Asianet Suvarna News Asianet Suvarna News

Gujarat Election: ಮೊದಲ ಹಂತದ ಪ್ರಚಾರ ಮುಕ್ತಾಯ, 89 ಕ್ಷೇತ್ರಗಳಿಗೆ ಡಿ.1ಕ್ಕೆ ಚುನಾವಣೆ!

ದೇಶದ ಬಹುನಿರೀಕ್ಷಿತ ಗುಜರಾತ್‌ ರಾಜ್ಯವು ವಿಧಾನಸಭೆ ಚುನಾವಣೆಗೆ ಅಣಿಯಾಗಿದೆ. ಮೊದಲ ಹಂತದ ಚುನಾವಣೆಗೆ ಪ್ರಚಾರ ಕಾರ್ಯ ಮಂಗಳವಾರ ಅಂತ್ಯವಾಗಿದೆ. ಒಟ್ಟು 89 ಕ್ಷೇತ್ರಗಳಿಗೆ ಡಿಸೆಂಬರ್‌ 1 ರಂದು ಮತದಾನ ನಡೆಯಲಿದೆ.

Gujarat Election Campaigning for first phase Ends Voting on 89 seats on December 1 san
Author
First Published Nov 29, 2022, 8:31 PM IST

ಅಹಮದಾಬಾದ್‌ (ನ.29): ತೀವ್ರ ಕುತೂಹಲ ಕೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ ವಿಧಾನಸಭೆಯ ಮೊದಲ ಹಂತಕ್ಕೆ ಮಂಗಳವಾರ ಪ್ರಚಾರ ಕಾರ್ಯ ಅಂತ್ಯವಾಗಿದೆ. ಡಿಸೆಂಬರ್‌ 1 ರಂದು ಒಟ್ಟು 89 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಂಗಳವಾರ ಸಂಜೆ 5 ಗಂಟೆಗೆ ಪ್ರಚಾರ ಕಾರ್ಯ ಮುಕ್ತಾಯವಾಗಿದೆ. ಮೊದಲ ಹಂತದಲ್ಲಿ 89 ಕ್ಷೇತ್ರಗಳಲ್ಲಿ ನಡೆಯುವ ಮತದಾನದಲ್ಲಿ 788 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ವೇಳೆ ಗುಜರಾತ್‌ ರಾಜಕೀಯ ಪ್ರಮುಖ ಕ್ಷೇತ್ರಗಳಾದ ಮೊರ್ಬಿ, ಕಚ್‌, ರಾಜ್‌ಕೋಟ್‌, ಪೋರ್‌ಬಂದರ್‌ ಹಾಗೂ ಜುನಾಗಢ್‌ನಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 19 ಜಿಲ್ಲೆಗಳಲ್ಲಿ ನಡೆಯಲಿರುವ ಮತದಾನದಲ್ಲಿ 2 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷ ಎಲ್ಲಾ 89 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಆಮ್‌ ಆದ್ಮಿ ಪಾರ್ಟಿ 88 ಕ್ಷೇತ್ರಗಳಲ್ಲಿ ಹಾಗೂ ಬಹುಜನ ಸಮಾಜವಾದಿ ಪಾರ್ಟಿ 57 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಇನ್ನೊಂದೆಡೆ ಅಸಾದುದ್ದೀನ್‌ ಓವೈಸಿ ಅವರ ಎಐಎಂಐಎಂ ಪಕ್ಷ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರವೇ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

20 ದಿನಗಳಲ್ಲಿ ಬಿಜೆಪಿಯಿಂದ 160 ಸಾರ್ವಜನಿಕ ಸಮಾವೇಶ: ಯಾವುದೇ ಕಾರಣಕ್ಕೂ ಗುಜರಾತ್‌ನಲ್ಲಿ ಅಧಿಕಾರ ತಪ್ಪಿ ಹೋಗಬಾರದು ಎನ್ನುವ ಎಚ್ಚರಿಕೆಯಲ್ಲಿದ್ದ ಬಿಜೆಪಿ ಕಳೆದ 20 ದಿನಗಳಲ್ಲಿ ಅಂದಾಜು 160 ಸಾರ್ವಜನಿಕ ಸಮಾವೇಶಗಳನ್ನು ಮಾಡಿದೆ. ಚುನಾವಣಾ ಪ್ರಚಾರ ಕಾರ್ಯದ ಅಂತಿಮ ದಿನ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮೂರು ಜಿಲ್ಲೆಗಳಲ್ಲಿ ನಾಲ್ಕು ಸಮಾವೇಶಗಳಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಭವನಗರದಲ್ಲಿ ರೋಡ್‌ ಶೋ ನಡೆಸಿದರೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾಂಡ್ವಿ ಹಾಗೂ ಗಾಂಧಿಧಾಮದಲ್ಲಿ ಪ್ರಚಾರದಲ್ಲಿ ಭಾಗಿಯಾದರು. ಮೊದಲ ಹಂತದ ಚುನಾವಣೆಯ 19 ಜಿಲ್ಲೆಯಲ್ಲಿ ಬಿಜೆಪಿ ಅಂದಾಜು 160 ಸಾರ್ವಜನಿಕ ಸಮಾವೇಶ, ರ್ಯಾಲಿ ಹಾಗೂ ರೋಡ್‌  ಶೋಗಳನ್ನು ಕಳೆದ 20 ದಿನಗಳಲ್ಲಿ ಮಾಡಿದೆ.

ಗುಜರಾತ್‌ನಲ್ಲಿ ಒಟ್ಟು 182 ಕ್ಷೇತ್ರಗಳಿದ್ದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್‌ 1 ರಂದು 89 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದರೆ, ಡಿಸೆಂಬರ್‌ 5 ರಂದು 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್‌ 8 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಅದರೊಂದಿಗೆ ಹಿಮಾಚಲ ಪ್ರದೇಶಕ್ಕೂ ನಡೆದಿರುವ ಚುನಾವಣೆಗ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಬಾರಿ ಗುಜರಾತ್‌ನಲ್ಲಿ 4.6 ಲಕ್ಷ ಮಂದಿ ಹೊಸ ಮತದಾರರು ಮತ ಹಾಕಲಿದ್ದಾರೆ. ಪ್ರಸ್ತುತ ಇರುವ ಗುಜರಾತ್‌ ವಿಧಾನಸಭೆಯ ಅವಧಿ 2023ರ ಫೆಬ್ರವರಿ 18ರಂದು ಮುಕ್ತಾಯವಾಗಲಿದೆ.

Gujarat Elections 2022: ಯಾವ್ಯಾವ ವಯಸ್ಸಿನ ಮತದಾರರ ಒಲವು ಯಾವ ಪಕ್ಷದತ್ತ ಇದೆ ನೋಡಿ..

ಯಾರೆಲ್ಲಾ ಮುಖ್ಯಮಂತ್ರಿ ಅಭ್ಯರ್ಥಿಗಳು: ಪ್ರಸ್ತುತ ಇರುವ ಮಾಹಿತಿಯ ಪ್ರಕಾರ, ಭೂಪೇಂದ್ರ ಪಟೇಲ್‌ ಗುಜರಾತ್‌ನಲ್ಲಿ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್‌ ಪಾಟೀಲ್‌ ಕೂಡ ಈ ಬಾರಿ ಚುನಾವಣೆಯಲ್ಲಿ ಭೂಪೇಂದ್ರ ಪಟೇಲ್‌ ಅವರೇ ಸಿಎಂ ಅಭ್ಯರ್ಥಿ, ಸಿಎಂ ಯಾವುದೇ ಕಾರಣಕ್ಕೂ ಬದಲಾಗೋದಿಲ್ಲ ಎಂದಿದ್ದಾರೆ. ಬಿಜೆಪಿಯೊಂದಿಗೆ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಾರ್ಟಿ ಕೂಡ ರೇಸ್‌ನಲ್ಲಿದೆ. ಕಾಂಗ್ರೆಸ್‌ನಿಂದ ಭರತ್‌ ಸೋಳಂಕಿ, ಅರ್ಜುನ್‌ ಮೋಧ್‌ವಾಡಿಯಾ ಹಾಗೂ ಶಕ್ತಿಸಿನ್ಹ ಗೋಹಿಲ್‌ ಸಿಎಂ ಆಗುವ ರೇಸ್‌ನಲ್ಲಿದ್ದರೆ, ಆಮ್‌ ಆದ್ಮಿ ಪಕ್ಷದಿಂದ ಜನಮತದಲ್ಲಿ ಇಸುದನ್ ಗಢ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

Asianet News Gujarat Pre Poll Survey: ಬಿಜೆಪಿಗೆ ಪಟೇಲರೇ ಶಕ್ತಿ, ಕಾಂಗ್ರೆಸ್‌ಗೆ ಮುಸ್ಲಿಮರ ಬಲ!

ಒಟ್ಟು 4.90 ಕೋಟಿ ಮತದಾರರು:  ಗುಜರಾತ್‌ನಲ್ಲಿ ಒಟ್ಟು 4.90 ಕೋಟಿ ಮತದಾರರಿದ್ದಾರೆ. ಇದಲ್ಲಿ ಮೊದಲ ಬಾರಿಗೆ ಮತ ಹಾಕುತ್ತಿರುವ ವ್ಯಜ್ತಿಗಳು 4.6 ಲಕ್ಷ. ಗುಜರಾತ್‌ನಲ್ಲಿ ಒಟ್ಟು  2.53 ಕೋಟಿ ಪುರುಷ ಮತದಾರರಿದ್ದರೆ, 2.37 ಕೋಟಿ ಮಹಿಳಾ ಮತದಾರರಿದ್ದಾರೆ. ಬಹುಮತಕ್ಕಾಗಿ 91 ಕ್ಷೇತ್ರಗಳಲ್ಲಿ ಪಕ್ಷಗಳು ಗೆಲ್ಲಬೇಕಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 99 ಸೀಟ್‌ಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್‌ 77 ಸೀಟ್‌ಗಳಲ್ಲಿ ಗೆದ್ದಿತ್ತು. ಇತರರು 6 ಸೀಟ್‌ ಗೆದ್ದಿದ್ದರು. 

Follow Us:
Download App:
  • android
  • ios