ನಮ್ಮ ಸರ್ಕಾರವನ್ನು ಯಾರೂ ಪರ್ಸಂಟೇಜ್ ಸರ್ಕಾರ ಎಂದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಆರ್.ಆರ್.ನಗರ ಕ್ಷೇತ್ರದ ಬಯಲು ರಂಗಮಂದಿರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪ್ರಚಾರ ನಡೆಸಿದ ಎಚ್.ಡಿ.ಕುಮಾರಸ್ವಾಮಿ| ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದಿದ್ದ ಪ್ರಧಾನಿ ಮೋದಿ| ಬಿಜೆಪಿ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್|

ಬೆಂಗಳೂರು(ಅ.29): ಜೆಡಿಎಸ್ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಗಾಡ್‌ಫಾದರ್ ಎಂಬ ಮಾತುಗಳು ಕೇಳಿಬಂದಿವೆ. ಅವರು ಯಾರು ನಮಗೆ ಗಾಡ್‌ಫಾದರ್ ಆಗುವುದಕ್ಕೆ? ಯಾವತ್ತಿದ್ದರೂ ಜನಗಳೇ ನಮ್ಮ ಗಾಡ್‌ಫಾದರ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬುಧವಾರ ಆರ್.ಆರ್.ನಗರ ಕ್ಷೇತ್ರದ ಬಯಲು ರಂಗಮಂದಿರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಬಂದು 10 ಪರ್ಸೆಂಟ್ ಸರ್ಕಾರ ಎಂದರು. ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದರು. ಆದರೆ, ನಮ್ಮ ಸರ್ಕಾರವನ್ನು ಯಾರೂ ಪರ್ಸಂಟೇಜ್ ಸರ್ಕಾರ ಎಂದಿಲ್ಲ. ಬೆಂಗಳೂರು ಮತ್ತು ಮೈಸೂರು ಹೊರವಲಯದ ಅಭಿವೃದ್ಧಿಗಾಗಿ 2006ರಲ್ಲಿ 25 ಸಾವಿರ ಕೊಟಿ ರು. ಅನುದಾನ ನೀಡಲಾಯಿತು. ಅದರ ಪ್ರತಿಫಲವೇ ಆರ್.ಆರ್.ನಗರದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದರು.
ನನ್ನ - ಅವರ ನಡುವಿನ ಸಂಬಂಧ ಮುಗಿದು ಹೋಗಿದೆ : ನಿಖಿಲ್
ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಕ್ಷೇತ್ರಕ್ಕೆ 450 ಕೋಟಿ ರು. ಅನುದಾನ ನೀಡಿದರೂ ಮುನಿರತ್ನ ಪಕ್ಷ ಬದಲಾಯಿಸಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಮಚಂದ್ರಪ್ಪ ಮುಖ ನೋಡಿ ಜೆಡಿಎಸ್‌ಗೆ 65 ಸಾವಿರ ಮತ ಬಂದಿಲ್ಲ. ಕುಮಾರಸ್ವಾಮಿ ಅವರಿಂದಾಗಿ ಮತಗಳು ಬಂದಿವೆ. ರಾಮಚಂದ್ರ ಎಂದು ಹೆಸರು ಇಟ್ಟುಕೊಂಡು ರಾವಣನ ಕೆಲಸ ಮಾಡಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವುದು ತಪ್ಪಾ ಎಂದು ಹೇಳಿದರು.