Asianet Suvarna News Asianet Suvarna News

ನನ್ನ - ಅವರ ನಡುವಿನ ಸಂಬಂಧ ಮುಗಿದು ಹೋಗಿದೆ : ನಿಖಿಲ್

ಮುನಿರತ್ನ ನನ್ನ ಗಾಡ್ ಫಾದರ್ ಅಲ್ಲ. ನನ್ನ ಹಾಗೂ ಅವರ ನಡುವಿನ ಸಂಬಂಧ ಮುಗಿದು ಹೋಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. 

Nikhil Kumaraswamy Campaign For JDS Candidate Krishnamurthy in RR Nagar snr
Author
Bengaluru, First Published Oct 28, 2020, 11:02 AM IST

ಬೆಂಗಳೂರು (ಅ.28):  ‘ಆರ್‌.ಆರ್‌.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ನನ್ನ ಗಾಡ್‌ಫಾದರ್‌ ಅಲ್ಲ. ನಾನೊಬ್ಬ ನಟ, ಮುನಿರತ್ನ ನಿರ್ಮಾಪಕರಷ್ಟೇ. ಕುರುಕ್ಷೇತ್ರ ಸಿನಿಮಾ ಮುಗಿಯುತ್ತಿದ್ದಂತೆ ಅವರ ಮತ್ತು ನನ್ನ ಸಂಬಂಧ ಮುಗಿದಿದೆ’ ಎಂದು ನಟ ಹಾಗೂ ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದರು ಎಂಬ ಆರೋಪಗಳು ಕೇಳಿ ಬಂದ ಬಳಿಕ ನಿಖಿಲ್‌ ಕುಮಾರಸ್ವಾಮಿ ಅವರು ಮಂಗಳವಾರ ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ರೋಡ್‌ಶೋ ನಡೆಸಿ ಮಾತನಾಡಿದರು. ‘ಮುನಿರತ್ನ ನಿರ್ಮಾಪಕರು. ನಾನೊಬ್ಬ ನಟ ಅಷ್ಟೇ. ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ. ನನ್ನ ಮತ್ತು ಮುನಿರತ್ನ ನಡುವಿನ ಸಂಬಂಧ ಸಿನಿಮಾಗೆ ಮಾತ್ರ ಸೀಮಿತ’ ಎಂದು ಹೇಳಿದರು.

RR ನಗರ ಉಪಕದನ: ಸಿದ್ದರಾಮಯ್ಯ ಪ್ರಚಾರದ ವೇಳೆ ಪ್ರಧಾನಿ ಮೋದಿ ಪರ ಜೈಕಾರ .

‘ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ. ನಾನು ಜೆಡಿಎಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ವೈಯಕ್ತಿಕ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ವಿಷ ಹಾಕುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಈ ಬಗ್ಗೆ ಹಲವು ವದಂತಿಗಳನ್ನು ಕ್ಷೇತ್ರದಲ್ಲಿ ಹಬ್ಬಿಸಿದ್ದಾರೆ ಎಂದರು.

ಅವುಗಳಿಗೆ ಕಿವಿಗೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬಾರದು. ಕೃಷ್ಣಮೂರ್ತಿ ಅವರ ಗೆಲುವಿಗೆ ಕೆಲಸ ಮಾಡಬೇಕು. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವಿನ ರೇಸ್‌ನಲ್ಲಿ ಇಲ್ಲ ಎಂದು ತಿಳಿದುಕೊಂಡಿದ್ದರೆ, ಅದು ತಪ್ಪು. ತಳಮಟ್ಟದಲ್ಲಿ ಜೆಡಿಎಸ್‌ ಗೆಲುವಿನ ತರಂಗ ಕಾಣುತ್ತಿದೆ’ ಎಂದರು.

ಕಾಂಗ್ರೆಸ್‌ನ ಜಾತಿ ಕಾರ್ಡ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಈಗ ಚುನಾವಣೆಯಲ್ಲಿ ಒಕ್ಕಲಿಗ ಜಾತಿ ಕಾರ್ಡ್‌ ಪ್ರಯೋಗಿಸುತ್ತಿರುವ ಕಾಂಗ್ರೆಸ್‌ನವರೇ ಮುನಿರತ್ನ ಅವರನ್ನು ಈ ಹಿಂದೆ ಎರಡು ಬಾರಿ ಟಿಕೆಟ್‌ ನೀಡಿ ಗೆಲ್ಲಿಸಿದ್ದಾರೆ. ಆಗ ಇರದ ಜಾತಿ ಮೇಲಿನ ಪ್ರೀತಿ, ಅವರಿಗೆ ಈಗ ಬಂದಿದೆ. ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿಯೂ ಒಕ್ಕಲಿಗ ಜಾತಿಗೆ ಸೇರಿದವರಾಗಿದ್ದಾರೆ’ ಎಂದರು.

ಚುನಾವಣೆ ಹಿನ್ನೆಲೆ : 18 ಜಿಲ್ಲೆಗಳಲ್ಲಿ ಸರ್ಕಾರಿ ರಜೆ ...

ಪಾಠ ಕಲಿಸಿ:  ‘ಕ್ಷೇತ್ರದ ಜನರು 5 ವರ್ಷ ನಮ್ಮ ಪರವಾಗಿ ಕೆಲಸ ಮಾಡಲಿ ಎಂದು ಶಾಸಕರನ್ನು ಆಯ್ಕೆ ಮಾಡುತ್ತಾರೆ. ಆದರೆ, ಅಧಿಕಾರ, ಹಣಕ್ಕಾಗಿ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ಅಂತಹವರಿಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು. ತಾತ್ಕಾಲಿಕ ಪರಿಹಾರಕ್ಕೆ ಬಲಿಯಾಗದೆ ಶಾಶ್ವತ ಪರಿಹಾರಕ್ಕೆ ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಅವರನ್ನು ಗೆಲ್ಲಿಸಿ’ ಎಂದು ನಿಖಿಲ್‌ ಮನವಿ ಮಾಡಿದರು.

‘ಬೆಳಗ್ಗೆ ಒಂದು ಪಕ್ಷ, ಮಧ್ಯಾಹ್ನ ಒಂದು ಪಕ್ಷ, ಸಂಜೆ ಒಂದು ಪಕ್ಷ ಅಂತ ಬದಲಾಯಿಸುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಸಿ ಅದರ ಹಣವನ್ನು ಚುನಾವಣೆಗೆ ಬಳಸುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಸಿ ಅದರ ಹಣವನ್ನು ಚುನಾವಣೆಗೆ ಬಳಸುತ್ತಾರೆ. ಯುವಕರು ಬುದ್ಧಿವಂತಿಕೆಯಿಂದ ಮತ ಚಲಾಯಿಸಬೇಕು. ಕುಮಾರಸ್ವಾಮಿಗೆ ನಾನು ಮಗನಂತೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ. ಅವರು ನನಗೆ ಸಹೋದರನಿದ್ದಂತೆ. ಜೆಡಿಎಸ್‌ ಪಕ್ಷ ಎಷ್ಟುವರ್ಷಗಳ ಕಾಲ ಅಧಿಕಾರದಲ್ಲಿತ್ತೋ ಆ ಅವಧಿಯಲ್ಲಿ ರಾಜ್ಯ ಪ್ರಗತಿಯ ಪಥದಲ್ಲಿ ನಡೆದಿದೆ. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿರುವುದು ಗೊತ್ತಾಗುತ್ತಿದೆ. ಕೃಷ್ಣಮೂರ್ತಿ ಅವರ ತಂದೆ ವೆಂಕಟೇಶ್‌ ಜೆಡಿಎಸ್‌ಗಾಗಿ 25 ವರ್ಷ ದುಡಿದಿದ್ದಾರೆ. ಸೋತ ತಕ್ಷಣ ಪಕ್ಷ ಬಿಟ್ಟು ಹೋಗುವ ಅಭ್ಯರ್ಥಿಗಳಿಗಿಂತ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡಿದ್ದು, ಗೆಲ್ಲುವ ವಿಶ್ವಾಸ ಇದೆ’ ಎಂದು ತಿಳಿಸಿದರು.

Follow Us:
Download App:
  • android
  • ios