇ ಮೆಡಿಕಲ್ ಸೀಟು ಸಿಗ್ಲಿಲ್ಲ: ಸಿಎಂ ಸಿದ್ದರಾಮಯ್ಯ
ಈ ಘಟನೆಯು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ನಡುವೆ ಟಾಕ್ ವಾರ್ ನಡೆದಿದೆ. ಇಬ್ಬರೂ ಶಾಸಕರು ವೇದಿಕೆ ಮೇಲೆ ಮೈಕ್ ಹಿಡಿದು ಸಭೆಯಲ್ಲಿ ಬೈಯ್ದಾಡಿಕೊಂಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಗದ್ದಲ ಗಲಾಟೆ ನಡೆಯುತ್ತಿದ್ದರೂ ಸಹಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸುಮ್ಮನೇ ಕುಳಿತಿದ್ದರು.
ಇನ್ನು ಶಾಸಕರ ನಡುವಿನ ಗಲಾಟೆಯಿಂದ ಇಬ್ಬರ ಕಾರ್ಯಕರ್ತರ ನಡುವೆಯೂ ಗದ್ದಲ ಗಲಾಟೆ ಶುರುವಾಯಿತು. ಮೊದಲು ಭಾಷಣ ಮಾಡಿದ ಶಾಸಕ ಶಿವಲಿಂಗೇಗೌಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಂತರ ವೇದಿಕೆಗೆ ಭಾಷಣಕ್ಕೆ ಬಂದ ಶಾಸಕ ಹುಲ್ಲಳ್ಳಿ ಸುರೇಶ್ ಅವರು ಶಿವಲಿಂಗೇಗೌಡರ ಎಲ್ಲ ಆರೋಪಗಳಿಗೂ ಟಾಂಗ್ ನೀಡಲು ಮುಂದಾದರು. ಸುರೇಶ್ ಭಾಷಣ ಮುಗಿಯುತ್ತಿದ್ದಂತೆ ಪುನಃ ಶಿವಲಿಂಗೇಗೌಡ ಭಾಷಣ ಮಾಡಿ ಟಾಂಗ್ ಕೊಡೋದಕ್ಕೆ ಮುಂದಾದರು. ಆಗ, ಮತ್ತೊಂದು ಮೈಕ್ ತೆಗೆದುಕೊಂಡ ಸುರೇಶ್ ಇಬ್ಬರೂ ಒಬ್ಬರಿಗೊಬ್ಬರು ವಾಗ್ದಾಳಿ ಮಾಡಿಕೊಂಡರು. ಜನರೆದುರೇ ಇಬ್ಬರು ಶಾಸಕರು ಪರಸ್ಪರ ಬೈದಾಡಿಕೊಳ್ಳುತ್ತಿದ್ದರೂ ಎಲ್ಲವನ್ನೂ ನೋಡುತ್ತಾ ಉಸ್ತುವಾರಿ ಕೆ.ಎನ್.ರಾಜಣ್ಣ ಸುಮ್ಮನೆ ಕುಳಿತಿದ್ದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್, ವಿದ್ಯುತ್ ಸಮಸ್ಯೆ ಅಧಿಕೃತವಾಗಿ ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ!
ಮದ್ಯದಂಗಡಿ ವಿಚಾರವಾಗಿ ಜಗಳ ಆರಂಭ: ಹಾಸನ ಜಿಲ್ಲೆ ಜಾವಗಲ್ ಹೋಬಳಿಯ ಕರಗುಂದ ಗ್ರಾಮದ ಮದ್ಯದಂಗಡಿ ಆರಂಭದ ವಿಚಾರವಾಗಿ ಜಗಳ ಆರಂಭಿಸಿದ್ದಾರೆ. ನಿಮ್ಮ ಸರ್ಕಾರದ ಅವಧಿಯಲ್ಲೇ ಬೇಕೆಂದರಲ್ಲಿ ಮದ್ಯದಂಗಡಿ ನೀಡಿದ್ದೀರಿ ಎಂದು ಶಿವಲಿಂಗೇಗೌಡ ವಾಗ್ದಾಳಿ ಮಾಡಿದರು. ಇದಕ್ಕೆಆಕ್ಷೇಪ ವ್ಯಕ್ತಪಡಿಸಿದ ಬೇಲೂರು ಶಾಸಕ ಸುರೇಶ್ ಮತ್ತೊಂದು ಮೈಕ್ ಹಿಡಿದು ಟಾಂಗ್ ಕೊಡಲು ಮುಂದಾದರು. ಇಬ್ಬರ ನಡುವೆ ವಾಕ್ಸಮರ ತಾರಕಕ್ಕೇರಿತ್ತು. ಈ ವೇಳೆ ಹಿರಿಯ ಶಾಸಕ ಶಿವಲಿಂಗೇಗೌಡ ವಿರುದ್ಧ ಶಾಸಕ ಸುರೇಶ್ ಏಕವಚನದಲ್ಲಿ ಮಾತನಾಡಿದರು. ಮತ್ತೊಂದು ಕೊಬ್ಬರಿ ಬೆಲೆ ವಿಚಾರವಾಗಿಯೂ ಕೇಂದ್ರ ಸರ್ಕಾರದ ವಿರುದ್ಧ ಶಿವಲಿಂಗೇಗೌಡ ಟೀಕೆ ಮಾಡಿದ್ದಕ್ಕೆ, ರಾಜ್ಯ ಸರ್ಕಾರವೇ 5 ಸಾವಿರ ರೂ. ಬೆಂಬಲ ಬೆಲೆ ನೀಡಲಿ ಎಂದು ಶಾಸಕ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದರು.