Gujarat Assembly Elections: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ದಾಖಲೆಯ ಬಹುಮತ, ಮತ್ತೆ ಅಧಿಕಾರಕ್ಕೆ..!
ಬಿಜೆಪಿಗೆ 2022ರ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಬಹುಮತ ಲಭಿಸಲಿದೆ ಎಂದು ಹೇಳಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ 34 - 51 ಹಾಗೂ ಎಎಪಿಗೆ ಕೇವಲ 6 ರಿಂದ 13 ಸ್ಥಾನಗಳು ಸಿಗಲಿದೆ. ಹಾಗೂ, ಇತರರಿಗೆ ಶೂನ್ಯ ಸ್ಥಾನ ಎಂದು ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಹೇಳುತ್ತದೆ.
ಇಡೀ ದೇಶದ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ (Gujarat Assembly Elections) ಮತ್ತೆ ಬಿಜೆಪಿ (BJP) ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆ (Exit Polls) ಹೇಳಿದೆ. ಡಿಸೆಂಬರ್ 5, 2022ರ ಸಂಜೆ 6 ಗಂಟೆಯ ನಂತರ ಪ್ರಕಟವಾದ ಜನ್ ಕೀ ಬಾತ್ (Jan Ki Baat) ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ 117ರಿಂದ 140 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ. ಈ ಮೂಲಕ ಬಿಜೆಪಿಗೆ 2022ರ ವಿಧಾನಸಭೆ ಚುನಾವಣೆಯಲ್ಲಿ (Gujarat Elections 2022) ದಾಖಲೆಯ ಬಹುಮತ ಲಭಿಸಲಿದೆ ಎಂದು ಹೇಳಿದೆ. ಅಲ್ಲದೆ, ಕಾಂಗ್ರೆಸ್ (Congress) ಪಕ್ಷಕ್ಕೆ 34 - 51 ಹಾಗೂ ಎಎಪಿಗೆ (AAP) ಕೇವಲ 6 ರಿಂದ 13 ಸ್ಥಾನಗಳು ಸಿಗಲಿದೆ. ಹಾಗೂ, ಇತರರಿಗೆ 1 ರಿಂದ 2 ಸ್ಥಾನ ಎಂದು ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಹೇಳುತ್ತದೆ. ಇಂದು ಗುಜರಾತ್‌ನಲ್ಲಿ ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆದಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಇನ್ನು, ಇದೇ ರೀತಿ, ರಿಪಬ್ಲಿಕ್ - ಪಿ ಮಾರ್ಕ್ (Republic P - Marq) ಚುನಾವಣೋತ್ತರ ಸಮೀಕ್ಷೆಯಲ್ಲೂ ಸಹ ಗುಜರಾತ್‌ನಲ್ಲಿ ಮತ್ತೆ ಕಮಲ ಅರಳಲಿದೆ ಎಂದು ಹೇಳಿದೆ. ಬಿಜೆಪಿ - 128 ರಿಂದ 148, ಕಾಂಗ್ರೆಸ್ - 30 ರಿಂದ 42 ಹಾಗೂ ಎಎಪಿ - 2 ರಿಂದ 10 ಸ್ಥಾನಗಳನ್ನು ಗೆಲ್ಲಲಿದೆ. ಹಾಗೆ, 0 - 3 ಸ್ಥಾನಗಳು ಇತರರ ಪಾಲಾಗಲಿದೆ ಎಂದೂ ಹೇಳಿದೆ.
ಇದನ್ನು ಓದಿ: Himachal Pradesh Exit Polls ಹಿಮಾಚಲದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ!
ಎಬಿಪಿ - ಸಿ ವೋಟರ್ ಎಕ್ಸಿಟ್ ಪೋಲ್‌ನಲ್ಲಿ ಸಹ ಗುಜರಾತ್‌ನಲ್ಲಿ ಬಿಜೆಪಿಯೇ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ. ಬಿಜೆಪಿ 134 ಸ್ಥಾನ ಪಡೆದುಕೊಳ್ಳಬಹುದು ಎಂದು ಈ ಚುನಾವಣೋತ್ತರ ಸಮೀಕ್ಷೆ ಹೇಳಿದರೆ, ಕಾಂಗ್ರೆಸ್ 37 ಹಾಗೂ ಎಎಪಿಗೆ 7 ಸ್ಥಾನ ಲಭಿಸಲಿದೆ ಹಾಗೂ 4 ಸ್ಥಾನಗಳು ಇತರೆ ಪಾಲಾಗಲಿದೆ ಎಂದು ಪ್ರಕಟಿಸಿದೆ.
ಹಾಗೂ, ಟಿವಿ 9 - ಭಾರತ್ ವರ್ಷ್ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ 125 ರಿಂದ 130 ಸ್ಥಾನಗಳು ಸಿಗಲಿದೆ ಹಾಗೂ ಕಾಂಗ್ರೆಸ್‌ಗೆ 40 ರಿಂದ 50 ಸ್ಥಾನ ಹಾಗೂ ಆಪ್‌ಗೆ 3 ರಿಂದ 5 ಸ್ಥಾನ ದೊರೆಯಲಿದೆ ಎಂದು ಭವಿಷ್ಯ ನುಡಿದಿದೆ.
ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ಸಹ ಬಿಜೆಪಿಗೆ ಬಹುಮತ ನೀಡಿದೆ. ಬಿಜೆಪಿ 150 ಪ್ಲಸ್ ಅಥವಾ ಮೈನಸ್ 11 ಸೀಟುಗಳನ್ನು ಪಡೆಯಲಿದ್ದು, ಇನ್ನು ಕಾಂಗ್ರೆಸ್ 19 ಪ್ಲಸ್ ಅಥವಾ ಮೈನಸ್ 9 ಸೀಟುಗಳನ್ನು ಪಡೆಯಲಿದೆ. ಅಲ್ಲದೆ, ಆಪ್ 11 ಪ್ಲಸ್ ಅಥವಾ ಮೈನಸ್ 7 ಹಾಗೂ ಇತರೆ 2 ಪ್ಲಸ್ ಅಥವಾ ಮೈನಸ್ 2 ಸೀಟುಗಳನ್ನು ಪಡೆಯಲಿದೆ ಎಂದು ಅಂದಾಜು ಮಾಡಿದೆ.
ಇದನ್ನೂ ಓದಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ, ಬಿಜೆಪಿಗೆ ಸೋಲು, ಆಪ್‌ಗೆ ಅಧಿಕಾರ!
ಒಟ್ಟಾರೆ, ಗುಜರಾತ್‌ನಲ್ಲಿ ಸತತ 7ನೇ ಬಾರಿ ಕಮಲ ಅರಳಲಿದ್ದು, ಪ್ರಧಾನಿ ಮೋದಿ ಮ್ಯಾಜಿಕ್ ಮತ್ತೆ ವರ್ಕ್ ಆಗಿದೆ ಎಂದು ಹೇಳಬಹುದು. ಅಲ್ಲದೆ, ಗುಜರಾತ್‌ನಲ್ಲಿ ಈ ಬಾರಿ ಎಎಪಿ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಲಿದೆ ಎಂದು ಹಲವರು ಊಹಿಸಿದ್ದರು. ಆದರೆ, ಎಎಪಿಗೆ ಈ ಬಾರಿ 3ನೇ ಸ್ಥಾನ ಪಡೆಯಲಿದ್ದು, ಕಾಂಗ್ರೆಸ್‌ಗೆ 2ನೇ ಸ್ಥಾಣ ಸಿಗಲಿದೆ ಎಂದು ಊಹೆ ಮಾಡಬಹುದು.
ಇದೇ ರೀತಿ, ಹಿಮಾಚಲ ಪ್ರದೇಶ ವಿಧಾನಸಭೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಹಿಡಿಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಆದರೆ, ದೆಹಲಿ ಪಾಲಿಕೆಯಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ ಈ ಬಾರಿ ಅಧಿಕಾರ ಕಳೆದುಕೊಳ್ಳಲಿದ್ದು, ಎಎಪಿಗೆ ಬಹುಮತ ದೊರೆಯಲಿದೆ ಎಂದು ಭವಿಷ್ಯ ನುಡಿದಿವೆ.