ಬೆಂಗಳೂರು (ಡಿ.07) :  ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಅಧಿಸೂಚನೆ ಸೋಮವಾರ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಈಗಾಗಲೇ ಹಳ್ಳಿಗಳಲ್ಲಿ ರಾಜಕೀಯ ಅಖಾಡ ಸಿದ್ಧಗೊಂಡಿದ್ದು, ಅಧಿಕೃತವಾಗಿ ಸೋಮವಾರ ನಾಮಪತ್ರ ಸಲ್ಲಿಕೆ ಪ್ರಾರಂಭವಾದ ನಂತರ ಮತ್ತಷ್ಟುರಂಗು ಪಡೆಯಲಿದೆ.

ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಆಯಾ ಜಿಲ್ಲಾಡಳಿತಗಳು ಗ್ರಾಪಂ ಪಂಚಾಯಿತಿ ಚುನಾವಣೆ ಅಧಿಸೂಚನೆ ಹೊರಡಿಸಲಿವೆ. ಅದರಂತೆ ರಾಜ್ಯದಲ್ಲಿ ಡಿ.22ರಂದು ಮೊದಲನೇ ಹಂತದಲ್ಲಿ 3,021 ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳು ಸೋಮವಾರದಿಂದ ಡಿ.11ರ ವರೆಗೆ ನಾಮಪತ್ರ ಸಲ್ಲಿಸಬಹುದುದಾಗಿದೆ. ಡಿ.12ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ.14ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ.

'ಕಾಂಗ್ರೆಸ್ ಅಂದ್ರೆ ವಿಷ.. ಹೇಗೆ ಕುಡಿದ್ರೂ ಸಾವು ಖಚಿತ, JDSಗೆ ಜಾಸ್ತಿನೆ ಕೊಟ್ಟಿದ್ರು' ...

ಈ ಮೊದಲು ರಾಜ್ಯ ಚುನಾವಣಾ ಆಯೋಗ ಘೋಷಿಸಿದ್ದ ಪ್ರಕಾರ, 2,930 ಗ್ರಾ.ಪಂ.ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಸುವುದಾಗಿ ತಿಳಿಸಿತ್ತು. ಬಳಿಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಸುವ 97 ಗ್ರಾ.ಪಂ. ಜೊತೆಗೆ ಎರಡನೇ ಹಂತದಲ್ಲಿ ನಡೆಸಬೇಕಿದ್ದ 112 ಗ್ರಾ.ಪಂ.ಗಳಿಗೂ ಮೊದಲ ಹಂತದಲ್ಲಿಯೇ ಚುನಾವಣೆ ನಡೆಸುವುದಾಗಿ ಘೋಷಿಸಿದೆ. ಇದರ ಜೊತೆಗೆ 2,930ರ ಪೈಕಿ 21 ಗ್ರಾ.ಪಂ.ಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಯಾಗಿರುವುದರಿಂದ ವಿವಿಧ ಜಿಲ್ಲೆಗಳ 21 ಗ್ರಾ.ಪಂ.ಗಳಿಗೆ ಚುನಾವಣೆ ಕೈಬಿಟ್ಟಿದೆ. ಹೀಗಾಗಿ, 2,930ರ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ 112 ಸೇರಿ ಒಟ್ಟಾರೆ 3,021 ಪಂಚಾಯಿತಿಗಳಿಗೆ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ.