ಜಿಪಂ, ತಾಪಂ ಕ್ಷೇತ್ರಗಳ ವಿಂಗಡಣೆ ಮಸೂದೆ ಪಾಸ್‌

* ಪಂಚಾಯತ್‌ ರಾಜ್‌ ಗಡಿ ನಿರ್ಣಯ ಆಯೋಗ ರಚನೆ
* ಪಂಚಾಯಿತಿ ಚುನಾವಣೆಗಳು ಮುಂದೂಡಿಕೆ ಸಂಭವ
* ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌, ಜೆಡಿಎಸ್‌ ವಿರೋಧದ ಮಧ್ಯೆಯೇ ಅಂಗೀಕಾರ
 

GP and TP Reallocation Bill Passed in Vidhanaparishat grg

ಬೆಂಗಳೂರು(ಸೆ.18): ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರ ತೀವ್ರ ವಿರೋಧ, ಆಕ್ಷೇಪ, ಸಭಾತ್ಯಾಗದ ನಡುವೆ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಲು ಪ್ರತ್ಯೇಕವಾದ ‘ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ’ ರಚಿಸುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕಕ್ಕೆ ಸರ್ಕಾರ ಧ್ವನಿಮತದ ಮೂಲಕ ಅಂಗೀಕಾರ ಪಡೆಯಿತು.

ವಿಧೇಯಕದ ಕುರಿತು ನಡೆದ ಚರ್ಚೆಯಲ್ಲಿ ‘ತಿದ್ದುಪಡಿ ವಿಧೇಯಕ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವ ತಂತ್ರವಾಗಿದೆ. ಸಂವಿಧಾನ ಬದ್ಧವಾಗಿ ಅಸ್ತಿತ್ವಕ್ಕೆ ಬಂದಿರುವ ಚುನಾವಣಾ ಆಯೋಗದ ಅಧಿಕಾರ ಮೊಟಕುಗೊಳಿಸಲು ಸರ್ಕಾರ ಮುಂದಾಗಿದೆ. ತಮಗೆ ಬೇಕಾದಂತೆ ಕ್ಷೇತ್ರಗಳ ಮರು ವಿಂಡಣೆ ಮಾಡಿಕೊಳ್ಳಲು ವಿಧೇಯಕ ಮಂಡಿಸಿದೆ. ಹಾಗಾಗಿ ವಿಧೇಯಕವನ್ನು ಹಿಂಪಡೆಯಬೇಕು’ ಎಂದು ಪ್ರತಿಪಕ್ಷಗಳ ಸದಸ್ಯರು ಪ್ರಬಲವಾಗಿ ಒತ್ತಾಯಿಸಿದರು. ಆದರೆ ಪ್ರತಿಪಕ್ಷಗಳ ಆರೋಪ, ಟೀಕೆಯನ್ನು ತಳ್ಳಿಹಾಕಿದ ಸರ್ಕಾರ ವಿಧೇಯಕದ ಅಗತ್ಯತೆಯನ್ನು ಸರ್ಕಾರ ಬಲವಾಗಿ ಸಮರ್ಥಿಕೊಂಡಿತು.

ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌, ಕಾಂಗ್ರೆಸ್‌ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌, ಕೆ. ಪ್ರತಾಪಚಂದ್ರಶೆಟ್ಟಿ, ಎಸ್‌. ರವಿ,ಜೆಡಿಎಸ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಭೋಜೇಗೌಡ, ರಮೇಶ್‌ಗೌಡ ಅವರು, 2003ರ ನಂತರ ಚುನಾವಣಾ ಆಯೋಗವೇ ಕ್ಷೇತ್ರಗಳ ಮರು ವಿಂಗಡಣೆ ಮಾಡುತ್ತಾ ಬಂದಿದೆ. ಈಗ ಯಾಕೆ ಆಯೋಗದ ಅಧಿಕಾರವನ್ನು ಸರ್ಕಾರ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಈಗಾಗಲೇ ಸಂವಿಧಾನ ಬದ್ಧ ಅನೇಕ ಸಂಸ್ಥೆಗಳನ್ನು ಸರ್ಕಾರಗಳು ದುರುಪಯೋಗ ಮಾಡುತ್ತಾ ಬಂದಿವೆ. ಈಗ ಅವುಗಳ ಅಧಿಕಾರವನ್ನೇ ಕಿತ್ತುಕೊಳ್ಳಲು ಮುಂದಾಗಿದೆ ಎಂದು ವಾಗ್ದಾಳಿ ಮಾಡಿದರು.

ಜಿಲ್ಲಾ, ತಾಲೂಕು ಪಂಚಾಯಿತಿ ಎಲೆಕ್ಷನ್ ಮುಂದೂಡಿಕೆಗೆ ಹೆಜ್ಜೆ ಇಟ್ಟ ಸರ್ಕಾರ

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕ್ಷೇತ್ರಗಳ ಮರುವಿಂಗಡಣೆ, ಮೀಸಲಾತಿ ಸಂಬಂಧ ಸುಮಾರು ಸಾವಿರಾರು ಆಕ್ಷೇಪಣೆಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಪರಿಶೀಲಿಸಲು ಚುನಾವಣಾ ಆಯೋಗ ಅಥವಾ ಹೈಕೋರ್ಟ್‌ಗಳಿಗೆ ಸಾಧ್ಯವಿಲ್ಲ. ಹಾಗಾಗಿ ಪ್ರತ್ಯೇಕವಾದ ಅಡ್‌ಹಾಕ್‌ ಆಗಿ ಆಯೋಗವನ್ನು ರಚಿಸುವ ಉದ್ದೇಶದಿಂದ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಪಂಚಾಯಿತಿ ಚುನಾವಣೆ ಮುಂದೂಡುವ ಉದ್ದೇಶದಿಂದ ಈ ವಿಧೇಯಕ ಮಂಡಿಸಿಲ್ಲ. ಎಲ್ಲ ಚುನಾವಣೆಗಳಲ್ಲೂ ನಮ್ಮ ಪಕ್ಷ ಗೆದ್ದಿದೆ. ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತೇವೆ. ನಮಗೆ ಯಾವುದೇ ಹೆದರಿಕೆ ಇಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ಚರ್ಚೆಯ ಮಧ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಪ್ರತಿಪಕ್ಷಗಳ ತೀವ್ರ ವಿರೋಧ, ಸಭಾತ್ಯಾಗದ ಮಧ್ಯೆ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕಾರ ಪಡೆದುಕೊಂಡರು. ವಿಧಾನಸಭೆಯಲ್ಲಿ ಈಗಾಗಲೇ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ದೊರೆತಿದೆ.
 

Latest Videos
Follow Us:
Download App:
  • android
  • ios