ರಾಹುಲ್ ಗಾಂಧಿ ಯಾತ್ರೆ ನಿಲ್ಲಿಸಲು ಕೇಂದ್ರ ಸರ್ಕಾರ ಕೋವಿಡ್ ವೈರಸ್ ಬಿಟ್ಟಿದೆ: ಉದ್ಧವ್ ಠಾಕ್ರೆ ಬಣ
ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಿ. ಇಲ್ಲದಿದ್ದರೆ, ಪಾದಯಾತ್ರೆಯನ್ನು ನಿಲ್ಲಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೂಚಿಸಿದ್ದರು.
ಕೋವಿಡ್ ಪ್ರೋಟೋಕಾಲ್‌ಗಳನ್ನು (COVID Protocol) ಅನುಸರಿಸಲು ಸಾಧ್ಯವಾಗದಿದ್ದರೆ ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ಅಮಾನತುಗೊಳಿಸುವ ಅಥವಾ ಮುಂದೂಡುವುದನ್ನು ಪರಿಗಣಿಸುವಂತೆ ಒತ್ತಾಯಿಸಿ ರಾಹುಲ್ ಗಾಂಧಿ (Rahul Gandhi) ಮತ್ತು ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರವನ್ನು (Central Government) ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ ಬಣ ಇಂದು ತರಾಟೆಗೆ ತೆಗೆದುಕೊಂಡಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಿ. ಇಲ್ಲದಿದ್ದರೆ, ಪಾದಯಾತ್ರೆಯನ್ನು ನಿಲ್ಲಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ಸೂಚಿಸಿದ್ದರು.
ಆದರೆ, ಕೇಂದ್ರ ಆರೋಗ್ಯ ಸಚಿವರ ಪತ್ರವನ್ನು ರಾಜಕೀಯ ಎಂದು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣದ ರಾಜಕೀಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಹೇಳಿದೆ. ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ 100 ದಿನಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲವನ್ನು ಪಡೆಯುತ್ತಿದ್ದಾರೆ. ಸರ್ಕಾರವು ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಕಾನೂನು ಅಥವಾ ಪಿತೂರಿಯಿಂದ ಕೇಂದ್ರ ಸರ್ಕಾರವು 'ಕೋವಿಡ್ -19' ವೈರಸ್ ಅನ್ನು ಬಿಡುಗಡೆ ಮಾಡಿದೆ ಎಂದು ತೋರುತ್ತದೆ ಎಂದು ಟೀಕೆ ಮಾಡಿದೆ.
ಇದನ್ನು ಓದಿ: Assembly election: ಕೋವಿಡ್ ಶಿಷ್ಟಾಚಾರದ ಹೆಸರಲ್ಲಿ ರಾಜಕೀಯ ಬೇಡ: ಕಾಂಗ್ರೆಸ್ ಆಕ್ರೋಶ
'ಭಾರತ್ ಜೋಡೋ' ಯಾತ್ರೆಯ ಭರಾಟೆಯಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಭಯ ಸರಿಯಾಗಿದೆ. ಆದರೆ 3 ವರ್ಷಗಳ ಹಿಂದೆ ಕೊರೊನಾ ವಿನಾಶವನ್ನುಂಟುಮಾಡಿದಾಗ, ಅಂದಿನ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಗುಜರಾತ್‌ಗೆ ಆಹ್ವಾನಿಸಿ ಲಕ್ಷಾಂತರ ಜನರನ್ನು ಒಟ್ಟುಗೂಡಿಸಿದವರು ನೀವು. ಎಂದೂ ಸಾಮ್ನಾ ಪತ್ರಿಕೆ ಟೀಕೆ ಮಾಡಿದೆ.
ಮಂಗಳವಾರದಂದು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು, ಪಕ್ಷದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ COVID-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದ್ದಾರೆ. "ರಾಜಸ್ಥಾನದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಮಾಸ್ಕ್-ಸ್ಯಾನಿಟೈಸರ್ ಬಳಕೆಯನ್ನು ಜಾರಿಗೊಳಿಸಬೇಕು. ಲಸಿಕೆ ಹಾಕಿದ ಜನರು ಮಾತ್ರ ಯಾತ್ರೆಯಲ್ಲಿ ಭಾಗವಹಿಸಬೇಕು" ಎಂದು ಆರೋಗ್ಯ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಲವು ದೇಶದಲ್ಲಿ COVID - 19 ಉಲ್ಬಣ: ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಹಾಕಿಕೊಳ್ಳಿ ಎಂದು ಕೇಂದ್ರ ಸೂಚನೆ
ಅಲ್ಲದೆ, ಕಾಂಗ್ರೆಸ್ ಶಿಷ್ಟಾಚಾರವನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಪಾದಯಾತ್ರೆಯನ್ನು ಮುಂದೂಡುವಂತೆ ಮನ್ಸುಖ್ ಮಾಂಡವಿಯಾ ಮನವಿ ಮಾಡಿದ್ದಾರೆ. "ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹಿತಾಸಕ್ತಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಮುಂದೂಡಬಹುದು" ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ಈ ಪತ್ರವು ಕಾಂಗ್ರೆಸ್ ಪಕ್ಷದಿಂದ ಭಾರಿ ಟೀಕೆಗೆ ಕಾರಣವಾಗಿದ್ದು, ಭಾರತ್ ಜೋಡೋಗೆ ಭಾರಿ ಜನಸ್ಪಂದನ ಸಿಗುತ್ತಿರುವುದರಿಂದ ಮೋದಿ ಸರ್ಕಾರವು ಗಾಬರಿಗೊಂಡು ಈ ಪತ್ರ ಬರೆಯಲಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ. ರಾಜಸ್ಥಾನದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಭಾರಿ ಜನಸ್ಪಂದನದಿಂದ ಬಿಜೆಪಿ ಮತ್ತು ಮೋದಿ ಸರ್ಕಾರವು ಎಷ್ಟು ಗಾಬರಿಗೊಂಡಿದೆ ಎಂದರೆ, ಅವರು ರಾಜಸ್ಥಾನದಲ್ಲಿ ಕೋವಿಡ್ -19 ಪ್ರೋಟೋಕಾಲ್ ಅನ್ನು ಅನುಸರಿಸಲು ರಾಹುಲ್ ಗಾಂಧಿಗೆ ಪತ್ರಗಳನ್ನು ಬರೆಯುತ್ತಿದ್ದಾರೆ ಎಂದು ಅಶೋಕ್ ಗೆಹ್ಲೋಟ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇದನ್ನೂ ಓದಿ: ಭಾರತ ಜೋಡೋ ಯಾತ್ರೆ ಮುಂದೂಡಿ, ಇಲ್ಲ ಈ ನಿಯಮ ಪಾಲಿಸಿ; ಕೇಂದ್ರದ ಪತ್ರಕ್ಕೆ ರಾಹುಲ್ ಕಂಗಾಲು!
ಯಾತ್ರೆಗೆ ಅಡ್ಡಿಪಡಿಸುವುದೇ ಬಿಜೆಪಿಯ ಉದ್ದೇಶ ಎಂಬುದನ್ನು ಕೇಂದ್ರ ಆರೋಗ್ಯ ಸಚಿವರ ನಡೆ ಸ್ಪಷ್ಟವಾಗಿ ತೋರಿಸುತ್ತದೆ ಎಂದೂ ರಾಜಸ್ಥಾನ ಮುಖ್ಯಮಂತ್ರಿ ಹೇಳಿದರು. ಭಾರತ್ ಜೋಡೋ ಯಾತ್ರೆಗೆ ಹೆಚ್ಚುತ್ತಿರುವ ಸಾರ್ವಜನಿಕ ಬೆಂಬಲದಿಂದ ಅಸಮಾಧಾನಗೊಂಡಿರುವ ಅವರು, ಬಿಜೆಪಿಯ ಉದ್ದೇಶವು ಅದನ್ನು ತೊಂದರೆಗೊಳಿಸುವುದಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಪತ್ರ ಬರೆಯುವ ಉದ್ದೇಶ ಸಾರ್ವಜನಿಕರ ಹಿತಾಸಕ್ತಿಯಿಂದಲ್ಲ, ಆದರೆ ರಾಜಕೀಯ ಪ್ರೇರಿತವಾಗಿದೆ ಎಂದೂ ಅಶೋಕ್ ಗೆಹ್ಲೋಟ್ ಆರೋಪಿಸಿದರು.