ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಒಪ್ಪಿ ಬಹಿರಂಗಪಡಿಸಬೇಕಿತ್ತು. ಯಾವ ಸಮುದಾಯ ವರದಿಯಿಂದ ಹೊರಗುಳಿದಿದೆ ಎಂಬುದನ್ನು ನೋಡಬೇಕಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಬೆಂಗಳೂರು (ಜೂ.15): ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಒಪ್ಪಿ ಬಹಿರಂಗಪಡಿಸಬೇಕಿತ್ತು. ಯಾವ ಸಮುದಾಯ ವರದಿಯಿಂದ ಹೊರಗುಳಿದಿದೆ ಎಂಬುದನ್ನು ನೋಡಬೇಕಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂತರಾಜು ಆಯೋಗ ಚೆನ್ನಾಗಿ ಸಮೀಕ್ಷೆ ನಡೆಸಿತ್ತು. ಪ್ರತಿಯೊಂದು ಗ್ರಾಮ, ಹೋಬಳಿ, ಹಳ್ಳಿಗೂ ಹೋಗಿ ಗಣತಿ ಮಾಡಿತ್ತು. ಆಗ 1.50 ಲಕ್ಷ ಶಿಕ್ಷಕರು ಸೇರಿ ಒಟ್ಟು 1.60 ಲಕ್ಷ ಸಿಬ್ಬಂದಿಯನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ 165 ಕೋಟಿ ರು. ಖರ್ಚು ಮಾಡಲಾಗಿತ್ತು. ಈಗ ಸರ್ಕಾರದ ಮುಖ್ಯಕಾರ್ಯದರ್ಶಿ ಆಗಿರುವ ಶಾಲಿನಿ ರಜನೀಶ್ ಅವರೇ ಆಗ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ಆಗಿದ್ದರು. ಆ ವರದಿಯನ್ನು ಬಹಿರಂಗಪಡಿಸಬೇಕಾಗಿತ್ತು. ಬಳಿಕ ಯಾರನ್ನು ಬಿಟ್ಟಿದ್ದಾರೆ ಎಂಬುದನ್ನು ತಿಳಿಸಲು ಹೇಳಬಹುದಿತ್ತು ಎಂದು ಹೇಳಿದ್ದಾರೆ.

ಇನ್ನು ಈಗ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ಮಾಡುವುದಾಗಿ ಹೇಳಿದೆ. ಈಗ ರಾಜ್ಯ ಸರ್ಕಾರ ಹೊಸದಾಗಿ ಸಮೀಕ್ಷೆ ಮಾಡುವುದಾಗಿ ಹೇಳಿದೆ. ಈಗ ಶಾಲೆಗಳು ಶುರುವಾಗಿರುವುದರಿಂದ ಸಮೀಕ್ಷೆಗೆ ಶಿಕ್ಷಕರು ಲಭ್ಯವಿರುವುದಿಲ್ಲ. ಏಪ್ರಿಲ್‌-ಮೇ ತಿಂಗಳಲ್ಲೇ ಸಮೀಕ್ಷೆ ಮಾಡಬೇಕು. ಈಗ ಸಮೀಕ್ಷೆ ನಡೆಸುವುದು ಕಷ್ಟ ಎಂದರು.

ಮುನಿಯಪ್ಪ ಸಮರ್ಥನೆ: ಹೊಸ ಸಮೀಕ್ಷೆಗೆ ಸಚಿವ ಕೆ.ಎಚ್. ಮುನಿಯಪ್ಪ ಸಮರ್ಥನೆ ನೀಡಿದ್ದು, ಮುಖ್ಯಮಂತ್ರಿ ಹಾಗೂ ಸಂಪುಟದ ನಿರ್ಧಾರವನ್ನು ನಾನು ಒಪ್ಪುತ್ತೇನೆ. ಸುದೀರ್ಘವಾಗಿ ಚರ್ಚೆ ಮಾಡಿ ಹೊಸದಾಗಿ ಮಾಡಲು ತೀರ್ಮಾನ ಮಾಡಿದ್ದಾರೆ. ಅದನ್ನು ಮಾಡುತ್ತೇವೆ ಎಂದು ಹೇಳಿದರು.

ಬುಡ್ಗ ಜಂಗಮ ಕಾಲನಿಗೆ ಭೇಟಿ: ನಗರದ ಬುಡ್ಗ ಜಂಗಮ ಕಾಲನಿಗೆ ಮಾಜಿ ಸಚಿವ ಎಚ್. ಆಂಜನೇಯ ಭೇಟಿ ನೀಡಿ, ಜನರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬೇಡ, ಬುಡ್ಗ ಜಂಗಮ ಜಾತಿ ಜನಸಂಖ್ಯೆಯ ಹಿಂದುಳಿಯುವಿಕೆಯ ಆಧಾರದ ಮೇಲೆ ಸಿಗಬೇಕಾದ ಮೀಸಲಾತಿಯ ಪ್ರಮಾಣ ತುಂಬಾ ಕಡಿಮೆ ಇದೆ. ಪರಿಶಿಷ್ಟ ಜಾತಿಗೆ ಮೀಸಲು ಪ್ರಮಾಣ ಶೇ. 15ರಷ್ಟಿದೆ. ನಮಗೆ ಒಳ ಮೀಸಲಾತಿ ಕೊಡಿ, ವರ್ಗೀಕರಣ ಮಾಡಿ ಆ ಮೀಸಲಾತಿ ಒಳಗೆ ಬರುವ 101 ಜಾತಿಗಳಿವೆ. ಅದರಲ್ಲಿ ಪ್ರಬಲವಾಗಿ 5ರಿಂದ 6 ಸಮುದಾಯಗಳಿವೆ. ಆ ಸಮುದಾಯ ಜತೆಗೆ ನಾವು ಸ್ಪರ್ಧೆ ಮಾಡುವುದಕ್ಕೆ ಆಗುವುದಿಲ್ಲ. ಈ ಕಾರಣದಿಂದಾಗಿ ನಮಗೆ ಪ್ರತ್ಯೇಕವಾಗಿ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು ಎಂದು ಹೇಳಿದೆವು. ನಾವು 35 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಎಂದರು.

ಬೇಡ ಜಂಗಮರು ನರಿ, ಬೆಕ್ಕು, ಇಲಿ ತಿನ್ನುತ್ತಾರೆ: ವೀರಶೈವ ಲಿಂಗಾಯತ ಜಂಗಮರು ಬೇಡ ಜಂಗಮ ಜಾತಿ ಎಂದು ಜಾತಿ ಸಮೀಕ್ಷೆಯಲ್ಲಿ ಬರೆಸುತ್ತಿದ್ದಾರೆ. ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಬೇಡ ಜಂಗಮ ಜನಾಂಗದವರ ಆಹಾರ ಪದ್ಧತಿಯೇ ಬೇರೆ. ಅವರು ನರಿ, ಬೆಕ್ಕು, ಇಲಿ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಾರೆ. ಬೇಡ ಎಂದರೆ ಬೇಟೆ ಮಾಡುವುದು. ಹಾಗಾಗಿ ಬೇಡ ಜಂಗಮ ಎಂದಾಗಿದೆ. ಆ ಬೇಡ ಜಂಗಮ ಜತೆಗೆ ಬುಡ್ಗ ಜಂಗಮ ಎಂದು ಬಂದಿತ್ತು, ಈಗ ಬೇಡ ಜಂಗಮ ಎನ್ನುವವರು ನಶಿಸಿ ಹೋದರು. ಆಗ ಅವರು ಮಾದಿಗರ ಮನೆಯಲ್ಲಿ ಬೇಡಿ ತಿನ್ನುತ್ತಿದ್ದರು. ಕಾಡು, ಮೇಡುಗಳಲ್ಲಿ, ಬೇರೆ ಊರಿಗೆ ಹೋದಾಗ ಅಲ್ಲಿನ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದು. ಅಲ್ಲಿ ಸಾರಾಯಿ ಭಟ್ಟಿಯಿಂದ ಸಾರಾಯಿ ಮಾಡಿಕೊಂಡು, ಕುಡುಕೊಂಡು ಆರಾಮಾಗಿ ಇರುತ್ತಾರೆ. ಅಲ್ಲಿ ಇವರದ್ದೇ ಆದಂತಹ ಒಂದು ಲೋಕವಾಗಿತ್ತು. ಅವರು ಮಾತಾನಾಡುವ ಭಾಷೆ ತೆಲುಗು, ಅವರು ಅಲೆಮಾರಿಗಳು, ಅವರು ಯಾವುದೇ ಆದಂತಹ ಪ್ರಾಣಿಗಳನ್ನು ಬಿಟ್ಟಿಲ್ಲ. ಇವರು ಎಲ್ಲವನ್ನು ಬೇಟೆಯಾಡಿ ತಿನ್ನುತ್ತಾರೆ ಎಂದರು.