* ಸಿಎಂ ಬಸವರಾಜ ಬೊಮ್ಮಾಯಿ ದೇವೇಗೌಡ್ರ ಭೇಟಿ ವಿಚಾರ* ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಗೂ ಸಚಿವ ಸೋಮಣ್ಣ ನಡುವೆ ವಾಕ್ಸಮರ* ಸಚಿವ ಸೋಮಣ್ಣಗೆ ತಿರುಗೇಟು ಕೊಟ್ಟ ಪ್ರೀತಂಗೌಡ

ಬೆಂಗಳೂರು, (ಆ.10): ಸಿಎಂ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಗೂ ಸಚಿವ ಸೋಮಣ್ಣ ನಡುವೆ ವಾಕ್ಸಮರ ಶುರುವಾಗಿದೆ.

ಹಿರಿಯರು ಗೌರವ ಕೊಟ್ಟು, ಗೌರವ ತೆಗೆದುಕೊಳ್ಳಲಿ. ಒಂದು ಬಾರಿ ಗೆದ್ದರೂ 6-7 ಬಾರಿ ಗೆದ್ದರೂ ವೋಟು ಒಂದೇ. ಆರೇಳು ಸಲ ಗೆದ್ದ ಮಾತ್ರಕ್ಕೆ ವೋಟು ಬೇರೆ ಇರುವುದಿಲ್ಲ ಎಂದು ಹೇಳುವ ಮೂಲಕ ಶಾಸಕ ಪ್ರೀತಂ ಗೌಡ ಸಚಿವ ವಿ. ಸೋಮಣ್ಣಗೆ ತಿರುಗೇಟು ನೀಡಿದ್ದಾರೆ.

ಶಾಸಕ ಪ್ರೀತಂ ಗೌಡ ಇತಿಮಿಯಲ್ಲಿ ಇರಬೇಕು : ಸೋಮಣ್ಣ ವಾರ್ನಿಂಗ್

ಇಂದು (ಆ.10) ವಿಧಾನಸೌಧದ ಬಳಿ ಮಾತನಾಡಿದ ಶಾಸಕ ಪ್ರೀತಂ ಗೌಡ, ನಾನು ರಾಜಕಾರಣ ಮಾಡುವುದಕ್ಕೆ ಬಂದಿದ್ದೇನೆ ಹೊರತು ಕಬ್ಬನ್ ಪಾಕ್, ಲಾಲ್ ಬಾಗ್ ನೋಡಲೆಂದು ಬೆಂಗಳೂರಿಗೆ ಬಂದಿಲ್ಲ. ಹಿರಿಯರಾದವರು ಸಲಹೆ ಕೊಟ್ಟು, ಮಾರ್ಗದರ್ಶನಗಳನ್ನು ನೀಡಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ನನ್ನ ಬಗ್ಗೆ ಮಾತನಾಡುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ, ನಮ್ಮದು ರಾಷ್ಟ್ರೀಯ ಪಕ್ಷ ಹೊರತು ಹಿಟ್ಲರ್ ಪಕ್ಷವಲ್ಲ ಎಂದು ಸೋಮಣ್ಣ ವಿರುದ್ಧ ಕಿಡಿಕಾರಿದರು.

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿ ದೇವೇ ಗೌಡರನ್ನು ಭೇಟಿಯಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸೋಮಣ್ಣ ಪ್ರತಿಕ್ರಿಯಿಸಿ, ಪ್ರೀತಂ ಗೌಡ ಇನ್ನೂ ಹುಡುಗ, ಹಾಸನ ಜಿಲ್ಲೆಯಲ್ಲಿ ಬೆಳೆಯಬೇಕಾದವನು. ಹೀಗಾಗಿ ಅವನು ತನ್ನ ಇತಿಮಿತಿಯಲ್ಲಿ ಇರಬೇಕು ಎಂದು ಟಾಂಗ್ ಕೊಟ್ಟರು. ಇದೀಗ ಇದಕ್ಕೆ ಪ್ರೀತಂಗೌಡ ತಿರುಗೇಟು ಕೊಟ್ಟರು.