Assembly election: ಕೋವಿಡ್ ಶಿಷ್ಟಾಚಾರದ ಹೆಸರಲ್ಲಿ ರಾಜಕೀಯ ಬೇಡ: ಕಾಂಗ್ರೆಸ್ ಆಕ್ರೋಶ
ಭಾರತ್ ಜೋಡೋ ಯಾತ್ರೆಯ ಯಶಸ್ಸಿಗೆ ಬೆದರಿರುವ BJP, ಯಾತ್ರೆಯನ್ನು ನಿಲ್ಲಿಸಲು ಕೋವಿಡ್ ಅಸ್ತ್ರವನ್ನು ಬಳಸುತ್ತಿದೆ. ಕರ್ನಾಟಕ ರಾಜ್ಯದ BJPಯ ಜನಸಂಕಲ್ಪ ಯಾತ್ರೆಗಳಿಗೆ ಇಲ್ಲದ ಶಿಷ್ಟಾಚಾರ ಕಾಂಗ್ರೆಸ್‌ನ ಯಾತ್ರೆಗಳಿಗೆ ಮಾತ್ರ ಯಾಕೆ ಅನ್ವಯ ಆಗುತ್ತದೆಯೇ?
ಬೆಂಗಳೂರು (ಡಿ.22): ಕೋವಿಡ್ ಶಿಷ್ಟಾಚಾರ ಪಾಲಿಸದಿದ್ದರೆ ಭಾರತ್ ಜೋಡೋ ಯಾತ್ರೆ ನಿಲ್ಲಿಸುವಂತೆ ಕೇಂದ್ರ ಆರೋಗ್ಯ ಸಚಿವ ಮುನ್ಸ್‌ಖ್ ಮಾಂಡವೀಯ ಸೂಚಿಸಿದ್ದಾರೆ. ಕೋವಿಡ್ ಶಿಷ್ಟಾಚಾರ ಕೇವಲ ಕಾಂಗ್ರೆಸ್ ಯಾತ್ರೆಗಳಿಗೆ ಮಾತ್ರ ಸೀಮಿತವೇ.? ರಾಜ್ಯದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಮಾಡುತ್ತಿದೆ. ಮಾಂಡವೀಯ ರಾಜ್ಯ ಬಿಜೆಪಿ ನಾಯಕರಿಗ್ಯಾಕೆ ಕೋವಿಡ್ ಶಿಷ್ಟಾಚಾರದ ಪಾಠ ಮಾಡಿಲ್ಲ.? ಎಂದು ಕಾಂಗ್ರೆಸ್‌ನಿಂದ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಯಶಸ್ಸಿಗೆ ಬೆದರಿರುವ BJP, ಯಾತ್ರೆಯನ್ನು ನಿಲ್ಲಿಸಲು ಕೋವಿಡ್ ಅಸ್ತ್ರವನ್ನು ಬಳಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಅಷ್ಟು ಕಾಳಜಿ ಇದ್ದರೆ ಈ ಕೂಡಲೇ ಕೋವಿಡ್ ಶಿಷ್ಟಾಚಾರದ ಮಾರ್ಗಸೂಚಿ ರೂಪಿಸಿ ಆದೇಶ ಹೊರಡಿಸಲಿ. ನಾವು ಕೂಡ ಆ ಎಲ್ಲ ಶಿಷ್ಟಾಚಾರವನ್ನು ಪಾಲಿಸುತ್ತೇವೆ. ಆದರೆ ಕರ್ನಾಟಕ ರಾಜ್ಯದ BJPಯ ಜನಸಂಕಲ್ಪ ಯಾತ್ರೆಗಳಿಗೆ ಇಲ್ಲದ ಶಿಷ್ಟಾಚಾರ ಕಾಂಗ್ರೆಸ್‌ನ ಯಾತ್ರೆಗಳಿಗೆ ಮಾತ್ರ ಯಾಕೆ ಅನ್ವಯ ಆಗುತ್ತದೆಯೇ? ಎಂದು ಪ್ರಶ್ನಿಸುವ ಮೂಲಕ ರಾಜ್ಯ ಕಾಂಗ್ರೆಸ್ ವತಿಯಿಂದ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕರ್ನಾಟಕದಲ್ಲಿ ಕೋವಿಡ್ ನಿಗಾ: ಇಂದು ಸಿಎಂ ಮಹತ್ವದ ಸಭೆ
ಬಿಜೆಪಿ ಯಾತ್ರೆಗಳಿಗೆ ಸೋಂಕು ಹರಡುವುದಿಲ್ಲವೇ? : ಕೇವಲ ಕಾಂಗ್ರೆಸ್ ಯಾತ್ರೆಗಳನ್ನು ಗುರಿಯಾಗಿಸಿಕೊಂಡು ಕೋವಿಡ್ ಶಿಷ್ಟಾಚಾರ ಹೇರಿದರೆ ಏನರ್ಥ.? ಶಿಷ್ಟಾಚಾರ ಎಲ್ಲರಿಗೂ ಒಂದೇ. BJP ನಡೆಸುವ ಯಾತ್ರೆಗಳಲ್ಲಿ ಸೋಂಕು ಹರಡುವುದಿಲ್ಲವೆಂದು ಕೊರೊನಾ ವೈರಸ್ ಪ್ರಾಮಿಸರಿ ನೋಟ್ ಬರೆದು ಕೊಟ್ಟಿದೆಯೆ? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ.? ಮಾಂಡವೀಯರವರೆ, ಕೋವಿಡ್ ಶಿಷ್ಟಾಚಾರ ಪಕ್ಷಗಳ ಆಧಾರದಲ್ಲಿ ಪ್ರತ್ಯೇಕವಾಗುತ್ತದೆಯೆ.? ಎಂದು ಕೇಳಲಾಗಿದೆ.
ಶಿಷ್ಟಾಚಾರದ ಹೆಸರಲ್ಲಿ ರಾಜಕೀಯ ಬೇಡ: ಮತ್ತೊಮ್ಮೆ ಭೀಕರವಾಗಿ ಹರಡುತ್ತಿರುವ ಕೋವಿಡ್ ಸೋಂಕು ತಡೆಗಟ್ಟುವಲ್ಲಿ ನಮ್ಮೆಲ್ಲರ ಹೊಣೆಗಾರಿಕೆಯೂ ಇದೆ. ಆದರೆ ಕೇಂದ್ರ ಶಿಷ್ಟಾಚಾರದ ಹೆಸರಲ್ಲಿ ರಾಜಕೀಯ ಮಾಡಬಾರದು. ಶಿಷ್ಟಾಚಾರ ರೂಪಿಸುವುದಾದರೆ ಅದು ಎಲ್ಲರಿಗೂ ಅನ್ವಯಿಸಲಿ. ಕೇವಲ ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಶಿಷ್ಟಾಚಾರದ ಅಸ್ತ್ರ ಬಳಸಿದರೆ, ಅದು ಶಿಷ್ಟಾಚಾರವಲ್ಲ, ಅನಾಚಾರವಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಶೀಘ್ರ ಕೋವಿಡ್ ಮಾರ್ಗಸೂಚಿ ಬಿಡುಗಡೆ: ಸಚಿವ ಸುಧಾಕರ್
ಜಾಗತಿಕವಾಗಿ 5 ದೇಶಗಳಲ್ಲಿ ಕೋವಿಡ್ ಮತ್ತೆ ಉಲ್ಬಣ: ಜಾಗತಿಕವಾಗಿ ಈಗ ಚೀನಾ ಮಾತ್ರವಲ್ಲ, 5 ವಿವಿಧ ದೇಶಗಳಲ್ಲಿ ಮತ್ತೆ ಕೋವಿಡ್ ಪ್ರಕರಣ ಹಾಗೂ ಸೋಂಕಿತರ ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಬ್ರೆಜಿಲ್, ಅಮೆರಿಕ ಅತಿ ಹೆಚ್ಚು ದೈನಂದಿನ ಕೇಸುಗಳು ವರದಿಯಾಗುತ್ತಿರುವ ಟಾಪ್ 5 ದೇಶಗಳು ಎನಿಸಿಕೊಂಡಿವೆ. ಈ ದೇಶಗಳಲ್ಲಿ ಈಗ ಭರ್ಜರಿ ಚಳಿಗಾಲ ಇದ್ದು, ಇದು ಕೋವಿಡ್ ಏರಿಕೆಗೆ ಕಾರಣ ಎನ್ನಲಾಗಿದೆ.
ಇನ್ನು ಜಪಾನ್‌ನಲ್ಲಿ (Japan) ನ.14ರಿಂದ 20ರವರೆಗಿನ ವಾರದ ಸರಾಸರಿ ಕೋವಿಡ್ ಕೇಸು 84,725ರಷ್ಟಿದ್ದು, ಡಿಸೆಂಬರ್‌ನಲ್ಲಿ ಇದು 1.52 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ರೀತಿ ನವೆಂಬರ್‌ನಲ್ಲಿ 100ರಷ್ಟಿದ್ದ ಸರಾಸರಿ ಸಾವಿನ ಪ್ರಮಾಣ ಡಿಸೆಂಬರ್‌ನಲ್ಲಿ 241ಕ್ಕೆ ಏರಿಕೆಯಾಗಿದೆ. ಆದರೆ ಅಮೆರಿಕದಲ್ಲಿ ಕೋವಿಡ್ ಅಬ್ಬರ ಕೊಂಚ ತಗ್ಗಿದೆ. ನವೆಂಬರ್‌ನಲ್ಲಿ ಸರಾಸರಿ 42,550 ಕೇಸುಗಳು ವರದಿಯಾಗಿದ್ದರೆ, ಡಿಸೆಂಬರ್‌ನಲ್ಲಿ ಅವುಗಳ ಪ್ರಮಾಣ 34,923ಕ್ಕೆ ಇಳಿದಿದೆ. ಇದೇ ರೀತಿ ಸಾವಿನ ಸಂಖ್ಯೆಯೂ 362 ರಿಂದ 214 ಕ್ಕೆ ಕುಸಿದಿದೆ.