ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರ ಮರುಪರಿಶೀಲನೆ ನಡೆಸುತ್ತಿದೆ. ಆದಾಯ ತೆರಿಗೆ ಪಾವತಿಸುವ 6,380 ಮಂದಿಯನ್ನು ಗುರುತಿಸಲಾಗಿದ್ದು, ಈಗಾಗಲೇ ಮೃತಪಟ್ಟ 5,243 ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.

ಕಾರವಾರ (ಜೂ.11): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯಡಿ ಆರ್ಥಿಕವಾಗಿ ಸದೃಢರಾಗಿದ್ದರೂ ಪ್ರತಿ ತಿಂಗಳು ₹2,000 ಪಡೆಯುತ್ತಿರುವವರಿಗೆ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದಾಯ ತೆರಿಗೆ ಪಾವತಿಸುವ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಫಲಾನುಭವಿಗಳ ಮರುಪರಿಶೀಲನಾ ಕಾರ್ಯ ಭರದಿಂದ ಸಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆ ಜಾರಿಯಾದಾಗಿನಿಂದ ಜಿಲ್ಲೆಯ ಲಕ್ಷಾಂತರ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 3,38,806 ಮಂದಿ ಗೃಹಲಕ್ಷ್ಮಿ ಯೋಜನೆಯ ಅಧಿಕೃತ ಫಲಾನುಭವಿಗಳಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಪ್ರಾಥಮಿಕ ಪರಿಶೀಲನೆಯಲ್ಲಿ, ಈ ಪೈಕಿ ಬರೋಬ್ಬರಿ 6,380 ಫಲಾನುಭವಿಗಳು ಆದಾಯ ತೆರಿಗೆ ಪಾವತಿದಾರರಾಗಿರುವುದು ಪತ್ತೆಯಾಗಿದೆ.

ಆದಾಯ ತೆರಿಗೆ ಪಾವತಿಸುವ ಈ 6 ಸಾವಿರಕ್ಕೂ ಅಧಿಕ ಮಂದಿಯ ಪಟ್ಟಿಯನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಬರುವ ಖಚಿತ ವರದಿ ಹಾಗೂ ಮಾಹಿತಿಯ ಆಧಾರದ ಮೇಲೆ ಅನರ್ಹರನ್ನು ಯೋಜನೆಯಿಂದ ಅಧಿಕೃತವಾಗಿ ಕೈಬಿಡುವ ಕಾರ್ಯ ನಡೆಯಲಿದೆ. ಸದ್ಯಕ್ಕೆ ಪರಿಶೀಲನೆ ಹಂತದಲ್ಲಿರುವುದರಿಂದ ಈ ಪಟ್ಟಿಯಲ್ಲಿರುವ ಯಾರನ್ನೂ ಯೋಜನೆಯಿಂದ ರದ್ದು ಮಾಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಐಟಿ ಪಾವತಿದಾರರ ಪಟ್ಟಿಯಲ್ಲಿರುವ ಕೆಲ ಫಲಾನುಭವಿಗಳು, ನಾವು ಈ ಹಿಂದೆ ಆದಾಯ ತೆರಿಗೆ ಪಾವತಿಸುತ್ತಿದ್ದೆವು. ಆದರೆ ಈಗ ಪಾವತಿಸುತ್ತಿಲ್ಲ. ಹೀಗಾಗಿ ನಮ್ಮನ್ನು ಯೋಜನೆಯಿಂದ ಕೈಬಿಡಬಾರದು ಎಂದು ಇಲಾಖೆಗೆ ಮಾಹಿತಿ ಒದಗಿಸಿ, ಮನವಿ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಮತ್ತೊಂದೆಡೆ, ಮೃತರ ಹೆಸರಿನಲ್ಲೂ ಯೋಜನೆಯ ಹಣ ಜಮಾವಣೆ ಆಗುತ್ತಿರುವುದಕ್ಕೆ ಇಲಾಖೆ ಬ್ರೇಕ್ ಹಾಕಿದೆ.

ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದ 5,243 ಮಂದಿ ಮೃತ ಫಲಾನುಭವಿಗಳನ್ನು ಇಲಾಖೆ ಈಗಾಗಲೇ ಗುರುತಿಸಿದ್ದು, ಅವರ ಹೆಸರನ್ನು ಯೋಜನೆಯಿಂದ ಶಾಶ್ವತವಾಗಿ ಕೈಬಿಡಲಾಗಿದೆ ಎಂದು ಅಧಿಕಾರಿಗಳು "ಕನ್ನಡಪ್ರಭ"ಕ್ಕೆ ಮಾಹಿತಿ ನೀಡಿದ್ದಾರೆ.

ತೆರಿಗೆ ಪಾವತಿಸುವವರ ಪಟ್ಟಿಯನ್ನು ಇಲಾಖೆಗೆ ಕಳಿಹಿಸಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಅಧಿಕೃತ ಮಾಹಿತಿ ಲಭಿಸಿದ ತರುವಾಯ ಅನರ್ಹರನ್ನು ಯೋಜನೆಯಿಂದ ಅಧಿಕೃತವಾಗಿ ಕೈಬಿಡಲಾಗುವುದು.

ಪದ್ಮಾವತಿ ಜಿ. ಸೌಂದ್ರಿ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ