. 15) ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಗಳರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮತ್ತು ಕರಗವನ್ನು ವಿಜೃಂಭಣೆಯಿಂದ ಆಚರಿಸಲು ಮುಂಗಡಪತ್ರದಲ್ಲಿ ಹಣ ಮೀಸಲಿಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.

ಬೆಂಗಳೂರು (ಮಾ. 15) ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಗಳರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮತ್ತು ಕರಗವನ್ನು ವಿಜೃಂಭಣೆಯಿಂದ ಆಚರಿಸಲು ಮುಂಗಡಪತ್ರದಲ್ಲಿ ಹಣ ಮೀಸಲಿಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.

ಮಂಗಳವಾರ ನಗರದ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದ್ದ ತಿಗಳರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ತಿಗಳ ಸಮುದಾಯ(Tigalara community) ಹಿಂದುಳಿದ ಸಮುದಾಯವೆಂದು ಭಾವಿಸಬಾರದು. ಕಾಂಗ್ರೆಸ್‌ ಪಕ್ಷ ಎಂದೆಂದಿಗೂ ಈ ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದೆ. ನಿಗಮ ಸ್ಥಾಪನೆ ಮತ್ತು ಕರಗಕ್ಕೆ ಅನುದಾನ ನೀಡುವ ಕುರಿತು ಅರ್ಜಿ ತಂದು ಪ್ರಣಾಣಿಕೆ ಸಮಿತಿ ಅಧ್ಯಕ್ಷರಾದ ಪರಮೇಶ್ವರ ಅವರಿಗೆ ನೀಡಿ. ನಮ್ಮ ಪ್ರಣಾಳಿಕೆಯಲ್ಲಿ ಈ ಅಂಶಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಹೇಳಿದರು.

ಸೋಮಣ್ಣ ಕಾಂಗ್ರೆಸ್‌ಗೆ ಬರ್ತೀನಿ ಅಂದಿಲ್ಲ, ನಾನೂ ಕರೆದಿಲ್ಲ: ಡಿಕೆಶಿ

ನಾವು ಮಾತು ಕೊಡುವುದು ಮುಖ್ಯವಲ್ಲ. ಕೊಟ್ಟಮಾತು ಉಳಿಸಿಕೊಂಡು ಹೋಗುವುದು ಮುಖ್ಯ. ತಿಗಳರ ಸಮಾಜ ಪಾಂಡವರ ವಂಶಸ್ಥರು ಎಂದು ಹೆಸರು ಬಂದಿದೆ. ಇದು ನಮ್ಮ ಧರ್ಮ ಹಾಗೂ ಸಂಸ್ಕೃತಿಯಲ್ಲಿ ಈ ಸಮಾಜಕ್ಕೆ ಸಿಕ್ಕಿರುವ ಗುರುತು. ತಿಗಳ ಸಮುದಾಯದವರು ಧೈರ್ಯವಂತರು ಹಾಗೂ ನಂಬಿಕಸ್ಥರು ಎಂದ ಅವರು, ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರ ಕಾಲದಲ್ಲಿ ಸಿದ್ದಗಂಗಯ್ಯ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಯಿತು. ದೇವರಾಜ ಅರಸು ಅವರ ಕಾಲದಲ್ಲಿ ಈ ಸಮಾಜದವರಿಗ ಭೂಮಿ ನೀಡಲಾಯಿತು. ಮಾಜಿ ಮೇಯರ್‌ ಪಿ.ಆರ್‌.ರಮೇಶ್‌ ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ಆದರೆ ಈ ಸಮಾಜವನ್ನು ಬಿಜೆಪಿಯಾಗಲಿ, ದಳದವರಾಗಲಿ ಗುರುತಿಸಿಲ್ಲ ಎಂದರು.

ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಬೆಂಗಳೂರಿನಲ್ಲಿ 20 ಕ್ಷೇತ್ರ, ರಾಜ್ಯದಲ್ಲಿ 140 ಕ್ಷೇತ್ರಗಳಲ್ಲಿ ಗೆಲ್ಲುವ ವರದಿ ಬಂದಿವೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಒಂದು ಜನಪರ ಯೋಜನೆ ಮಾಡಲಿಲ್ಲ. ಈ ಸರ್ಕಾರಕ್ಕೆ ಶೇ.40 ಸರ್ಕಾರ ಎಂದು ಹೆಸರು ಕೊಟ್ಟವರು ಯಾರು? ಬೊಮ್ಮಾಯಿ ಅವರು ಇದಕ್ಕೆ ಸಾಕ್ಷಿ ಕೇಳುತ್ತಿದ್ದರು. ಮಾಡಾಳು ವಿರುಪಾಕ್ಷಪ್ಪ ಸಾಕ್ಷಿ ಕೊಟ್ಟಿದ್ದಾರೆ. ನೀವೆಲ್ಲರೂ ಬೆಂಗಳೂರು ಬೆಳೆಸಿ ಒಂದು ಕೀರ್ತಿ ತಂದಿದ್ದೀರಿ. ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಹಾಗೂ ಬೆಂಗಳೂರಿಗೆ ಅಪಕೀರ್ತಿ ತಂದಿದ್ದಾರೆ.

ನಮ್ಮ ಪಕ್ಷ ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌, ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ಹಾಗೂ ಬಡ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ಪಕ್ಷ ಪ್ರಕಟಿಸಿದೆ. ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆಯುವ ಪಕ್ಷ. ಅದೇರೀತಿ ತಿಗಳರ ಸಮುದಾಯದ ಅಭಿವೃದ್ಧಿ ನಿಗಮ ಖಚಿತ ಎಂದು ಹೇಳಲು ಬಯಸುತ್ತೇನೆ.

ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಶಾಸಕರಾದ ಬೈರತಿ ಸುರೇಶ್‌, ಮಹಮದ್‌ ಹ್ಯಾರೀಸ್‌, ಆನೇಕಲ್‌ ಶಿವಣ್ಣ, ಮುಳಬಾಗಿಲು ಶಾಸಕ ಎಚ್‌.ನಾಗೇಶ್‌, ತಿಗಳರ ಸಮುದಾಯದ ಮುಖಂಡ ಪಿ.ಆರ್‌.ರಮೇಶ್‌, ಮಾಜಿ ಶಾಸಕರಾದ ಎಚ್‌.ಎಂ.ರೇವಣ್ಣ, ಲಿಂಗಣ್ಣ, ಉಮಾಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಧಾನಸಭೆ ಚುನಾವಣೆ ಹಿನ್ನೆಲೆ: ಮನೆ ಬಾಗಿಲಿಗೆ ನೀರು ಕೊಡುವ ಮೂಲಕ ಮತದಾರರ ಓಲೈಕೆಗೆ ಯತ್ನ

ಗೆಲ್ಲುವುದಾದರೆತಿಗಳರಿಗೆ ಟಿಕೆಟ್‌

ತಿಗಳ ಸಮುದಾಯದವರು ಇಂತಹ ಕ್ಷೇತ್ರ ಟಿಕೆಟ್‌ ಕೊಡಿ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ನನಗೆ ಮನವರಿಕೆ ಮಾಡಿ. ಗೆಲ್ಲುವುದಾದರೆ ನಾನು ಟಿಕೆಟ್‌ ಕೊಡುತ್ತೇವೆ. ನೆ.ಲ.ನರೇಂದ್ರಬಾಬು ಅವರನ್ನು ಬಾರಯ್ಯ ಅಂತ ಕರೆದೆ. ನಾನು ಇಲ್ಲೇ ಸೆಟಲ್‌ ಆಗಿದ್ದೇನೆ ಎಂದು ಹೇಳಿದ. ಅಲ್ಲಿಯೇ ಇರಲಿ. ಬೇರೆ ಯಾರಾದರೂ ಗೆಲ್ಲುವಂತ ಅಭ್ಯರ್ಥಿ ಇದ್ದರೆ ಹೇಳಿ ಟಿಕೆಟ್‌ ಕೊಡೋಣ. ನಿಮಗೆ ಶಕ್ತಿ ಕಾಂಗ್ರೆಸ್‌ ತುಂಬಲಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.