ಡಿಕೆಶಿಯವರದ್ದು ಗೂಂಡಾ, ದುರಹಂಕಾರಿ ವರ್ತನೆ: ಸಿ.ಟಿ.ರವಿ ಆರೋಪ

ತಮಿಳುನಾಡಿನವರ ಜೊತೆ ಕಾಂಗ್ರೆಸ್‌ನವರು ರಾಜಕೀಯ ಸಂಬಂಧ ಹೊಂದಿರುವುದರ ಜೊತೆಗೆ ಸೂಟ್‌ಕೇಸ್ ಸಂಬಂಧವನ್ನೂ ಹೊಂದಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು. 

Ex Mla CT Ravi Slams On DK Shivakumar Over Cauvery Water Issue gvd

ಮಂಡ್ಯ (ಸೆ.24): ತಮಿಳುನಾಡಿನವರ ಜೊತೆ ಕಾಂಗ್ರೆಸ್‌ನವರು ರಾಜಕೀಯ ಸಂಬಂಧ ಹೊಂದಿರುವುದರ ಜೊತೆಗೆ ಸೂಟ್‌ಕೇಸ್ ಸಂಬಂಧವನ್ನೂ ಹೊಂದಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರುವುದಕ್ಕೆ ಕರ್ನಾಟಕದಿಂದ ಸೂಟ್‌ಕೇಸ್ ರವಾನೆಯಾಗಿತ್ತು. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಸ್ಟಾಲಿನ್ ಅಲ್ಲಿಂದಲೂ ಸೂಟ್‌ಕೇಸ್ ಕಳುಹಿಸಿದ್ದರು. ಆ ವಿಶ್ವಾಸಕ್ಕಾಗಿ ನೀರಿನ ಹಕ್ಕನ್ನು ತಮಿಳುನಾಡು ಮುಂದೆ ಅಡವಿಟ್ಟಿದ್ದಾರೆ ಎಂದು ಟೀಕಿಸಿದರು.

ಸೋನಿಯಾ ಮಧ್ಯಪ್ರವೇಶ ಸೂಕ್ತ: ಕಾವೇರಿ ವಿಚಾರದಲ್ಲಿ ಸೋನಿಯಾ ಗಾಂಧಿ ಮಧ್ಯೆ ಪ್ರವೇಶ ಮಾಡುವುದು ಸೂಕ್ತ. ಏಕೆಂದರೆ, ತಮಿಳುನಾಡಿನಲ್ಲಿ ಇಂಡಿಯಾ ಅಲೆಯನ್ಸ್ ಅಧಿಕಾರದಲ್ಲಿದೆ. ಸೋನಿಯಾ ಮಾತನ್ನು ಸ್ಟಾಲಿನ್ ಕೇಳುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಡಿಎಂಕೆ ಪರ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ರಾಜಕೀಯ ಸಂಬಂಧ ಬೆಳೆಸಲು ಬೆಂಗಳೂರಿಗೆ ಓಡೋಡಿ ಬರುವ ಸ್ಟಾಲಿನ್, ನೀರಿನ ವಿಚಾರ ಮಾತನಾಡುವುದಕ್ಕೆ ಕರೆದರೆ ಬರುವುದಿಲ್ಲವೇ. ತಮಿಳುನಾಡಿಗೆ ಇವರೇ ಹೋಗಿ ಏಕೆ ಮಾತನಾಡುತ್ತಿಲ್ಲ. ಜಲಸಂಪನ್ಮೂಲ ಸಚಿವರು ಸೆಟ್ಲ್‌ಮೆಂಟ್ ರಾಜಕಾರಣದಲ್ಲಿ ಬಿಸಿ ಇರುವಂತೆ ಕಾಣುತ್ತೆ ಎಂದು ಲೇವಡಿ ಮಾಡಿದರಲ್ಲದೇ, ಕಾವೇರಿ ಮತ್ತು ಕಾಸಿನ ನಡುವೆ ಕಾಸಿಗೆ ಈ ಸರ್ಕಾರ ಹೆಚ್ಚಿನ ಮಹತ್ವ ಕೊಡುತ್ತಿದೆ ಎಂದು ಹರಿಹಾಯ್ದರು.

ರಾಜ್ಯ ಸರ್ಕಾರಕ್ಕೆ ಹಿಂದೂ ಚಟುವಟಿಕೆ, ಕಾರ್ಯಕರ್ತರೇ ಟಾರ್ಗೆಟ್‌: ಜೋಶಿ ಕಿಡಿ

ಅಸಹಾಯಕತೆಯೋ, ಆತ್ಮೀಯತೆಯೋ?: ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡಿ ಈಗ ರೈತರ ಕೈಗೆ ಚಿಪ್ಪು ಕೊಟ್ಟಿದ್ದಾರೆ. ಇವರನ್ನು ನಂಬಿ ಮತ ಹಾಕಿದ ಜನರಿಗೆ ಅನ್ಯಾಯವೆಸಗಿದ್ದಾರೆ. ನೀರೆಲ್ಲವನ್ನೂ ಬಿಟ್ಟು ಆ ನಂತರ ಸರ್ವಪಕ್ಷ ಸಭೆ ಕರೆಯುತ್ತಾರೆ. ನೀರು ಬಿಡುಗಡೆ ವಿಚಾರದಲ್ಲಿ ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ ಸರ್ಕಾರ ತಪ್ಪು ಮಾಡುತ್ತಲೇ ಬರುತ್ತಿದೆ. ನೀರಿನ ವಾಸ್ತವ ಚಿತ್ರಣವನ್ನು ಪ್ರಾಧಿಕಾರ ಮತ್ತು ನ್ಯಾಯಾಲಯದ ಮುಂದೆ ಇಡದಿರುವುದೇ ನಮಗೆ ಅನ್ಯಾಯವಾಗಲು ಕಾರಣವಾಗಿದೆ. ಈ ಸರ್ಕಾರ ನೀರಿನ ವಿಚಾರದಲ್ಲಿ ಅಸಹಾಯಕತೆ ಪ್ರದರ್ಶಿಸುತ್ತಿದೆಯೋ, ತಮಿಳುನಾಡಿನ ಜೊತೆಗಿರುವ ಆತ್ಮೀಯತೆ ಪ್ರದರ್ಶಿಸುತ್ತಿದೆಯೋ ಗೊತ್ತಿಲ್ಲ ಎಂದರು.

ದುರಹಂಕಾರಕ್ಕೆ ಜನರಿಂದ ಮದ್ದು: ಬೆಂಗಳೂರು ಜನರು ನಿಮ್ಮ ವಿರುದ್ಧ ಮತ ಕೊಟ್ಟರು ಎಂಬ ಕಾರಣಕ್ಕೆ ಅವರಿಗೆ ಕುಡಿಯುವ ನೀರನ್ನೂ ಕೊಡಬಾರದೆಂದು ಸರ್ಕಾರ ಈ ರೀತಿ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಅಧಿಕಾರದಲ್ಲಿದ್ದಾಗ ಗೂಂಡಾ ರೀತಿ, ದುರಹಂಕಾರದಿಂದ ವರ್ತಿಸಬಾರದು. ನಿಮ್ಮ ದುರಹಂಕಾರಕ್ಕೆ ಜನ ಮದ್ದು ಅರೆಯುತ್ತಾರೆ. ಏನು ಬೇಕಾದರೂ ಆಗಲಿ ರಾಜ್ಯದ ಹಿತ ಮುಖ್ಯ ಎಂದಿದ್ದರೆ ಅದು ಸದ್ಗುಣ. ನೀರು ಉಳಿಸಿಕೊಳ್ಳುವ ಕೆಲಸ ನಿಮ್ಮಿಂದ ಆಗಿಲ್ಲ. ಹಂಚಿ ತಿನ್ನೋದು, ಕೂಡಿಬಾಳುವುದು ಈ ನೆಲದ ಗುಣ. ಈಗ ನಾವೇ ಒಣಗಿ ಹೋಗುವಾಗ ಕುಡಿಯುವ ನೀರು ಕೇಳಿದರೆ ದುರಹಂಕಾರ ಮಾತನಾಡುತ್ತಾರೆ. ರಾಜ್ಯ ಸರ್ಕಾರ ಕೂಡಲೇ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ನಿಲುವು ತಾಳಬೇಕು ಎಂದು ಒತ್ತಾಯಿಸಿದರು.

ಮಂಡ್ಯ ನಗರ, ಮದ್ದೂರು ಬಂದ್‌ ಭರ್ಜರಿ ಯಶಸ್ವಿ: ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಎಂ.ಎಸ್ .ಆತ್ಮಾನಂದ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಡಾ.ಇಂದ್ರೇಶ್, ಎಸ್.ಸಚ್ಚಿದಾನಂದ, ಅಶೋಕ್ ಜಯರಾಂ, ನಗರಸಭೆ ಮಾಜಿ ಅಧ್ಯಕ್ಷೆಯರಾದ ಅಂಬುಜಮ್ಮ, ನಿರ್ಮಲ ಚಿಕ್ಕೇಗೌಡ, ಸದಸ್ಯೆ ಮೀನಾಕ್ಷಿ, ಕೆ.ಬೋರಯ್ಯ, ಬೇಕ್ರಿ ರಮೇಶ್, ಎಸ್.ಕೃಷ್ಣ, ಸಾತನೂರು ವೇಣುಗೋಪಾಲ್, ಕನ್ನಡ ಸೇನೆ ಮಂಜುನಾಥ್, ಎಂ.ಎಲ್.ತುಳಸೀಧರ್, ಕಾರಸವಾಡಿ ಮಹದೇವ, ನೀನಾ ಪಟೇಲ್, ಎಂ.ವಿ.ಕೃಷ್ಣ, ಶಂಕರೇಗೌಡ, ಶ್ರೀರಂಗಪಟ್ಟಣ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಮಂಡ್ಯ ನಗರ ಪ್ರಧಾನ ಕಾರ್ಯದರ್ಶಿ ಎಂ.ಚಾಮರಾಜು, ಶ್ರೀರಂಗಪಟ್ಟಣ ತಾಪಂ ಮಾಜಿ ಅಧ್ಯಕ್ಷ ಟಿ.ಶ್ರೀಧರ್, ಕೀಲಾರ ಕೃಷ್ಣೇಗೌಡ, ರೈತಸಂಘದ ಮುದ್ದೇಗೌಡ, ಎಂ.ಬಿ.ನಾಗಣ್ಣಗೌಡ ಇತರರಿದ್ದರು.

Latest Videos
Follow Us:
Download App:
  • android
  • ios