ಶಿರಾ(ಅ.31): ಸ್ಟಾರ್‌ ಕ್ಯಾಂಪೇನ್‌ಗಳ ಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಅವರು ಶಿರಾ ತಾಲೂಕು ಸೋರೆಕುಂಟೆ ಗ್ರಾಮದಲ್ಲಿ ನಡೆದ ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಮಂಡ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಜೆಪಿ, ರೈತ ಸಂಘ ಒಟ್ಟಾಗಿ ಕೆಲಸ ಮಾಡಿದರು. ಜೊತೆಗೆ ಪಕ್ಷೇತರ ಅಭ್ಯರ್ಥಿ ಪರ ಮಾಧ್ಯಮ ಕರುಣೆ ,ಅನುಕಂಪ ತೋರಿದ ಹಿನ್ನೆಲೆಯಲ್ಲಿ ಚುನಾವಣೆ ಗೆದ್ದರು ಎಂದರು.

'ನಾವು ಇಲ್ಲಿ ಕಣ್ಣೀರು ಹಾಕಲು ಬಂದಿಲ್ಲ, ಶಿರಾ ಜನತೆಯ ಕಣ್ಣೀರು ಒರೆಸಲು ಬಂದಿದ್ದೇವೆ'

ಬಿಜೆಪಿ ಸರ್ಕಾರ ಆಗ ನೀರು ಕೊಡದವರು ಈಗ ಕೊಡುತ್ತಾರ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಬೇರೆ ಬೇರೆ ಜಿಲ್ಲೆಗಳಿಂದ ಕೇಸರಿ ಟವೆಲ್‌ ಹಾಕಿಕೊಂಡವರನ್ನು ಕರೆತಂದಿದ್ದಾರೆ ಎಂದರು.ಮೈತ್ರಿ ಸರ್ಕಾರ ಬೀಳಲು ಯಾರು ಕಾರಣ ಅಂತ ಚರ್ಚಿಸುವ ಸಮಯವಲ್ಲ ಎಂದ ಅವರು ಅಶೋಕ್‌ಗೂ ಶಿರಾಗೂ ಸಂಬಂಧವೇನು ಎಷ್ಟುಹಳ್ಳಿವೆ. ಹಳ್ಳಿಗಳ ಕಷ್ಟವೇನು ಅಂತ ಅವರಿಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದರು.

ಶಿರಾಕ್ಕೆ ಬಂದು ಟಾಟಾ ಮಾಡಿ ಹೋಗಿದ್ದಾರೆ. ಎಲ್ಲೋ ಕುಳಿತು ಶಿರಾದಲ್ಲಿ ಜನರು ಜೆಡಿಎಸ್‌ ಗೆಲ್ಲುವುದಿಲ್ಲ ಅಂತಾರೆ. ರೈತರ ಪಕ್ಷದ ಪರ ಅಶೋಕ್‌ ಸರ್ಟಿಫಿಕೇಚ್‌ ಕೊಡುವ ಅಗತ್ಯವಿಲ್ಲ ಎಂದರು.