ನಗರದ ಯಲಹಂಕ ಬಳಿಯ ಕೋಗಿಲು ಪ್ರಕರಣಕ್ಕೆ ನೆರೆಯ ಪಾಕಿಸ್ತಾನ ಕ್ಯಾತೆ ತೆಗೆದಿರುವುದಕ್ಕೆ ಕೇಂದ್ರ ಸಚಿವರು ಸೇರಿ ಮತ್ತು ರಾಜ್ಯದ ಬಿಜೆಪಿ ನಾಯಕರು ಮಂಗಳವಾರ ತೀವ್ರ ಹರಿಹಾಯ್ದಿದ್ದಾರೆ. ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು/ಬೆಳಗಾವಿ : ನಗರದ ಯಲಹಂಕ ಬಳಿಯ ಕೋಗಿಲು ಪ್ರಕರಣಕ್ಕೆ ನೆರೆಯ ಪಾಕಿಸ್ತಾನ ಕ್ಯಾತೆ ತೆಗೆದಿರುವುದಕ್ಕೆ ಕೇಂದ್ರ ಸಚಿವರು ಸೇರಿ ಮತ್ತು ರಾಜ್ಯದ ಬಿಜೆಪಿ ನಾಯಕರು ಮಂಗಳವಾರ ತೀವ್ರ ಹರಿಹಾಯ್ದಿದ್ದಾರೆ.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ಎಲ್ಲಿಯ ಬೆಂಗಳೂರು ಬಡಾವಣೆ, ಎಲ್ಲಿಯ ಪಾಕಿಸ್ತಾನ? ಸಂಬಂಧವೇ ಇಲ್ಲದ ಪಾಕಿಸ್ತಾನ ಈ ವಿಚಾರದ ಬಗ್ಗೆ ಕ್ಯಾತೆ ತೆಗೆದಿದೆ. ತಮ್ಮಲ್ಲೇ ಹುಳುಕು ಇಟ್ಟುಕೊಂಡಿರುವ ಕೇರಳ ಮತ್ತು ಪಾಕಿಸ್ತಾನ ಸರ್ಕಾರಗಳು ಕರ್ನಾಟಕದ ವಿಚಾರದಲ್ಲಿ ಮೂಗು ತೂರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಒಂದೆಡೆಯಾದರೆ, ಆ ಸರ್ಕಾರಗಳು ಕ್ಯಾತೆ ತೆಗೆದ ಕೂಡಲೇ ರಾಜ್ಯದ ಕಾಂಗ್ರೆಸ್ ಸರ್ಕಾರ ಓಲೈಕೆಗಾಗಿ ಸಮಜಾಯಿಷಿ ನೀಡುತ್ತಿರುವುದು ಅದಕ್ಕಿಂತಲೂ ವಿಪರ್ಯಾಸದ ಸಂಗತಿ’ ಎಂದು ಸೋಮಣ್ಣ ಬೇಸರದಿಂದ ಹೇಳಿದ್ದಾರೆ.
ಪಾಕಿಸ್ತಾನ ಜೊತೆ ರಾಜ್ಯ ಕಾಂಗ್ರೆಸ್ ಕೈ ಜೋಡಿಸಿದೆಯೇ
‘ಕೋಗಿಲು ಪ್ರಕರಣಕ್ಕೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿರುವುದು ಗ್ರೇಟ್. ಈಗ ಅರ್ಥ ಆಯ್ತಲ್ಲ ಇದರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದು. ಪಾಕಿಸ್ತಾನ ಜೊತೆ ರಾಜ್ಯ ಕಾಂಗ್ರೆಸ್ ಕೈ ಜೋಡಿಸಿದೆಯೇ’ ಎಂದು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.
‘ಪಾಕಿಸ್ತಾನಕ್ಕೂ ಅಡವಿಟ್ಟರಲ್ಲ ನಮ್ಮನ್ನು. ಪಾಕಿಸ್ತಾನ ಕರ್ನಾಟಕದ ಬಗ್ಗೆ ಮಾತನಾಡುವಷ್ಟು. ರಾಜ್ಯದಲ್ಲಿ ಸರ್ಕಾರಿ ಜಮೀನು ಉಳಿಸಿಕೊಳ್ಳಲು ಆಗುತ್ತಿಲ್ಲ. ಪಾಕಿಸ್ತಾನ ಸಹ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದರೆ ಏನರ್ಥ’ ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ಓಲೈಕೆ-ವಿಜಯೇಂದ್ರ:
ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೋಗಿಲು ಲೇಔಟ್ ತೆರವು ವಿಚಾರದಲ್ಲಿ ಪಾಕಿಸ್ತಾನದ ಪ್ರತಿಕ್ರಿಯೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸರ್ಕಾರ ಮೊದಲಿನಿಂದಲೂ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ವೇಳೆ ಮುಸ್ಲಿಮರಿಗೆ ನೋವಾಗುತ್ತೆ ಅಂತ ಸ್ವಪಕ್ಷದ ಶಾಸಕನ ಬೆನ್ನಿಗೆ ನಿಲ್ಲಲಿಲ್ಲ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪೈಪೋಟಿಗೆ ಬಿದ್ದಿದ್ದು, ರಾಜ್ಯದ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದ ಕಡು ಬಡವರಿಗೆ ಮನೆ ಕೊಟ್ಟು ಆಮೇಲೆ ಅಕ್ಕಪಕ್ಕದ ನಾಡಿನ ಜನರ ಬಗ್ಗೆ ಚಿಂತಿಸಲಿ. ಕನ್ನಡನಾಡಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಕನ್ನಡಿಗರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿರುವುದು ದುರ್ದೈವ ಎಂದು ಆಕ್ರೋಶ ಹೊರಹಾಕಿದ್ದಾರೆ.


