ಅನಂತ್ ಇದ್ದಿದ್ದರೆ ‘ಕಾವೇರಿ ವಿವಾದ’ ಭುಗಿಲೇಳುತ್ತಿರಲಿಲ್ಲ: ಡಿ.ಕೆ.ಶಿವಕುಮಾರ್
ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಈಗ ಇದ್ದಿದ್ದರೆ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ.

ಬೆಂಗಳೂರು (ಸೆ.24): ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಈಗ ಇದ್ದಿದ್ದರೆ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ. ಶನಿವಾರ ನಗರದಲ್ಲಿ ನಡೆದ ‘ಅನಂತ ನಮನ-64’ ಕಾರ್ಯಕ್ರಮದಲ್ಲಿ ‘ಹಸಿರು ಭಾನುವಾರ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅನಂತಕುಮಾರ್ ಕೇಂದ್ರ ಸಚಿವರಾಗಿದ್ದಾಗ ಕಾವೇರಿ ನೀರಿನ ಬಗ್ಗೆ ರಾತ್ರೋರಾತ್ರಿ ಅಫಿಡವಿಟ್ ಬದಲಾಯಿಸಿ ಕರ್ನಾಟಕದ ಪರವಾಗಿ ನಿಂತಿದ್ದರು. ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಅವರು ಸದಾ ತಯಾರಿರುತ್ತಿದ್ದರು.
ರಾಜ್ಯದ ಅಭಿವೃದ್ಧಿಗೆ ಪಕ್ಷಭೇದ ಮರೆತು ಕಾರ್ಯ ನಿರ್ವಹಿಸುತ್ತಿದ್ದ ನಾಯಕ ಅನಂತಕುಮಾರ್ ಅಜಾತಶತ್ರು ಆಗಿದ್ದರು. ರಾತ್ರಿ ಹಗಲೆನ್ನದೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ವ್ಯಕ್ತಿಯನ್ನು ರಾಜ್ಯ ಕಳೆದುಕೊಂಡಂತಾಗಿದೆ ಎಂದರು. 1985ರಲ್ಲಿ ಪದವಿ ಶಿಕ್ಷಣದ ಅಂತಿಮ ವರ್ಷದಲ್ಲಿ ಇದ್ದಾಗ ತಮಗೆ ವಿಧಾನಸಭೆಗೆ ಸ್ಪರ್ಧಿಸುವ ಅವಕಾಶ ದೊರೆಯಿತು. ವಿದ್ಯಾರ್ಥಿ ಹೋರಾಟದ ಮೂಲಕ ಪರಿಚಯವಿದ್ದ ಅನಂತಕುಮಾರ್ ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಆ ದಿನಗಳಲ್ಲಿ ದೊಡ್ಡ ಮೊತ್ತವಾದ 5 ಸಾವಿರ ರು. ನೀಡಿ ಪ್ರೋತ್ಸಾಹಿಸಿದ್ದನ್ನು ಸ್ಮರಿಸಿಕೊಂಡರು.
ಅಮಿತ್ ಶಾ ಜತೆ ಎಚ್‌ಡಿಕೆ ಆಡಿದ ಕಾವೇರಿ ನುಡಿಮುತ್ತು ಏನೆಂದು ಹೇಳಲಿ: ಡಿಕೆಶಿ
ಮೆಟ್ರೋ ತಂದವರು: ಬೆಂಗಳೂರಿಗೆ ಮೊನೋ ರೈಲು ಬೇಕೋ ಅಥವಾ ಮೆಟ್ರೋ ರೈಲು ಬೇಕೋ ಎನ್ನುವ ಗೊಂದಲ ಇದ್ದಾಗ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ರಾಜ್ಯ ನಗರಾಭಿವೃದ್ಧಿ ಸಚಿವನಾಗಿದ್ದ ನನ್ನನ್ನು ಹಾಗೂ ಇನ್ನಿತರ 5 ಜನ ಸಚಿವರು ಮತ್ತು ಅಧಿಕಾರಿಗಳನ್ನು ಹೊರದೇಶಗಳಿಗೆ ಅಧ್ಯಯನ ಮಾಡಲು ಕಳುಹಿಸಿ ಕೊಟ್ಟಿದ್ದರು. ಆ ಅಧ್ಯಯನ ಪ್ರವಾಸದ ನಂತರ ಹಾಗೂ ದೆಹಲಿಯ ಮೆಟ್ರೋ ನೋಡಿ ಕೊನೆಯಲ್ಲಿ ಬೆಂಗಳೂರಿಗೆ ಮೆಟ್ರೋ ರೈಲೇ ಒಳ್ಳೆಯದು ಎಂದು ನಿರ್ಧಾರಕ್ಕೆ ಬರಲಾಯಿತು. ಬೆಂಗಳೂರಿಗೆ ಮೆಟ್ರೋ ತರಲು ನೂರು ಜನರು ತಾವೇ ಕಾರಣ ಎಂದು ಹೇಳಿದ್ದಾರೆ ಆದರೆ ಅದು ತಪ್ಪು. ಅದಕ್ಕೆ ಮೂಲ ಕಾರಣ ಅನಂತಕುಮಾರ್ ಎಂದು ನುಡಿದರು.
ತೇಜಸ್ವಿನಿ ರಾಜಕೀಯದಲ್ಲಿ ಮುನ್ನುಗ್ಗಬೇಕು: ಸಹೋದರಿ ತೇಜಸ್ವಿನಿ ಧೈರ್ಯದಿಂದ ರಾಜಕೀಯದಲ್ಲಿ ಮುನ್ನುಗ್ಗಬೇಕು. ಅನಂತಕುಮಾರ್ ಅವರ ಜೊತೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವಿದೆ, ನೀವು ರಾಜಕೀಯಕ್ಕೆ ಬರಬೇಕು.ನಿಮ್ಮ ಹಿಂದೆ ದೊಡ್ಡ ಪಡೆ ಇದೆ, ಸಮಾಜವಿದೆ. ಮುನ್ನುಗ್ಗಿ, ನಿಮ್ಮನ್ನು ನಂಬಿಕೊಂಡಿರುವ ಹಿಂಬಾಲಕರನ್ನು ರಕ್ಷಣೆ ಮಾಡಿ ಎಂದು ಸಲಹೆ ನೀಡಿದರು.
ಡಿಕೆಶಿಯವರದ್ದು ಗೂಂಡಾ, ದುರಹಂಕಾರಿ ವರ್ತನೆ: ಸಿ.ಟಿ.ರವಿ ಆರೋಪ
ಬಿಜೆಪಿ ಬೆಳೆಯಲು ಕಾರಣ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ತಮ್ಮ ಮತ್ತು ಅನಂತಕುಮಾರ್ ಅವರ ಸ್ನೇಹ ರಾಜಕೀಯ ಮೀರಿದ್ದಾಗಿದೆ. ಜೊತೆಯಲ್ಲಿಯೇ ರಾಜ್ಯ ಸುತ್ತಿ ಪಕ್ಷವನ್ನು ಬೆಳೆಸಿದೆವು. ಇಂದು ಬಿಜೆಪಿ ಈ ಹಂತಕ್ಕೆ ಬರಲು ಪ್ರಮುಖ ಕಾರಣ ಅನಂತಕುಮಾರ್. ಅವರು ಇನ್ನೂ ಹೆಚ್ಚಿನ ಕಾಲ ಇರಬೇಕಾಗಿತ್ತು. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅಗತ್ಯವಿತ್ತು. ನಾವು ಅವರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದೇವೆ. ಅವರು ಇದ್ದಿದ್ದರೆ ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಕೃಷ್ಣ ಭಟ್, ಪದ್ಮವಿಭೂಷಣ ವಿ.ಕೆ ಅತ್ರೆ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಇತರರು ಭಾಗವಹಿಸಿದ್ದರು.