ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತನ್ನಿ: ಶಾಸಕ ನರೇಂದ್ರ
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಯಾವುದೇ ಪ್ರಯೋಜನವಾಗಿಲ್ಲ, ಈ ನಿಟ್ಟಿನಲ್ಲಿ ಬಿಜೆಪಿಯನ್ನು ತೊಲಗಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಹನೂರು (ಡಿ.28): ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಯಾವುದೇ ಪ್ರಯೋಜನವಾಗಿಲ್ಲ, ಈ ನಿಟ್ಟಿನಲ್ಲಿ ಬಿಜೆಪಿಯನ್ನು ತೊಲಗಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು. ತಾಲೂಕಿನ ವಿ.ಎಸ್. ದೊಡ್ಡಿ ಗ್ರಾಮದ ಮೈರಾಡ ಸಂಸ್ಥೆ ಆವರಣದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ಮುನ್ನ ಜನರಿಗೆ ತನ್ನ ಪ್ರಣಾಳಿಕೆಯಲ್ಲಿ ನೂರಾರು ಭರವಸೆಗಳನ್ನು ಕೊಟ್ಟಿದ್ದರು.
ಆದರೆ ಇದುವರೆಗೂ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ವಿಫಲವಾಗಿದೆ ಎಂದರು. ದಿನನಿತ್ಯದ ಆಹಾರ ಪದಾರ್ಥಗಳು ಪೆಟ್ರೋಲ್ ಡೀಸೆಲ್, ರಾಸಾಯನಿಕ ಗೊಬ್ಬರಗಳ ಬೆಲೆ ಗಗನಕ್ಕೇರಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಪ್ರತಿಭಟನೆ ನಡೆಸುವಂತಹ ಪರಿಸ್ಥಿತಿ ಬಂದಿದೆ ಎಂದರು. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹತ್ತಾರು ಜನಪರ ಯೋಜನೆ ನೀಡಲಾಗಿತ್ತು.
Chamarajanagar: ಜಿಲ್ಲೆಗೆ ವಿಶೇಷ ಪ್ಯಾಕೇಜ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಶಾಸಕ ಪುಟ್ಟರಂಗಶೆಟ್ಟಿ
ಈ ವೇಳೆ ನೀಡಿದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ಲಕ್ಷಾಂತರ ಜನರು ಉದ್ಯೋಗ ಕಂಡುಕೊಂಡಿದ್ದಾರೆ. ಈ ವೇಳೆ ಗ್ಯಾಸ್ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಇತ್ತು. ಹಾಗಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರುವಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಹಗಲಿರುಳೂ ಶ್ರಮಿಸಬೇಕು ಎಂದು ತಿಳಿಸಿದರು. ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ 40% ಕಮಿಷನ್ ನೀಡಬೇಕಿದೆ. ಇದೊಂದು ಭ್ರಷ್ಟಸರ್ಕಾರ.
ಎಲ್ಲ ಸಮೀಕ್ಷೆಗಳಲ್ಲಿಯೂ ಕಾಂಗ್ರೆಸ್‌ಗೆ ಹೆಚ್ಚಿನ ಒಲವು ಇರುವುದರಿಂದ ಪಕ್ಷದ ಕಾರ್ಯಕರ್ತರು ಶಾಸಕ ಆರ್. ನರೇಂದ್ರ ರವರನ್ನು ಬೆಂಬಲಿಸಿ ನಾಲ್ಕನೇ ಬಾರಿಗೆ ಆಯ್ಕೆ ಮಾಡುವ ಮೂಲಕ ಸಚಿವರನ್ನಾಗಿ ಮಾಡೋಣ ಎಂದು ತಿಳಿಸಿದರು. ಈ ವೇಳೆ ಕೊಳ್ಳೇಗಾಲ ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕ ಮಾದನಾಯ್ಕ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್, ಮುಖಂಡ ಉದ್ದನೂರು ಸಿದ್ದರಾಜು, ಪಿ.ಜಿ. ಪಾಳ್ಯ ಗುರುಮಲ್ಲಪ್ಪ, ಲೋಕನಹಳ್ಳಿ ಜಗದೀಶ್, ಪುಟವೀರ ನಾಯ್ಕ, ನಾಗೇಂದ್ರ, ಇಕಡಳ್ಳಿ ಕೆಂಪರಾಜು, ವಿನಯ್ ನಂಜುಂಡ ಶೆಟ್ಟಿ, ಅಂಕರಾಜು ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಸೇವೆ ಮಾಡಲು ಸಹಕಾರ ಅಗತ್ಯ: 15 ವರ್ಷಗಳಿಂದ ಶಾಸಕನಾಗಿ ನಿಮ್ಮ ಸೇವೆ ಮಾಡುತ್ತಾ ಬಂದಿದ್ದೇನೆ, ಮುಂದಿನ ದಿನಗಳಲ್ಲೂ ಸೇವೆ ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹನೂರು ಕ್ಷೇತ್ರಕ್ಕೆ ನಾಲ್ಕು ಸಾವಿರ ಕೋಟಿ ಅನುದಾನ ತಂದು ಸಮುದಾಯ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬಹುಗ್ರಾಮ ಕುಡಿವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆ ಕೆಶಿಫ್ ಯೋಜನೆ ಸೇರಿದಂತೆ ಹತ್ತಾರು ಕಾಮಗಾರಿಗಳಿಗೆ ಅನುದಾನ ತಂದು ಕೆಲವು ಕಾಮಗಾರಿಗಳು ಮುಗಿದಿವೆ.
ಬಂಡೀಪುರ: ಲಾರಿ ಡಿಕ್ಕಿಯಾಗಿ ಹೆಣ್ಣಾನೆ ಸಾವು, ಪರಿಸರವಾದಿಗಳ ಆಕ್ರೋಶ
ಇನ್ನೂ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದಿರುವ ಕಾಮಗಾರಿಗಳನ್ನು ಮುಗಿಸಲು ಕ್ಷೇತ್ರದ ಮತದಾರರು ನನ್ನ ಕೈಬಲ ಪಡಿಸಬೇಕೆಂದು ಮನವಿ ಮಾಡಿದರು. ನಮ್ಮ ಮನೆತನ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆ ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಸ್ಥಳೀಯ ನಾಯಕರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಪಕ್ಷ ತೊರೆದಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಕ್ರಮವಹಿಸಿ ಸಂಘಟನೆಗೆ ಹೊತ್ತು ನೀಡಲಾಗುವುದು ಎಂದು ತಿಳಿಸಿದರು.