Gujarat Election Results 2022: ಮೋರ್ಬಿ ಸೇತುವೆ ದುರಂತದ ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಮುನ್ನಡೆ..!
ಹೌದು, ತೂಗು ಸೇತುವ ಕುಸಿದು ಮೊರ್ಬಿ ಪಟ್ಟಣ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ವೇಳೆ ಆಡಳಿತಾರೂಢ ಬಿಜೆಪಿ ತೀವ್ರ ಟೀಕೆಗೆ ಗುರಿಯಾಗಿತ್ತು.
ಗುಜರಾತ್‌ನ (Gujarat) ಮೋರ್ಬಿಯಲ್ಲಿ (Morbi) ಅಕ್ಟೋಬರ್ ತಿಂಗಳಲ್ಲಿ ತೂಗುಸೇತುವೆ (Bridge) ಕುಸಿದು 140 ಕ್ಕೂ ಹೆಚ್ಚು ಜನರ ಜೀವ ಹೋಗಿತ್ತು. ಈ ಘಟನೆಯನ್ನು ಈಗಲೂ ದೇಶದ ಬಹುತೇಕರು ಮರೆತಿರಲ್ಲ. ಇನ್ನು, ಗುಜರಾತ್ ಹಾಗೂ ಸ್ಥಳೀಯ ಜನತೆಯಂತೂ ತಮ್ಮ ಕುಟುಂಬಸ್ಥರು, ಸ್ನೇಹಿತರನ್ನು ಕಳೆದುಕೊಂಡವರು ಈಗಲೂ ದು:ಖದಲ್ಲೇ ಇರುತ್ತಾರೆ. ಆದರೆ, ಈ ನಡುವೆ ಡಿಸೆಂಬರ್ 1 ಹಾಗೂ 5 ರಂದು ಗುಜರಾತ್ ವಿಧಾನಸಭಾ ಚುನಾವಣೆಯೂ ನಡೆಯಿತು. ಈ ಹಿನ್ನೆಲೆ ಈ ಕ್ಷೇತ್ರದ ಜನ ಸ್ಥಳೀಯ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಹಲವರು ಊಹಿಸಿದ್ದರು. ಆದರೆ, ಅಚ್ಚರಿಯೆಂಬಂತೆ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ (Kantilal Amrutiya) ಅವರು ಪ್ರಸ್ತುತ ಗುಜರಾತ್‌ನ ಮೊರ್ಬಿಯಲ್ಲಿ ಭಾರಿ ಮುನ್ನಡೆ ಸಾಧಿಸಿದ್ದಾರೆ.
ಹೌದು, ತೂಗು ಸೇತುವ ಕುಸಿದು ಮೊರ್ಬಿ ಪಟ್ಟಣ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ವೇಳೆ ಆಡಳಿತಾರೂಢ ಬಿಜೆಪಿ ತೀವ್ರ ಟೀಕೆಗೆ ಗುರಿಯಾಗಿತ್ತು. ಸ್ಥಳೀಯ ಶಾಸಕ, ಸಂಸದರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. ಆದರೂ, ಸ್ಥಳಿಯ ಜನತೆ ಮತ್ತೆ ಬಿಜೆಪಿಯತ್ತಲೇ ವಾಲಿದೆ ಎನ್ನುತ್ತಿದೆ ಮತ ಎಣಿಕೆ. ಈವರೆಗೆ ನಡೆದ ಮತ ಎಣಿಕೆಯಲ್ಲಿ 27 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯಲ್ಲಿದ್ದಾರೆ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ. ಅಕ್ಟೋಬರ್ 30 ರಂದು ಬ್ರಿಟಿಷರ ಕಾಲದ ಸೇತುವೆ ಕುಸಿದು ಬಿದ್ದ ಮೊರ್ಬಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಜಯಂತಿ ಪಟೇಲ್ ಅವರನ್ನು ಕಣಕ್ಕಿಳಿಸಿದ್ದರೆ, ಮತ್ತೊಂದೆಡೆ ಎಎಪಿ ಪಂಕಜ್ ರಂಸಾರಿಯಾ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.
ಇದನ್ನು ಓದಿ: Gujarat, HP Election Results 2022 Live: HP ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಜಯರಾಮ್ ಠಾಕೂರ್‌ಗೆ ಜಯ
ಮೋರ್ಬಿಯಲ್ಲಿನ ಮಾರಣಾಂತಿಕ ಸೇತುವೆಯ ಕುಸಿತದ ಸಮಯದಲ್ಲಿ ಹಲವಾರು ಜೀವಗಳನ್ನು ಉಳಿಸಿದ ಕೀರ್ತಿಗ ಅಮೃತಿಯಾ ಪಾತ್ರವಾಗಿದ್ದಾರೆ ಎಂದೂ ಹೇಳಲಾಗಿದೆ. ನದಿಗೆ ಬಿದ್ದ ಜನರನ್ನು ರಕ್ಷಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಮೋರ್ಬಿ ಪಟ್ಟಣದಲ್ಲಿ ಸಂಭವಿಸಿದ ಸೇತುವೆ ದುರಂತದಲ್ಲಿ ಮಕ್ಕಳು ಸೇರಿದಂತೆ 140 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಇದು ರಾಷ್ಟ್ರವನ್ನು ಬೆಚ್ಚಿ ಬೀಳಿಸಿತು. ಇತ್ತೀಚೆಗೆ ಸಾರ್ವಜನಿಕರ ಬಳಕೆಗೆ ತೆರೆದಿದ್ದ ತೂಗುಸೇತುವೆ ಕುಸಿದು ಸಾವು ಸಂಭವಿಸಿತ್ತು. ಬಲಿಯಾದವರಲ್ಲಿ ರಾಜ್‌ಕೋಟ್ ಲೋಕಸಭಾ ಸದಸ್ಯ ಮೋಹನ್ ಕುಂದರಿಯಾ ಅವರ 12 ಸಂಬಂಧಿಕರು ಸೇರಿದ್ದರು.
ಬ್ರಿಟಿಷರ ಕಾಲದ ಮೋರ್ಬಿ ಸೇತುವೆಯನ್ನು ನವೀಕರಣ ಕಾರ್ಯದ ವೇಳೆ ಲಾಭಕ್ಕೆ ಮಾತ್ರ ಆದ್ಯತೆ ನೀಡಿ ಉಳಿದೆಲ್ಲವನ್ನೂ ರಾಜಿ ಮಾಡಿಕೊಳ್ಳಲಾಯಿತು ಮತ್ತು ನೂರಾರು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿತು ಎಂದು ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ವಿರುದ್ಧ ಆರೋಪಿಸಿತ್ತು. ಆದರೆ, ವಿಧಾನಸಭಾ ಚುನಾವಣೆ ಮೇಲೆ ಇದ್ಯಾವ್ದೂ ಪರಿಣಾಮ ಬೀರಿದಂತಿಲ್ಲ. ಏಕೆಂದರೆ, ಆಡಳಿತಾರೂಢ ಬಿಜೆಪಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ 2002 ರ ದಾಖಲೆಯನ್ನೂ ಮೀರಿಸುವ ನಿರೀಕ್ಷೆಯಲ್ಲಿದ್ದು, ಹಾಗೂ ಮೋರ್ಬಿಯಲ್ಲೂ ಬಿಜೆಪಿ ಭಾರಿ ಮುನ್ನಡೆ ಗಳಿಸಿದೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಆಪ್‌ಗೆ ಬಿಜೆಪಿ ಫಂಡ್ ಮಾಡಿದೆ: ಸಿದ್ಧರಾಮಯ್ಯ
ಮೋರ್ಬಿ ಸೇತುವೆಯನ್ನು ಅಕ್ಟೋಬರ್ 26 ರಂದು ಸಾರ್ವಜನಿಕರಿಗೆ ಓಪನ್ ಮಾಡಲಾಗಿತ್ತು. ಸಾರ್ವಜನಿಕರಿಗೆ ಪ್ರವೇಶ ನೀಡಿದ ಐದೇ ದಿನಗಳಲ್ಲಿ ಈ ದುರಂತ ಸಂಭವಿಸಿತ್ತು. ನವೀಕರಣ ಕಾರ್ಯಕ್ಕೆ 2 ಕೋಟಿ ರೂ. ಖರ್ಚು ಮಾಡಿ, ಫಿಟ್‌ನೆಸ್ ಪ್ರಮಾಣ ಪತ್ರ ಪಡೆಯದಿದ್ದರೂ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದು ನೂರಾರು ಜನರ ಪ್ರಾಣಪಕ್ಷಿ ಹಾರಿ ಹೋಗಲು ಕಾರಣವಾಗಿದೆ. ಆದರೂ, ಗುಜರಾತ್ ಹಾಗೂ ಮೋರ್ಬಿಯಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಗೆಲುವಿನತ್ತ ಬಿಜೆಪಿ ನಾಗಾಲೋಟ: ಹಲವೆಡೆ ಸಂಭ್ರಮಾಚರಣೆ ಶುರು