ಶಿರಾ(ಅ.31):  ಶಿರಾ ತಾಲೂಕನ್ನು ದತ್ತು ಪಡೆಯುವುದಾಗಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ತಿಳಿಸಿದ್ದಾರೆ. ಶಿರಾ ತಾಲೂಕು ಸೀಗಲಹಳ್ಳಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,  ನಾನಿನ್ನೂ ಆರು ವರ್ಷ ಅಧಿಕಾರದಲ್ಲಿರುತ್ತೇನೆ. ಶಿರಾ ತಾಲೂಕನ್ನು ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಮಾಡುತ್ತೇನೆ. ಸತ್ಯನಾರಾಯಣ್‌ ಕಾಲದಲ್ಲಿ ಅರ್ಧಕ್ಕೆ ನಿಂತಿದ್ದ ಕಾಮಗಾರಿಗಳನ್ನು ನಾನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ನಾನು ಸಮಾವೇಶದಲ್ಲಿ ಈ ಮಾತನ್ನು ಹೇಳಬೇಕು ಅಂತಿದ್ದೆ. ಆದರೆ ನೀವು ಪ್ರೀತಿ ವಾತ್ಸಲ್ಯ ಕೊಟ್ಟಿದ್ದೀರಿ, ನೇಗಿಲು ಕೊಟ್ಟಿದ್ದೀರ ಹಾಗಾಗಿ ಹೇಳಿದೆ ಎಂದರು.

ಶಿರಾ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ ಡೋಂಗಿ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ವೋಟಿಗಾಗಿ ಸುಳ್ಳು ಹೇಳುವ ಅಭ್ಯಾಸವನ್ನು ಮುಖ್ಯಮಂತ್ರಿ ನಿಲ್ಲಿಸಬೇಕು ಎಂದರು.

ಸ್ಟಾರ್‌ ಕ್ಯಾಂಪೇನರ್‌ ಪ್ರಚಾರದಿಂದ ಚುನಾವಣೆ ಗೆಲ್ಲಲ್ಲ: ಕುಮಾರಸ್ವಾಮಿ

ನೀರಾವರಿ ವಿಚಾರದಲ್ಲಿ ನನ್ನ ವಿರುದ್ಧ ಸುಳ್ಳು ಹೇಳಿಯೇ ಸೋಲಿಸಿದರು. ಅಧಿಕಾರಕ್ಕೆ ಬಂದ ಬಳಿಕ ಇಲ್ಲಿಯವರೆಗೂ ಮುಖ್ಯಮಂತ್ರಿ ಮದಲೂರಿಗೆ ಬಂದಿದ್ದಾರ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಶಿರಾಗೆ ಅನುದಾನ ಕೊಟ್ಟಿದ್ದಾರೆ. ಅದರ ಒಂದು ರೂಪಾಯಿ ರಿಲೀಸ್‌ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನಾ ರಿಲೀಸ್‌ಮಾಡಿದ್ದಾರಾ ಎಂದರು.

ಜೆಡಿಎಸ್‌34 ಹಾಗೂ ಕಾಂಗ್ರೆಸ್‌ಶಾಸಕರಿಗೂ ಅನುದಾನ ರಿಲೀಸ್‌ಮಾಡಿಲ್ಲ ಎಂದ ದೇವೇಗೌಡರು ಇಂತಹ ಕೆಟ್ಟ ವ್ಯವಸ್ಥೆ ಯಾವ ಮುಖ್ಯಮಂತ್ರಿ ಕಾಲದಲ್ಲೂ ನೋಡಿಲ್ಲ ಎಂದರು. ತುಮಕೂರಿನಲ್ಲಿ ನಾನು ಸೋತಿರುವುದು ಸತ್ಯ, ಹೇಮಾವತಿ ನೀರು ಕೊಟ್ಟಿರುವುದು ಸತ್ಯ. ತುರುವೇಕೆರೆ, ಗುಬ್ಬಿ, ಕುಣಿಗಲ್‌ಗೆ ಹೇಮಾವತಿ ನೀರು ಬರುತ್ತದೆ. ಇಲ್ಲಿಗೆ ಹೇಮಾವತಿ ನೀರು ಬರುವುದಿಲ್ಲ. ಇಲ್ಲಿಗೆ ಭದ್ರಾದಿಂದ ನೀರು ಬರಬೇಕು ಎಂದರು.