*  ಸಚಿವ ಬಿ.ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ*  ನನ್ನ ಸ್ವ ಇಚ್ಛೆಯಿಂದ ಜೆಡಿಎಸ್‌ ತೊರೆದಿದ್ದೇನೆ*  ಶ್ರೀರಾಮುಲು ಬಳ್ಳಾರಿಯತ್ತ ಸಾಗುತ್ತಾರಾ? 

ಚಿತ್ರದುರ್ಗ(ಜೂ.12): ಮೊಳಕಾಲ್ಮುರು ತಾಲೂಕಿನ ಜನತಾ ಪರಿವಾರದ ಪ್ರಭಾವಿ ನಾಯಕ ಪಟೇಲ್‌ ಜಿ.ಎಂ.ತಿಪ್ಪೇಸ್ವಾಮಿ( ಎತ್ತಿನಹಟ್ಟಿಗೌಡ) ಶುಕ್ರವಾರ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬೂತ್‌ ಸಶಕ್ತಿಕರಣ ಅಭಿಯಾನದ ಸಮಾರೋಪದಲ್ಲಿ ಸಚಿವ ಬಿ.ಶ್ರೀರಾಮುಲು ಎತ್ತಿನಹಟ್ಟಿಗೌಡರಿಗೆ ಪಕ್ಷದ ಬಾವುಟ ನೀಡಿ ಬರಮಾಡಿದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿಶೇಖರ್‌, ಪೂರ್ಣಿಮಾ ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಸಿದ್ದೇಶ್‌ ಯಾದವ್‌, ಮಂಜುನಾಥ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಎತ್ತಿನಹಟ್ಟಿಗೌಡರು ಬಿಜೆಪಿ ಸೇರ್ಪಡೆಯಿಂದಾಗಿ ಪಕ್ಷಕ್ಕೆ ಮತ್ತಷ್ಟುಬಲ ಬಂದಂತಾಗಿದೆ ಎಂದರು.

ಆಸೆ ಆಮಿಷದಿಂದ ಸೇರುತ್ತಿಲ್ಲ

ನಂತರ ಮಾತನಾಡಿದ ಎತ್ತಿನಹಟ್ಟಿಗೌಡ, ಯಾವುದೇ ಆಸೆ ಆಮಿಷದಿಂದ ಬಿಜೆಪಿಯನ್ನು ಸೇರುತ್ತಿಲ್ಲ. ನನ್ನ ಸ್ವ ಇಚ್ಛೆಯಿಂದ ಜೆಡಿಎಸ್‌ ತೊರೆದಿದ್ದೇನೆ ಎಂದರು. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಉತ್ತಮವಾದ ಕಾರ್ಯ ಮಾಡಿದ್ದಾರೆ. ಎಲ್ಲರಿಗೂ ಅನುಕೂಲವಾಗುವ ಉತ್ತಮವಾದ ಯೋಜನೆ ಜಾರಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಉತ್ತಮ ಆಡಳಿತ ನೋಡಿ ಬಿಜೆಪಿ ಸೇರುತ್ತಿದ್ದೇನೆ ಎಂದರು. ಜೆಡಿಎಸ್‌ನಿಂದ ಎತ್ತಿನಹಟ್ಟಿಗೌಡರ ಪುತ್ರ ದೇವರಾಜ್‌ ಹಾಗೂ ಗುಡ್ಡದರಂಗವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೂರಪ್ಪ್ಪ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು.

'ಅಡ್ಡ ಮತದಾನಕ್ಕೆ ಪ್ರೇರೇಪಿಸುವ ಸಿದ್ದರಾಮಯ್ಯ 2 ತಲೆ ಹಾವಿದ್ದಂತೆ'

ಶ್ರೀರಾಮುಲು ಬಳ್ಳಾರಿಯತ್ತ ಸಾಗುತ್ತಾರಾ?

ಎತ್ತಿನಹಟ್ಟಿಗೌಡ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಸಚಿವ ಬಿ.ಶ್ರೀರಾಮಲು ಮುಂದಿನ ಚುನಾವಣೆಯಲ್ಲಿ ಮೊಳಕಾಲ್ಮುರು ಬಿಟ್ಟು ಬಳ್ಳಾರಿಯತ್ತ ಮುಖ ಮಾಡಲಿದ್ದಾರಾ ಎಂಬ ಸಂದೇಹಗಳು ಹರಿದಾಡಿವೆ. ಬಿಜೆಪಿಗೆ ಸೇರ್ಪಡೆಯಾದ ಎತ್ತಿನಹಟ್ಟಿಗೌಡ ಈ ಹಿಂದೆ ನಾಲ್ಕು ಬಾರಿ ಜನತಾ ಪರಿವಾರದಿಂದ ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಕಳೆದ ಬಾರಿ ಶ್ರೀರಾಮುಲು ಎದುರು ಜೆಡಿಎಸ್‌ ನಿಂದ ಕಣಕ್ಕಿಳಿದಿದ್ದರು. ಹಾಗಾಗಿ ಅವರು ಬಿಜೆಪಿಗೆ ಸೇರ್ಪಡೆಯಾದ್ದರಿಂದ ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಬಯಸಿದ್ದಾರೆ ಎನ್ನಲಾಗಿದೆ. ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರದಲ್ಲಿ ಶ್ರೀರಾಮುಲು ವರ್ಚಸ್ಸು ಕಡಿಮೆಯಾಗುತ್ತಿದ್ದು ತವರು ಜಿಲ್ಲೆ ಬಳ್ಳಾರಿಯಲ್ಲಿ ಜಾಗ ನೋಡಿಕೊಳ್ಳಲಿದ್ದಾರೆ. ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದಾಗಲೂ ಅವರು ಬಳ್ಳಾರಿಯಲ್ಲಿಯೇ ಹೆಚ್ಚು ಕಾಲ ಕಾಲ ಕಳೆಯುತ್ತಿದ್ದರು. ಹಾಗಾಗಿ ಈಗಿನಿಂದಲೇ ಸುರಕ್ಷಿತ ತಾಣ ಹುಡುಕಲು ಮುಂದಾಗಿದ್ದಾರೆ. ಬಳ್ಳಾರಿ ಗ್ರಾಮಾಂತರದ ಕಡೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.