ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಕನಿಷ್ಠ ₹50 ಕೋಟಿ ಬೇಕಾಗಿದ್ದು, ಅಷ್ಟು ಹಣ ತಮ್ಮ ಬಳಿ ಇಲ್ಲದಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಮೈಸೂರು: ‘ನಾನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ, ಚುನಾವಣೆಗೆ ಮಾತ್ರ ಸ್ಪರ್ಧಿಸುವುದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಘೋಷಿಸಿದ್ದಾರೆ.
ವಿಧಾನಸಭೆಗೆ ಸ್ಪರ್ಧಿಸಲು ಕನಿಷ್ಠ ₹50 ಕೋಟಿ ಬೇಕು
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಈ ಹಿಂದೆ ಚುನಾವಣೆಗಳಲ್ಲಿ ಸ್ಪರ್ಧಿಸಿದಾಗ ಜನರೇ ಖರ್ಚಿಗೆ ಹಣ ನೀಡಿ ಆಶೀರ್ವದಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಧಾನಸಭೆಗೆ ಸ್ಪರ್ಧಿಸಲು ಕನಿಷ್ಠ ₹50 ಕೋಟಿ ಬೇಕು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದವರು ತಮ್ಮ ಜಮೀನು, ಮನೆ ಮಾರಿ ಸ್ಪರ್ಧಿಸಬಹುದು. ಆದರೆ, ನಮ್ಮಿಂದ ಅದು ಸಾಧ್ಯವಿಲ್ಲ ಎಂದರು.
ನನ್ನ ಬಳಿ ಒಂದು ಮನೆ, ಒಂದು ನಿವೇಶನ ಮಾತ್ರ ಇದೆ
ನನ್ನ ಬಳಿ ಒಂದು ಮನೆ ಮತ್ತು ಒಂದು ನಿವೇಶನ ಮಾತ್ರ ಇದೆ. ಹೀಗಿರುವಾಗ ಸ್ಪರ್ಧೆ ಹೇಗೆ ಸಾಧ್ಯ?. ಅಲ್ಲದೇ, ನನ್ನ ಮಕ್ಕಳು ಕೂಡ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರು ತಮ್ಮ ಶಕ್ತ್ಯಾನುಸಾರ ರಾಜಕೀಯದಲ್ಲಿ ಮುಂದುವರಿಯುತ್ತಾರೆ. ನಾನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ, ಚುನಾವಣೆಗೆ ಮಾತ್ರ ಸ್ಪರ್ಧಿಸುವುದಿಲ್ಲ ಎಂದರು.
- ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ನನ್ನಲ್ಲಿಲ್ಲ: ಎಂಎಲ್‌ಸಿ


