ಬಳ್ಳಾರಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ 4,225 ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆದಾಯ ತೆರಿಗೆ ಪಾವತಿದಾರರು ಮತ್ತು ಮೃತಪಟ್ಟವರ ಹೆಸರಿನಲ್ಲಿ ಹಣ ಬಿಡುಗಡೆಯಾಗುತ್ತಿರುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರಿಶೀಲನೆ ವೇಳೆ ಪತ್ತೆಹಚ್ಚಲಾಗಿದೆ.

ವಿಶೇಷ ವರದಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳ್ಳಾರಿ (ಜೂ.11): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 4,225 ಅನರ್ಹ ಫಲಾನುಭವಿಗಳನ್ನು ಕೈಬಿಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಪರಿಶೀಲನೆಯಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಅನರ್ಹರು ಇರುವುದು ಪತ್ತೆಯಾಗಿದ್ದು, ಈ ಎಲ್ಲರನ್ನೂ ಯೋಜನೆಯ ಪಟ್ಟಿಯಿಂದ ಕೈಬಿಡಲಾಗಿದೆ.

ಮೃತರ ಖಾತೆಗೂ ಗೃಹಲಕ್ಷ್ಮಿ ಹಣ

ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಫಲಾನುಭವಿಗಳ ಪೈಕಿ ದೊಡ್ಡ ಸಂಖ್ಯೆಯಲ್ಲಿ ಶ್ರೀಮಂತರು ಇದ್ದು ಅವರ ಖಾತೆಗೆ ನಿರಂತರ ಪ್ರತಿ ತಿಂಗಳು ₹2 ಸಾವಿರ ಪಾವತಿಯಾಗುತ್ತಿದೆ. ಏತನ್ಮಧ್ಯೆ ಮೃತಪಟ್ಟವರ ಖಾತೆಗೂ ಹಣ ಸಂದಾಯವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಂಗನವಾಗಿ ಕಾರ್ಯಕರ್ತೆಯರಿಂದ ಮನೆಮನೆ ಪರಿಶೀಲನೆ ನಡೆಸಿದ ಬಳಿಕ ಗಣಿ ಜಿಲ್ಲೆ ಬಳ್ಳಾರಿಯಲ್ಲಿ 4,225 ಜನರು ಅನರ್ಹರು ಎಂದು ಬೆಳಕಿಗೆ ಬಂದಿದೆ.

ತೆರಿಗೆ ಪಾವತಿದಾರರಿಗೂ ಗೃಹಲಕ್ಷ್ಮಿ ಹಣ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಡೆಸಿದ ದಾಖಲೆಗಳ ಪರಿಶೀಲನೆಯಲ್ಲಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದವರ ಪೈಕಿ 3,921 ಮಂದಿ ಆದಾಯ ತೆರಿಗೆ ಪಾವತಿದಾರರು ಎಂಬುದು ಪತ್ತೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ನಿಯಮಾವಳಿಗಳ ಪ್ರಕಾರ ಆದಾಯ ತೆರಿಗೆ ಪಾವತಿದಾರರು ಯೋಜನೆಗೆ ಅರ್ಹರಲ್ಲ. ಇದರ ಜತೆಗೆ 304 ಮಂದಿ ಫಲಾನುಭವಿಗಳು ಈಗಾಗಲೇ ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಯೋಜನೆಯ ಹಣ ಬಿಡುಗಡೆ ಆಗುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟು 4,225 ಮಂದಿಯನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಅನರ್ಹರನ್ನು ಡಿಲಿಟ್ ಮಾಡಿಸುವ ಕೆಲಸ ನಡೆದಿದೆ ಎಂದು ಇಲಾಖೆ ಅಧಿಕಾರಿಗಳು ಕನ್ನಡಪ್ರಭ ಕ್ಕೆ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಲಾಖೆ ಅಧಿಕಾರಿಗಳು, ಅನರ್ಹರನ್ನು ಪತ್ತೆ ಮಾಡಿ ಯೋಜನೆ ಪಟ್ಟಿಯಿಂದ ತೆಗೆದು ಹಾಕುತ್ತಿರುವುದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಹಾಗೂ ವರ್ಷಕ್ಕೆ ಕೋಟ್ಯಂತರ ರುಪಾಯಿ ಉಳಿತಾಯವಾಗುವ ನಿರೀಕ್ಷೆಯಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಖಜಾನೆಯ ಮೇಲೆ ಹೆಚ್ಚುತ್ತಿರುವ ಆರ್ಥಿಕ ಒತ್ತಡಕ್ಕೂ ಮುಕ್ತಿ ದೊರೆತಂತಾಗಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ನೆರವು ನೀಡಲಾಗುತ್ತಿದೆ. ಯೋಜನೆ ಆರಂಭವಾದ ಬಳಿಕ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಬಲ ನೀಡಿದರೂ, ಕೆಲ ಅನರ್ಹರು ಹಾಗೂ ದಾಖಲೆಗಳಲ್ಲಿ ಉಳಿದಿರುವ ಮೃತರ ಹೆಸರಿನಲ್ಲಿ ಸಹ ಸೌಲಭ್ಯ ಮುಂದುವರಿದಿರುವುದು ಆಡಳಿತಾತ್ಮಕ ಲೋಪಗಳತ್ತ ಬೆರಳು ತೋರಿಸಿದೆ.

ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿ 2,94,857 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯೋಜನೆಯ ಪಾರದರ್ಶಕತೆ ಕಾಪಾಡಲು ಹಾಗೂ ನಿಜವಾದ ಅರ್ಹರಿಗೆ ಸೌಲಭ್ಯ ತಲುಪಿಸಲು ಮುಂದಿನ ದಿನಗಳಲ್ಲಿಯೂ ನಿರಂತರ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನರ್ಹರನ್ನು ಹೊರಗಿಡುವ ಮೂಲಕ ಸರ್ಕಾರದ ವೆಚ್ಚ ನಿಯಂತ್ರಣಕ್ಕೆ ನೆರವಾಗಿರುವ ಈ ಕ್ರಮ, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೊಸ ಮಾದರಿಯಾಗುವ ಸಾಧ್ಯತೆ ಇದೆ.

ನಿರಂತರ ಪ್ರಕ್ರಿಯೆ: ಗೃಹಲಕ್ಷ್ಮಿ ಯೋಜನೆಯಲ್ಲಿ ಅನರ್ಹರನ್ನು ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆ ನಡೆದಿದೆ. ಇದು ನಿರಂತರವಾದ ಪ್ರಕ್ರಿಯೆಯಾಗಿದ್ದು ಮೃತರ ಖಾತೆಗೆ ಸಂದಾಯ ಹಣವನ್ನು ಸರ್ಕಾರಕ್ಕೆ ವಾಪಸ್ ಕಳಿಸುವ ಕೆಲಸ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಮಕೃಷ್ಣ ನಾಯಕ ಹೇಳಿದರು