ಮೈಸೂರು ರಾಜಮನೆತನದ ಮೇಲೆ ಮುಗಿಬೀಳುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ವಿಧಾನಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು. 

ಮೈಸೂರು (ಫೆ.01): ಮೈಸೂರು ರಾಜಮನೆತನದ ಮೇಲೆ ಮುಗಿಬೀಳುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ವಿಧಾನಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನ್ಸಾನ್ ಕಿರುಕುಳ ತಡೆಗೆ ತಂದ ಸುಗ್ರೀವಾಜ್ಞೆಯನ್ನು ಸ್ವಾಗತಿಸುತ್ತೇನೆ. ಅದೇ ರೀತಿ ಬೆಂಗಳೂರು ಅರಮನೆ ಜಾಗದ ವಿವಾದ ಸಂಬಂಧ ತಂದ ಸುಗ್ರೀವಾಜ್ಞೆ ವಿರೋಧಿಸುವುದಾಗಿ ಹೇಳಿದರು. ಕಾಂಗ್ರೆಸ್ ಸರ್ಕಾರ ಎಲ್ಲದಕ್ಕೂ ಸುಗ್ರೀವಾಜ್ಞೆ ತರಲು ಮುಂದಾಗಿದೆ. ದೇಶದ ಮೇಲೆ ತುರ್ತು ಪರಿಸ್ಥಿತಿ ತಂದವರು ಸುಗ್ರೀವಾಜ್ಞೆ ತರದೇ ಇರುತ್ತಾರೆಯೇ? ಬೆಂಗಳೂರು ಅರಮನೆ ಜಾಗದ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗಿಲ್ಲ. ಈ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಅವರು ದೂರಿದರು.

ಮುಡಾ ಪ್ರಕರಣ ಸಿಬಿಐಗೆ ವಹಿಸಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅಪರಾಧಿ. ಯಾವುದೇ ನ್ಯಾಯಾಲಯ ನಿರಾಪರಾಧಿ ಎಂದು ಹೇಳಿಲ್ಲ. ಈಗಲಾದರೂ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೊಟ್ಟರು. ಜಾರಿ ನಿರ್ದೇಶನಾಲಯ ಮುಡಾದಲ್ಲಿ ಹಗರಣ ನಡೆದಿರುವುದನ್ನು ಬಹಿರಂಗಪಡಿಸಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರದ ಜನರು ಕುಪಿತರಾಗಿದ್ದಾರೆ. ಅಭಿವೃದ್ಧಿ ಪದವೇ ಮರೆತು ಹೋಗಿದೆ. ಕೇವಲ 5 ಗ್ಯಾರಂಟಿಗಳಲ್ಲಿ 5 ವರ್ಷ ಕಳೆಯಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದಾರೆ ಎಂದು ಅವರು ಲೇವಡಿ ಮಾಡಿದರು.

ಕರ್ನಾಟಕದಲ್ಲಿರುವುದು ದರಿದ್ರ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

ಮುಖ್ಯಮಂತ್ರಿ ಮಾತಿಗೆ ಸಚಿವರು ಕವಡೆ ಕಾಸಿನ ಗೌರವ ಕೊಡುತ್ತಿಲ್ಲ. ಏನೇ ಹೇಳಿದರೂ ಕೇಳುತ್ತಿಲ್ಲ. ಮಂತ್ರಿಗಳು ಪ್ರೈವೇಟ್ ಲಿಮಿಟೆಡ್ ಕಂಪನಿ ಎಂದಾಗಿದ್ದಾರೆ. ಯಾರ ಬೇಕಾದರೂ ಲೂಟಿ ಮಾಡಬಹುದು. ಕೇಳುವವರಿಲ್ಲ. ಕದ್ದ ಮಾಲು ವಾಪಸ್ ಕೊಟ್ಟರೆ ಚುಪ್ತ ಮಾಡುವ ಹೊಸ ಕಾನೂನು ರಾಜ್ಯದಲ್ಲಿದೆ ಎಂದು ಅವರು ಆರೋಪಿಸಿದರು. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಕೆಟ್ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಜಾತಿ ವಿರುದ್ಧ ಮಾತಾಡಿದ್ದಾರೆ. ಬೆಂಗಳೂರಿಗೆ ಬರದೇ ಮೈಸೂರಿಂದಲೇ ಕೌಂಟರ್ ಕೊಡುತ್ತಾರೆ. ತಾಕತ್ ಇದ್ದರೆ ತಮ್ಮ ಮುಂದೆ ಬಂದು ಮಾತಾಡಲಿ. ಅಂಕಿ ಸಂಖ್ಯೆಗಳ ಸಮೇತ ಅವರಿಗೆ ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಸುಳ್ಳು ಹೇಳುವುದಕ್ಕೆ ಒಳ್ಳೇಯ ಪದವಿ ಕೊಟ್ಟಿದೆ ಎಂದು ಅವರು ಕುಟುಕಿದರು.

ಅಧ್ಯಕ್ಷರ ನೇಮಕ ಪ್ರಕ್ರಿಯೆಯಿಂದ ಪಕ್ಷದೊಳಗೆ ಈಗ ಧ್ರುವೀಕರಣವನ್ನು ಎದುರಿಸುತ್ತಿದೆ. ಯಾವ್ಯಾವುದಕ್ಕೆ ಎಲ್ಲೆಲ್ಲಿ ಕಡಿವಾಣ ಹಾಕಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯ ಶೀಘ್ರ ಶಮನವಾಗಲಿದೆ. ಬಿಜೆಪಿಗಿಂತ ಕಾಂಗ್ರೆಸ್ ಪಕ್ಷದೊಳಗಿನ ಬಣ ಬಡಿದಾಟ ಹೆಚ್ಚಾಗಿದೆ ಎಂದರು. ಇದೇ ವೇಳೆ ಬಿಜೆಪಿ ನಗರಾಧ್ಯಕ್ಷರಾಗಿ ಪುನಾರಾಯ್ಕೆಯಾದ ಮಾಜಿ ಶಾಸಕ ಎಲ್. ನಾಗೇಂದ್ರ ಅವರನ್ನು ಶಾಸಕ ಟಿ.ಎಸ್. ಶ್ರೀವತ್ಸ ಅಭಿನಂದಿಸಿದರು. ಮುಖಂಡರಾದ ಪರಮಾನಂದ, ಮಾದಪ್ಪ, ಆರ್. ಶೈಲೇಂದ್ರ, ಅನಿಲ್, ಮೋಹನ್, ಕೇಬಲ್ ಮಹೇಶ್, ಗಿರಿಧರ್, ಬಿ.ಎಂ. ರಘು ಮೊದಲಾದವರು ಇದ್ದರು.

ಕಲಬುರಗಿ ಈಗ ‘ಪ್ರಿಯಾಂಕ್‌ ಖರ್ಗೆ ರಿಪಬ್ಲಿಕ್‌’: ಛಲವಾದಿ ನಾರಾಯಣಸ್ವಾಮಿ

ಮನೆಕಟ್ಟಿಸಿ ಕೊಡಲು ಸರ್ಕಾರಕ್ಕೆ ಒತ್ತಾಯ: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬೆಳತ್ತೂರು ಗ್ರಾಪಂ ವ್ಯಾಪ್ತಿಯ ಮಗ್ಗೆ ಗ್ರಾಮದಲ್ಲಿ ರಜಿಯಾ ಅವರ ಮನೆಯನ್ನು ಧ್ವಂಸ ಮಾಡಿರುವುದನ್ನು ಖಂಡಿಸಿದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಕೂಡಲೇ ಮನೆ ಕಟ್ಟಿಸಿಕೊಡುವಂತೆ ಒತ್ತಾಯಿಸಿದರು. ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದ್ದ ಎಂಬ ಕಾರಣಕ್ಕೆ ಸ್ವಂತ ಜಮೀನಿನಲ್ಲಿದ್ದ ಮನೆಯನ್ನು ಧ್ವಂಸ ಮಾಡಲಾಗಿದೆ. ಅದೇ ವ್ಯಾಪ್ತಿಯಲ್ಲಿ 60 ಹೆಚ್ಚು ರೆಸಾರ್ಟ್‌ ಗಳಿವೆ. ಇವೆಲ್ಲ ಕಾನೂನು ಬದ್ಧವಾಗಿದೆಯೇ?. ಸಿದ್ದರಾಮಯ್ಯ ಅವರೇ ಇದೇನಾ ನಿಮ್ಮ ಮುಸ್ಲಿಂ ಪ್ರೀತಿ? ಅಧಿಕಾರಿಗಳು ಬಕೆಟ್ ರಾಜಕಾರಣ ಮಾಡದೇ ಬಡವರ ರಕ್ಷಣೆಗೆ ನಿಲ್ಲುವಂತೆ ಆಗ್ರಹಿಸಿದರು.