ರಾಜ್ಯದಲ್ಲೀಗ ಸರ್ಕಾರದ ಸಹಿ ಮಾರಾಟಕ್ಕಿದೆ, ಇಲ್ಲಿರೋದು 60 ಪರ್ಸೆಂಟ್ ಕಮಿಷನ್: ಕುಮಾರಸ್ವಾಮಿ
ಕಂದಾಯ ಇಲಾಖೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಎಷ್ಟು ದುಡ್ಡು ತೆಗೆದುಕೊಳ್ಳಲಾಗುತ್ತಿದೆ ಎಂಬುದು ಗೊತ್ತಾ? ಎಲ್ಲಾ ಹುದ್ದೆಗಳಿಗೆ ದರ ನಿಗದಿ ಮಾಡಲಾಗಿದೆ. ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ ಎಂದು ಕಿಡಿಕಾರಿದ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು(ಜ.11): ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದ್ದು, ಪ್ರತಿಯೊಂದಕ್ಕೂ ಸರ್ಕಾರ ಸಹಿಯನ್ನು ಮಾರಾಟಕ್ಕೆ ಇಟ್ಟಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಎಷ್ಟು ದುಡ್ಡು ತೆಗೆದುಕೊಳ್ಳಲಾಗುತ್ತಿದೆ ಎಂಬುದು ಗೊತ್ತಾ? ಎಲ್ಲಾ ಹುದ್ದೆಗಳಿಗೆ ದರ ನಿಗದಿ ಮಾಡಲಾಗಿದೆ. ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ ಎಂದು ಕಿಡಿಕಾರಿದರು.
100 ಕ್ಷೇತ್ರ ಹೊಣೆಗೆ ಬಿಜೆಪಿ ಭಿನ್ನರ ಬೇಡಿಕೆ: ವಿಜಯೇಂದ್ರ ಬಲಹೀನಕ್ಕೆ ಭಾರೀ ಪ್ಲ್ಯಾನ್!
ನಾನು ಸಹ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. ನಾನು ಹರಿಶ್ಚಂದ್ರ ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ವಿಧಾನಸಭೆಯಲ್ಲಿಯೇ ಈ ಮಾತು ಹೇಳಿದ್ದೇನೆ. ಚುನಾವಣೆ ನಡೆಸಬೇಕಾದರೆ ಇನ್ನೊಬ್ಬರ ಹತ್ತಿರ ಕೈ ಚಾಚಲೇಬೇಕು. ಆದರೆ ನಾನು ಅಧಿಕಾರ ನಡೆಸುವಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ಈ ಸರ್ಕಾರ ಪ್ರತಿಯೊಂದಕ್ಕೂ ಸಹಿ ಯನ್ನು ಮಾರಾಟಕ್ಕಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರ ಶಾಸಕರನ್ನೇ ಕೇಳಲಿ:
60 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಮುಖ್ಯಮಂತ್ರಿ ಸೇರಿ ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು, ಗುತ್ತಿಗೆದಾರರೇ ಪರ್ಸಂಟೇಜ್ ಆರೋಪ ಮಾಡುತ್ತಿದ್ದಾರೆ. ಅವರನ್ನು ಪರ್ಸಂಟೇಜ್ ಕೇಳದಿದ್ದರೆ ಅವರು ಯಾಕೆ ಆರೋಪ ಮಾಡುತ್ತಿದ್ದರು. ಸರ್ಕಾರ ಅವರನ್ನೇ ಕೇಳಿ ದಾಖಲೆ ಪಡೆದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಕಂದಾಯ ಇಲಾಖೆ ಸತ್ಯ ಮಾರ್ಗದಲ್ಲಿ ನಡೆಯುತ್ತಿದೆಯಾ? ಬೆಂಗಳೂರು ಉಪವಿಭಾಗಾಧಿಕಾರಿ ಹುದ್ದೆಗೆ ಎಷ್ಟು ದುಡ್ಡು ತೆಗೆದುಕೊಳ್ಳುತ್ತಿದ್ದೀರಿ? ಎಷ್ಟು ದರ ನಿಗದಿ ಮಾಡಿಕೊಂಡಿದ್ದೀರಿ? ಆ ಹಣ ಯಾರಾರಿಗೆ ಹೋಗುತ್ತದೆ? ಏನೇನು ದಂಧೆ ನಡೆಸುತ್ತಿದ್ದೀರಿ ಎನ್ನುವುದು ನಮಗೆ ಗೊತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಸುಮಲತಾ ಬಳಸಿದ್ದ ಕಾರು ಹತ್ತಲ್ಲ ಎಂದಿಲ್ಲ: ಎಚಿಕೆ
ಮದ್ದೂರು: ಮಾಜಿ ಸಂಸದೆ ಸುಮಲತಾ ಅವರು ಬಳಸಿದ್ದ ಕಾರನ್ನು ನಾನು ಹತ್ತುವುದಿಲ್ಲ ಎಂದು ಹೇಳಿಲ್ಲ. ಈ ವಿಚಾರದಲ್ಲಿ ಚಿಲ್ಲರೆ ರಾಜಕೀಯ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಎಚ್‌ಡಿಕೆ, ಸಿಆರ್‌ಎಸ್ ನಡುವೆ ಕ್ರೆಡಿಟ್ ಪಾಲಿಟಿಕ್ಸ್: ಒಂದೇ ಕಾಮಗಾರಿಗೆ ಎರಡು ಬಾರಿ ಗುದ್ದಲಿ ಪೂಜೆ!
ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅವರ ಕಾರನ್ನು ಹತ್ತಲ್ಲ. ಇವರ ಕಾರು ಹತ್ತಲ್ಲ ಎಂದು ಹೇಳಿಲ್ಲ. ಚಲುವರಾಯಸ್ವಾಮಿ ಅವರಿಗೆ ಈ ವಿಷಯ ಹೇಗೆ ಹೋಗಿದಿಯೋ ಗೊತ್ತಿಲ್ಲ. ಸರ್ಕಾರಿ ಕಾರು ನಮ್ಮ ಪನ ಆಸ್ತಿನಾ, ನಾನು ಸಿಎಂ ಆಗಿದ್ದಾಗ ಸರ್ಕಾರಿ ಕಾರು, ಡ್ರೈವರ್, ಸಂಬಳ ತಗೊಂಡಿಲ್ಲ. ನಾನು ಅಧಿಕಾರದಲ್ಲಿ ಇರುವವರೆಗೆ ಒಂದು ಶಾಶ್ವತ ಕಾರು ಕೊಡಿ ಎಂದು ಕೇಳಿರುವೆ. ಅವರು ಯಾರೋ ಬಳಸಿದ್ದಾರೆ, ನನಗೆ ಬೇಡವೆಂದು ನಾನು ಹೇಳಿಲ್ಲ. ಇಂತಹ ಸಣ್ಣ ವಿಚಾರವನ್ನು ಚರ್ಚೆ ಮಾಡುವ ಸಂಸ್ಕೃತಿಯನ್ನು ಚಲುವರಾಯ ಸ್ವಾಮಿ ಬಿಡುವುದು ಒಳ್ಳೆಯದು ಎಂದು ಟೀಕಿಸಿದರು.
ಮೈತ್ರಿ ಪಾಲನೆ ವಿಚಾರ ಬಹಿರಂಗ ಚರ್ಚೆ ಇಲ್ಲ
ಮದ್ದೂರು: ಮೈತ್ರಿ ಧರ್ಮ ಪಾಲನೆ ಸಂಬಂಧ ನಾಲ್ಕು ಗೋಡೆ ಮಧ್ಯೆ ಮಾತನಾಡಬಹುದು. ಇದನ್ನು ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂಬ ಮಾಜಿ ಸಚಿವ ನಾರಾ ಯಣಗೌಡ ಹೇಳಿಕೆಗೆ ಉತ್ತರಿಸಿದ ಅವರು, ಈ ಕುರಿತು ಸಾರ್ವಜನಿಕವಾಗಿ ಮಾತನಾಡಿದ್ದಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತಾ? ನಮ್ಮ ಬಳಿ ಬಂದು ಚರ್ಚೆ ಮಾಡಿದರೆ ಮಾತನಾ ಡಬಹುದು. ಇಂತಹ ವಿಷಯಗಳನ್ನು ಹೊರಗಡೆ ಚರ್ಚೆ ಮಾಡುವುದಕ್ಕೆ ಆಗಲ್ಲ. ನಮ್ಮ ಬಳಿ ಬಂದು ಸಮಸ್ಯೆ ಏನಿದೆ ಎಂದು ಹೇಳಿದರೆ ಸರಿಪಡಿಸಬಹುದು ಎಂದರು.