ಹಗರಿಬೊಮ್ಮನಹಳ್ಳಿ ಜನರಿಗೆ ಅಭಿವೃದ್ಧಿ ನಿರೀಕ್ಷೆ, ಶಾಸಕರಿಗೆ ಸತ್ವಪರೀಕ್ಷೆ
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿಯೇ ಏಕೈಕ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿರುವ ಕೆ. ನೇಮರಾಜ ನಾಯ್ಕ ಎದುರು ಸಾಕಷ್ಟುಸವಾಲುಗಳಿದ್ದು, ಅಲ್ಲದೇ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಭಿವೃದ್ಧಿ ಕುರಿತು ನೂತನ ಶಾಸಕರ ಮೇಲೆ ಸಾರ್ವಜನಿಕರು ಸಾಕಷ್ಟುನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ (ಮೇ.20) : ಅಖಂಡ ಬಳ್ಳಾರಿ ಜಿಲ್ಲೆಯಲ್ಲಿಯೇ ಏಕೈಕ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿರುವ ಕೆ. ನೇಮರಾಜ ನಾಯ್ಕ ಎದುರು ಸಾಕಷ್ಟುಸವಾಲುಗಳಿದ್ದು, ಅಲ್ಲದೇ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಭಿವೃದ್ಧಿ ಕುರಿತು ನೂತನ ಶಾಸಕರ ಮೇಲೆ ಸಾರ್ವಜನಿಕರು ಸಾಕಷ್ಟುನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹಿಂದಿನ ಶಾಸಕ ಎಸ್. ಭೀಮಾನಾಯ್ಕ(former MLA Bhima naik) ಅವರು ಮಾಲವಿ ಜಲಾಶಯಕ್ಕೆ .150 ಕೋಟಿ ಅನುದಾನ ಒದಗಿಸಿ, ಸಿಎಂ ಸಿದ್ದರಾಮಯ್ಯ ಅವರಿಂದ ಭೂಮಿಪೂಜೆ ಮಾಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಯಶಸ್ವಿಯಾಗಿದ್ದಾರೆ. ಆದರೆ, ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಹೊಲಗಳಿಗೆ ನೀರು ಹೋಗುವ ಕಾಲುವೆಗಳು ಸಂಪೂರ್ಣ ಹದಗೆಟ್ಟಿದ್ದು, ಇವುಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಬೇಕಿದೆ.
Haveri assembly constituency: ಶಾಸಕ ಲಮಾಣಿ ಮೇಲಿದೆ ಅಭಿವೃದ್ಧಿ ಸವಾಲು!
ಅದೇ ರೀತಿ ಚಿಲವಾರುಬಂಡಿ ಏತ ನೀರಾವರಿ(Chilavarubandi lift irrigation) ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಕೆಲ ತಾಂತ್ರಿಕ ಕಾರಣಗಳಿಂದಾಗಿ ರೈತರ ಹೊಲಗಳಿಗೆ ನೀರೊದಗುತ್ತಿಲ್ಲ. ಕೂಡಲೇ ಶಾಸಕರು ಚಿಲವಾರುಬಂಡಿ ಏತ ನೀರಾವರಿಯನ್ನು ಲೋಕಾರ್ಪಣೆಗೊಳಿಸಿ ರೈತರ ಕನಸನ್ನು ನನಸಾಗಿಸಬೇಕಿದೆ. ಪಟ್ಟಣದ ಹರಪನಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಮಿನಿ ವಿಧಾನಸೌಧ ಕಳೆದ ಮೂರು ತಿಂಗಳ ಹಿಂದೆ ಲೋಕಾರ್ಪಣೆಗೊಂಡಿದ್ದು, ಈಗಿನ ಶಾಸಕರು ಕೂಡಲೇ ವಿವಿಧ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಿ ಕ್ಷೇತ್ರದ ಜನತೆಯ ಅಲೆದಾಟವನ್ನು ತಪ್ಪಿಸಬೇಕಿದೆ.
ತಾಲೂಕಿನ ತಂಬ್ರಹಳ್ಳಿಯ ಜನರು ಗ್ರಾಮದಲ್ಲಿ ಡಿಗ್ರಿ ಕಾಲೇಜು ಹಾಗೂ ಎರಡನೇ ಹಂತದ ಏತ ನೀರಾವರಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲೆಗೆ 50 ಕಿಮೀ ಪಾದಯಾತ್ರೆಯ ಮೂಲಕ 500ಕ್ಕೂ ಹೆಚ್ಚು ಜನರು ಹೋಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಬಿಜೆಪಿ ಸರ್ಕಾರ ಎರಡು ಯೋಜನೆಗಳಿಗೆ ಅನುದಾನ ನೀಡಲಿಲ್ಲ. ಇದರಿಂದಾಗಿ ಇಲ್ಲಿಯ ವಿದ್ಯಾರ್ಥಿನಿಯರು ಪದವಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಗೆ ಶಾಸಕರು ಅನುದಾನ ಒದಗಿಸುವುದು ಸವಾಲಾಗಿದೆ. ಜತೆಗೆ ಕ್ಷೇತ್ರದ ಪ್ರಸಿದ್ಧ ಅಂಕಸಮುದ್ರ ಪಕ್ಷಿಧಾಮವನ್ನು ಅಭಿವೃದ್ಧಿಗೊಳಸುವರೇ ಎಂಬುದನ್ನು ಕಾದು ನೋಡಬೇಕಿದೆ.
ಪಟ್ಟಣದ ಗಂ.ಭೀ. ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂನ್ನು ಶಾಸಕರು ಪೂರ್ಣಗೊಳಿಸಿ ಯುವಜನತೆಯ ಕ್ರೀಡಾಕೂಟಕ್ಕೆ ಅನುವು ಮಾಡಿಕೊಡಬೇಕಿದೆ. ನಂದಿದುರ್ಗಾ ಏತ ನೀರಾವರಿ, ಮರಬ್ಬಿಹಾಳು ಏತ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಿ ರೈತರ ಬದುಕನ್ನು ಹಸನಾಗಿಸಬೇಕಿದೆ. ಬಹುವರ್ಷಗಳಿಂದ ಪಟ್ಟಣದ ಆಸ್ಪತ್ರೆ, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಮಸ್ಯೆ ಇದ್ದು, ಕೂಡಲೇ ಕಾಯಂ ವೈದ್ಯರನ್ನು ನೇಮಕ ಮಾಡಿ ಜನತೆಯ ಆರೋಗ್ಯ ಕಾಪಾಡಬೇಕಿದೆ. ಪಟ್ಟಣದ ಡಿಗ್ರಿ ಕಾಲೇಜು ಜಿಲ್ಲೆಯಲ್ಲಿಯೇ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜು ಆಗಿದ್ದು, ಶೈಕ್ಷಣಿಕ ಅಬಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ.
ಕಾಂಗ್ರೆಸ್ 5 ಗ್ಯಾರಂಟಿ ಸ್ಕೀಂ ಜಾರಿ ಹೇಗೆ?: ರಾಜ್ಯ ಸರ್ಕಾರದ ಬೊಕ್ಕಸಕ್ಕೆ 65,000 ಕೋಟಿ ಹೆಚ್ಚುವರಿ ಹೊರೆ
ಕ್ಷೇತ್ರದ ಹಿಂದಿನ ಶಾಸಕರು ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕಳೆದ ಬಿಜೆಪಿ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದರಿಂದ ಕ್ಷೇತ್ರದ ಕೆರೆಗಳನ್ನು ತುಂಬಿಸಲಾಗಿಲ್ಲ. ಈಗಿನ ಶಾಸಕರು ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ ಅನುದಾನ ತಂದು ಅಂತರ್ಜಲ ಅಭಿವೃದ್ಧಿ ಮಾಡಬೇಕಿದೆ. ಕಳೆದ ಅವಧಿಯಲ್ಲಿ ಪೂರ್ಣಗೊಳ್ಳದ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿ ಕ್ಷೇತ್ರದ ಜನತೆಗೆ ಅನುಕೂಲ ಮಾಡಬೇಕಿದೆ.
ಬಿ. ಹನುಮಂತ, ಯುವ ಮುಖಂಡ