ಸೀರೆ ಹಾಕಿದ ಚೀಲದ ಮೇಲೆ ಗೌರಾಳ ಎಂದು ಬರೆಯಲಾಗಿದ್ದು, ಮಧ್ಯದಲ್ಲಿ ಸಚಿವ ಹಾಲಪ್ಪ ಆಚಾರ್‌ ಭಾವಚಿತ್ರವಿದೆ. ಕೆಳಗಡೆ ಜಲಯಜ್ಞ ಎಂದು ಬರೆಯಲಾಗಿದೆ. ಹೀಗೆ ಇರುವ ಚೀಲವನ್ನು ಪ್ರತಿ ಮನೆ ಮನೆಗೂ ಹಂಚಿಕೆ ಮಾಡಲಾಗುತ್ತಿದೆ.

ಕೊಪ್ಪಳ (ಮಾ.17) : ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಾರಂಭವಾಗುವ ಮುನ್ನವೇ ಸೀರೆ ಹಂಚಿಕೆ ಮಾಡಲಾಗುತ್ತಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ. ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಯಲಬುರ್ಗಾ ತಾಲೂಕಿಗೆ ನೀರು ಬಂದಿರುವ ಖುಷಿಗಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿಯೇ ಸೀರೆ ಹಂಚಿಕೆ ಮಾಡಲಾಗುತ್ತಿದೆ. ಅದು ವಾಹನಗಳಲ್ಲಿ ಗಲ್ಲಿ ಗಲ್ಲಿಗೆ ಹೋಗಿ ಪ್ರತಿ ಮನೆಯಲ್ಲಿಯೂ ಸಂಖ್ಯೆಗೆ ಅನುಗುಣವಾಗಿ ಸೀರೆ ಹಂಚಿಕೆ ಮಾಡಲಾಗುತ್ತಿದೆ.

ಸೀರೆ ಹಾಕಿದ ಚೀಲದ ಮೇಲೆ ಗೌರಾಳ ಎಂದು ಬರೆಯಲಾಗಿದ್ದು, ಮಧ್ಯದಲ್ಲಿ ಸಚಿವ ಹಾಲಪ್ಪ ಆಚಾರ್‌ ಭಾವಚಿತ್ರವಿದೆ. ಕೆಳಗಡೆ ಜಲಯಜ್ಞ ಎಂದು ಬರೆಯಲಾಗಿದೆ. ಹೀಗೆ ಇರುವ ಚೀಲವನ್ನು ಪ್ರತಿ ಮನೆ ಮನೆಗೂ ಹಂಚಿಕೆ ಮಾಡಲಾಗುತ್ತಿದೆ.

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಹಿರೇಬೆಣಕಲ್ ಶಿಲಾ ಸಮಾಧಿಗಳು

ಕೊಪ್ಪಳ ಏತ ನೀರಾವರಿ ಯೋಜನೆ(Koppal lift irrigation)ಯಡಿಯಲ್ಲಿ ನೀರು ಬಂದಿದೆ. ಹೀಗಾಗಿಯೇ ಈ ವಿಷಯವನ್ನು ಮನೆ ಮನೆಗೆ ತಲುಪಿಸುವುದಕ್ಕಾಗಿ ಸೀರೆ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.

ಈ ಕುರಿತು ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ದೂರು ಸಹ ನೀಡಿದೆ. ಇದು ಚುನಾವಣೆಗಾಗಿ ಮಾಡುತ್ತಿರುವ ಕಾರ್ಯವಾಗಿದೆ. ಇದನ್ನು ತಡೆಯುವಂತೆಯೂ ಆಗ್ರಹಿಸಿದ್ದಾರೆ.

ಜಿಲ್ಲಾಡಳಿತವೂ ಅಲ್ಲಲ್ಲಿ ಸೀರೆಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸುತ್ತಿದೆಯಾದರೂ ಚುನಾವಣೆ ಘೋಷಣೆಯಾಗದೆ ಇರುವುದರಿಂದ ಇದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆಯೇ ಎನ್ನುವ ಜಿಜ್ಞಾಸೆಗೆ ಬಿದ್ದಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ಕಾನೂನು ಕ್ರಮವಾಗಿಲ್ಲ. ಆದರೆ, ಬೇವೂರಿನಲ್ಲಿ ಸೀರೆ ಹಂಚುವುದನ್ನು ಸಾರ್ವಜನಿಕರೇ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್‌ ಠಾಣೆಯ ಗಮನಕ್ಕೆ ತಂದಿದ್ದಾರೆ.

ಟಿಕೆಟ್‌ ವಿಚಾರ ಯಾರ ಕಿಚನ್‌ನಲ್ಲೂ ನಿರ್ಧಾರ ಆಗಲ್ಲ: ಸಿ.ಟಿ.ರವಿಗೆ ವಿಜಯೇಂದ್ರ ತಿರುಗೇಟು

ಈ ಕುರಿತು ಮಾಹಿತಿ ಬಂದಿದೆ. ಇದನ್ನು ಪರಿಶೀಲನೆ ಮಾಡಲು ಚುನಾವಣಾಧಿಕಾರಿ ನಿಯೋಜನೆ ಮಾಡಲಾಗಿದೆ. ಅವರಿಂದ ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗ ಪರಿಶೀಲನೆಯಂತೂ ನಡೆದಿದೆ.

ಸುಂದರೇಶಬಾಬು, ಡಿಸಿ ಕೊಪ್ಪಳ

ಸೀರೆ ವಿತರಣೆ ಯಾರು ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ಯಾರದೋ ಜನ್ಮದಿನಾಚರಣೆ ಖುಷಿಗಾಗಿ ಹಂಚಿಕೆ ಮಾಡುತ್ತಿರಬಹುದು. ನಿಯಮಾನುಸಾರ ಖುಷಿಯಾಗಿದ್ದರೆ ತಪ್ಪೇನೂ ಇಲ್ಲ. ಆದರೂ ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಯಾರಾದರೂ ತಮ್ಮ ಸಂತೋಷಕ್ಕಾಗಿ ಮಾಡುತ್ತಿರಬಹುದು.

ಹಾಲಪ್ಪ ಆಚಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು

ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಸೀರೆ ಹಂಚಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಈಗಾಗಲೇ ನಮ್ಮ ಪಕ್ಷದ ಮುಖಂಡರು ಸಂಬಂಧವರಿಗೆ ಮಾಹಿತಿ ನೀಡಿದ್ದಾರೆ.ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು.

ಬಸವರಾಜ ರಾಯರಡ್ಡಿ, ಮಾಜಿ ಸಚಿವರು