ಸರ್ಕಾರ ಬದಲಾಗಿದೆ, ಪೊಲೀಸರೂ ಬದಲಾಗಿ: ಸಿದ್ದರಾಮಯ್ಯ, ಪರಂ ತಾಕೀತು
ಅಕ್ರಮ ಮರಳು ಗಣಿಗಾರಿಕೆ, ಡ್ರಗ್ಸ್ ಮಾಫಿಯಾ, ರಿಯಲ್ ಎಸ್ಟೇಟ್ ಹಾಗೂ ಕೇಸರಿ ಶಾಲು ವಿವಾದ ವಿಷಯಗಳನ್ನು ಪ್ರಸ್ತಾಪಿಸಿ ಪೊಲೀಸರ ಕಾರ್ಯವೈಖರಿಗೆ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ.16): ಅಕ್ರಮ ಮರಳು ಗಣಿಗಾರಿಕೆ, ಡ್ರಗ್ಸ್ ಮಾಫಿಯಾ, ರಿಯಲ್ ಎಸ್ಟೇಟ್ ಹಾಗೂ ಕೇಸರಿ ಶಾಲು ವಿವಾದ ವಿಷಯಗಳನ್ನು ಪ್ರಸ್ತಾಪಿಸಿ ಪೊಲೀಸರ ಕಾರ್ಯವೈಖರಿಗೆ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ''ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮೇಳನ'' ದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯದಲ್ಲಿ ಜನ ಬದಲಾವಣೆ ಬಯಸಿ ನಮ್ಮ ಸರ್ಕಾರ ತಂದಿದ್ದಾರೆ. ಅದೇ ರೀತಿ ಪೊಲೀಸರ ಕಾರ್ಯವೈಖರಿ ಸಹ ಬದಲಾಗಬೇಕು ಎಂದರು.
ಈ ಸಭೆಯಲ್ಲಿ ಮೊದಲು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಠಾಣೆಗಳ ಮುಂದೆ ಕೇಸರಿ ಶಾಲು ಹಾಕಿಕೊಂಡು ಕುಳಿತು ಫೋಟೋ ತೆಗೆಸಿಕೊಳ್ಳುವ ನೀವು (ಪೊಲೀಸರು) ಅದ್ಹೇಗೆ ನಿಷ್ಪಕ್ಷಪಾತ ಮತ್ತು ಪ್ರಜಾಪ್ರಭುತ್ವದ ಅನ್ವಯ ಕೆಲಸ ಮಾಡಲು ಸಾಧ್ಯವಾಗುತ್ತದೆ? ಕೊನೆ ಪಕ್ಷ ನೀವು ಹಾಕಿದ ಖಾಕಿ ಬಟ್ಟೆಗಾದರೂ ಗೌರವ ತರಬೇಕಲ್ಲವೇ? ವಿಜಯಪುರ ಜಿಲ್ಲೆ ಮಾತ್ರವಲ್ಲ ನಮ್ಮ ಜಿಲ್ಲೆ (ತುಮಕೂರು)ಯಲ್ಲಿ ಸಹ ಪೊಲೀಸರು ಕೇಸರಿ ಶಾಲು ಹಾಕಿಕೊಂಡಿದ್ದರು ಎಂಬುದಾಗಿ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?
ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳು ಕೆಲಸಕ್ಕಿಂತ ರಿಯಲ್ ಎಸ್ಟೇಟ್ ವ್ಯವಹಾರದಲ್ಲೇ ಹೆಚ್ಚು ವ್ಯಸ್ತವಾಗುತ್ತಾರೆ. ಡ್ರಗ್ಸ್ ತಡೆಗಟ್ಟಿದ್ದೀವಿ ಅಂತ ನೀವು ವರದಿ ಕೊಡುತ್ತೀರಾ. ಆದರೆ ಡ್ರಗ್ಸ್ ಮಾರಾಟ ಮಾತ್ರ ಮುಂದುವರೆದೇ ಇದೆ. ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ಸ್ ದಂಧೆ ಸೇರಿದಂತೆ ಅಕ್ರಮ ವ್ಯವಹಾರಗಳು ನಡೆಯಲು ಹೇಗಾಗುತ್ತದೆ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದ್ದಾರೆ. ಈ ಮಾತಿಗೆ ದನಿಗೂಡಿಸಿದ ಮುಖ್ಯಮಂತ್ರಿಗಳು, ಅಕ್ರಮ ಮರಳು ಗಣಿಗಾರಿಕೆ, ಡ್ರಗ್ಸ್ ದಂಧೆ ಹಾಗೂ ಭೂ ಮಾಫಿಯಾ ಹೀಗೆ ಕಾನೂನುಬಾಹಿರ ಚಟುವಟಿಕೆಗಳಿಗೆ ಪೊಲೀಸರ ಸಹಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾಗಿ ತಿಳಿದು ಬಂದಿದೆ.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ: ಸಂಸದ ಮುನಿಸ್ವಾಮಿ ಭವಿಷ್ಯ
ನೀವು (ಅಧಿಕಾರಿಗಳು) ಮನೆ ಹಾಗೂ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸಬೇಡಿ. ಮೊದಲು ಫೀಲ್ಡ್‌ಗಿಳಿದು ಕೆಲಸ ಮಾಡಿ. ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಕಾನೂನುಬಾಹಿರ ಕೃತ್ಯಗಳಿಗೆ ಕೆಳಹಂತದ ಅಧಿಕಾರಿಗಳಷ್ಟೇ ಮೇಲಧಿಕಾರಿಗಳೂ ಹೊಣೆಗಾರರಾಗಿರುತ್ತಾರೆ ಎಂದು ಮುಖ್ಯಮಂತ್ರಿಗಳು ತಾಕೀತು ಮಾಡಿದರು. ಇದು ಮೊದಲ ಸಭೆ, ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ. ಮುಂದಿನ ಸಭೆ ವೇಳೆಗೆ ಠಾಣೆಗಳ ಮಟ್ಟದಲ್ಲಿ ಆಡಳಿತ ಸುಧಾರಣೆಯಾಗಿರಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾಗಿ ಮೂಲಗಳು ಹೇಳಿವೆ.