ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯಪಾಲರು ನಿರ್ಧರಿಸಿದ್ದರೂ, ಸರ್ಕಾರ ಸಿದ್ಧಪಡಿಸಿದ ಭಾಷಣ ವಾಚನದ ಬಗ್ಗೆ ಗೊಂದಲ ಮುಂದುವರಿದಿದೆ. ಕೇಂದ್ರ ಸರ್ಕಾರದ ನರೇಗಾ ರದ್ದತಿ ಮತ್ತು ಹೊಸ ಕಾಯ್ದೆಯ ಕುರಿತಾದ ವಿವಾದಿತ ಅಂಶಗಳನ್ನು ಓದುವ ಬಗ್ಗೆ ರಾಜ್ಯಪಾಲರು ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸುವ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಅಧಿವೇಶನದಲ್ಲಿ ಭಾಗಿಯಾಗುವ ಬಗ್ಗೆ ರಾಜಭವನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಅಧಿವೇಶನದಲ್ಲಿ ಅವರ ಭಾಗವಹಿಸುವಿಕೆ ಖಚಿತವಾಗಿರುವುದು ಸ್ಪಷ್ಟವಾಗಿದೆ. ಆದರೆ, ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರು ಭಾಷಣ ಮಾಡುವ ವಿಚಾರದಲ್ಲಿ ಇನ್ನೂ ಗೊಂದಲ ಮುಂದುವರಿದಿದೆ. ವಿಶೇಷವಾಗಿ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ವಿವಾದಿತ ಅಂಶಗಳನ್ನು ಓದಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ರಾಜ್ಯಪಾಲರು ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾಷಣ ವಾಚನದ ಕುರಿತು ರಾಜಭವನದ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ.
ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಕೆಲವು ವಿಷಯಗಳ ಕುರಿತಾಗಿ ಭಿನ್ನಾಭಿಪ್ರಾಯಗಳಿರುವ ಹಿನ್ನೆಲೆಯಲ್ಲಿ, ವಿವಾದಿತ ಅಂಶಗಳನ್ನು ಒಳಗೊಂಡ ಭಾಷಣವನ್ನು ಓದುವುದು ಸೂಕ್ತವೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದೇ ಕಾರಣಕ್ಕೆ ರಾಜ್ಯಪಾಲರು ಭಾಷಣ ಓದುವ ಕುರಿತು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ, ಅಧಿವೇಶನದಲ್ಲಿ ಭಾಗವಹಿಸುವ ಕುರಿತು ರಾಜ್ಯಪಾಲರ ತೀರ್ಮಾನ ಸ್ಪಷ್ಟವಾಗಿದ್ದರೂ, ಭಾಷಣ ವಾಚನದ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಲಾಗಿಲ್ಲ.
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದನ್ನು ರಾಜ್ಯಪಾಲರು ನಿರಾಕರಿಸಲು ಕಾರಣಗಳು ಏನು?
ಸರ್ಕಾರ ಸಿದ್ಧಪಡಿಸಿರುವ ಭಾಷಣ ಒಟ್ಟು 11 ಪ್ಯಾರಾಗಳನ್ನು ಒಳಗೊಂಡಿದ್ದು, ಅದರ ಪೈಕಿ 6 ಪ್ಯಾರಾಗಳು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹಾಗೂ ಅದನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಗೆ ಸಂಬಂಧಿಸಿದವು. ಈ ಪ್ಯಾರಾಗಳಲ್ಲಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಹಾಗೂ ಕಟುವಾದ ಪದಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದು ರಾಜ್ಯಪಾಲರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಭಾಷಣದ ಮೊದಲ ಪ್ಯಾರಾದಲ್ಲೇ,
“ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಯ್ದೆಯನ್ನು ಕೇಂದ್ರ ಸರ್ಕಾರ ನಿರಸನಗೊಳಿಸಿದೆ” ಎಂದು ಉಲ್ಲೇಖಿಸಲಾಗಿದೆ. ಇದರ ಮೂಲಕ ಬಡವರ ಉದ್ಯೋಗದ ಹಕ್ಕು ಹಾಗೂ ನಿರುದ್ಯೋಗ ಭತ್ಯೆಯನ್ನು ಕಸಿದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಜೊತೆಗೆ, ನರೇಗಾವನ್ನು ರದ್ದುಗೊಳಿಸುವ ಮೂಲಕ ಭಾರತೀಯ ಗ್ರಾಮೀಣ ಬದುಕನ್ನೇ ದುರ್ಬಲಗೊಳಿಸಲಾಗಿದೆ ಎಂಬ ಮಾತುಗಳನ್ನು ಬಳಸಲಾಗಿದೆ.
ಎರಡನೇ ಪ್ಯಾರಾದಲ್ಲಿ,
ಬೇಡಿಕೆ ಆಧಾರಿತ ಉದ್ಯೋಗದ ಹಕ್ಕನ್ನು ಒದಗಿಸುತ್ತಿದ್ದ ಕಾಯ್ದೆಯನ್ನು ರದ್ದುಪಡಿಸಿ, ಮುಂಗಡಪತ್ರ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಟೀಕಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿದ್ದ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಸರ್ಕಾರ ಆರೋಪಿಸಿದೆ.
ಮೂರನೇ ಪ್ಯಾರಾದಲ್ಲಿ
ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಅಧಿಕಾರ ವಿಕೇಂದ್ರಿಕರಣದ ಬುಡಮೇಲಿಗೆ ಕಾರಣವಾಗುವ ಕ್ರಮವೆಂದು ಬಣ್ಣಿಸಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಮೇಲಿನಿಂದ, ಅಂದರೆ ದೆಹಲಿಯ ದಂತಗೋಪುರದಿಂದಲೇ ಯೋಜನೆಗಳನ್ನು ಹೇರಲಾಗುತ್ತದೆ ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ, ದೇಶದ ಯಾವುದೇ ಪಂಚಾಯಿತಿಗೂ ತನ್ನ ಅವಶ್ಯಕತೆಗಳು ಮತ್ತು ಬೇಡಿಕೆಗಳಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಅಲ್ಲದೆ, ಈ ಕಾಯ್ದೆಯನ್ನು ರಾಷ್ಟ್ರದ ಹಿತಾಸಕ್ತಿಯನ್ನು ವಿನಾಶದ ಅಂಚಿಗೆ ದೂಡುವ ಅತ್ಯಂತ ದೊಡ್ಡ ಪ್ರಗತಿವಿರೋಧಿ ಕ್ರಮ ಎಂದು ವರ್ಣಿಸಲಾಗಿದೆ.
ನಾಲ್ಕನೇ ಪ್ಯಾರಾದಲ್ಲಿ
ವಿಬಿ ಜಿ ರಾಮ್ ಜಿ ಯೋಜನೆಯನ್ನು ಬಂಡವಾಳಶಾಹಿಗಳ ಮತ್ತು ಗುತ್ತಿಗೆದಾರರ ಹಿತಾಸಕ್ತಿಗೆ ಅನುಕೂಲವಾಗುವ ಕೇಂದ್ರಿಕೃತ ಯೋಜನೆ ಎಂದು ಕಟುವಾಗಿ ಟೀಕಿಸಲಾಗಿದೆ. ಗ್ರಾಮೀಣ ಆಸ್ತಿ ಸೃಜನೆ ಹಾಗೂ ಕೂಲಿಕಾರರಿಗೆ ಅವರು ಇರುವ ಸ್ಥಳದಲ್ಲಿಯೇ ಉದ್ಯೋಗ ಒದಗಿಸುವ ಉದ್ದೇಶಗಳನ್ನು ಕೈಬಿಟ್ಟಿರುವುದಾಗಿ ಸರ್ಕಾರ ಆರೋಪಿಸಿದೆ. ಇಂತಹ ಪ್ರಗತಿವಿರೋಧಿ ಕ್ರಮವನ್ನು ತನ್ನ ಸರ್ಕಾರ ಬಲವಾಗಿ ಖಂಡಿಸುತ್ತದೆ ಎಂದು ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಒಮ್ಮೆ ರಾಷ್ಟ್ರದಾದ್ಯಂತ ಪ್ರಸಿದ್ಧಿಯಾಗಿದ್ದ ನರೇಗಾ ಯೋಜನೆ ಪ್ರಗತಿಯ ಪ್ರತೀಕವಾಗಿತ್ತು; ಆದರೆ ಕೇಂದ್ರ ಸರ್ಕಾರ ಅದಕ್ಕೆ ನೀರಿನಲ್ಲಿ ಹೂಮ ಮಾಡಿದಂತೆ ತಿಲಾಂಜಲಿ ಇಟ್ಟಿದೆ ಎಂಬ ಮಾತುಗಳು ಕೂಡ ಸೇರಿವೆ.
ಐದನೇ ಪ್ಯಾರಾದಲ್ಲಿ
ನರೇಗಾ ಯೋಜನೆಯನ್ನು ರದ್ದುಪಡಿಸಿ ಹೊರಬಂದಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಕೇಂದ್ರದಿಂದಲೇ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದೆಹಲಿಯಲ್ಲಿ ಅಧಿಕಾರಿಗಳ ಒಂದು ಪರಿಷತ್ತನ್ನು ರಚಿಸಲಾಗಿದ್ದು, ಯಾವ ಪಂಚಾಯಿತಿಗಳಲ್ಲಿ ಈ ಯೋಜನೆಗಳನ್ನು ಜಾರಿಗೆ ತರಬೇಕೆಂಬುದನ್ನು ಅದೇ ಪರಿಷತ್ತು ನಿರ್ಧರಿಸುತ್ತದೆ ಎಂಬ ಅಂಶವನ್ನು ಸರ್ಕಾರ ತೀವ್ರವಾಗಿ ಪ್ರಶ್ನಿಸಿದೆ. ಇದರಿಂದ ಗ್ರಾಮೀಣ ಜನರು ಉದ್ಯೋಗಕ್ಕಾಗಿ ದೊಡ್ಡ ನಗರಗಳಿಗೆ ವಲಸೆ ಹೋಗುವ ವ್ಯವಸ್ಥೆ ಮರುಸ್ಥಾಪನೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಈ ಯೋಜನೆಯನ್ನು ತನ್ನ ಸರ್ಕಾರ ಅತ್ಯಂತ ಪ್ರಬಲವಾಗಿ ವಿರೋಧಿಸುತ್ತದೆ ಎಂಬ ಘೋಷಣೆಯೂ ಇದರಲ್ಲಿ ಇದೆ.
ಆರನೇ ಪ್ಯಾರಾದಲ್ಲಿ
ಕೇಂದ್ರ ಸರ್ಕಾರ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ನೇರವಾಗಿ ಆಗ್ರಹಿಸಲಾಗಿದೆ. ಜೊತೆಗೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಲಾಗಿದ್ದು, ಈ ಒತ್ತಾಯವನ್ನು ಕಾರ್ಯಗತಗೊಳಿಸಲು ಕರ್ನಾಟಕದಾದ್ಯಂತ ನಿರಂತರ ಹೋರಾಟ, ಚಳವಳಿ ಮತ್ತು ಆಂದೋಲನ ನಡೆಸಲಾಗುವುದು ಎಂದು ಭಾಷಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಅಂಶಗಳು ಕೇಂದ್ರ ಸರ್ಕಾರದ ವಿರುದ್ಧ ನೇರ ರಾಜಕೀಯ ಆರೋಪಗಳಾಗಿರುವುದರಿಂದ, ಇಂತಹ ಭಾಷಣವನ್ನು ಸದನದಲ್ಲಿ ವಾಚಿಸುವುದು ಸಂವಿಧಾನಾತ್ಮಕ ಮಿತಿಗಳಿಗೆ ವಿರುದ್ಧವಾಗಬಹುದು ಎಂಬ ಅಭಿಪ್ರಾಯಕ್ಕೆ ರಾಜ್ಯಪಾಲರು ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದನ್ನು ಅವರು ನಿರಾಕರಿಸಿರುವುದಾಗಿ ರಾಜಭವನದ ಮೂಲಗಳು ತಿಳಿಸಿವೆ.


