Asianet Suvarna News Asianet Suvarna News

ಅನಂತಕುಮಾರ್ ಹೆಗಡೆ ಬದಲು ಕಾರ್ಯಕರ್ತರಿಗೆ ಟಿಕೆಟ್‌ ಕೊಡಿ: ಛಲವಾದಿ ನಾರಾಯಣಸ್ವಾಮಿ

ಅನಂತಕುಮಾರ್ ಹೆಗಡೆ ಬದಲಾಗಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ನಮಗೆ ಅಭ್ಯರ್ಥಿ ಮುಖ್ಯ ಅಲ್ಲ, ಪ್ರಧಾನಿ ಮೋದಿ ನಮಗೆ ಮುಖ್ಯ. ಸಣ್ಣ ಕಾರ್ಯಕರ್ತರಿಗೂ ಟಿಕೆಟ್ ನೀಡಿದರೆ ನಮ್ಮ ಪಕ್ಷ ಗೆಲುವು ಸಾಧಿಸುತ್ತದೆ ಎಂದು ವಿಧಾ‌ನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು. 

Give tickets to activists instead of Anant Kumar Hegde Says Chalavadi Narayanaswamy gvd
Author
First Published Mar 17, 2024, 6:03 AM IST

ವಿಜಯಪುರ (ಮಾ.17): ಅನಂತಕುಮಾರ್ ಹೆಗಡೆ ಬದಲಾಗಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ನಮಗೆ ಅಭ್ಯರ್ಥಿ ಮುಖ್ಯ ಅಲ್ಲ, ಪ್ರಧಾನಿ ಮೋದಿ ನಮಗೆ ಮುಖ್ಯ. ಸಣ್ಣ ಕಾರ್ಯಕರ್ತರಿಗೂ ಟಿಕೆಟ್ ನೀಡಿದರೆ ನಮ್ಮ ಪಕ್ಷ ಗೆಲುವು ಸಾಧಿಸುತ್ತದೆ ಎಂದು ವಿಧಾ‌ನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದ ನೂತನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗೌರವಿಸುತ್ತದೆ. ಸಂವಿಧಾನದ ವಿಚಾರದಲ್ಲಿ ನಮ್ಮದು ಯಾರ ಜೊತೆಗೂ ಹೊಂದಾಣಿಕೆ ಇಲ್ಲ. 

ನಮ್ಮ ಪಕ್ಷವೇ ಇರಲಿ, ಬೇರೆ ಪಕ್ಷವೇ ಇರಲಿ, ಸಂವಿಧಾನದ ವಿಚಾರದಲ್ಲಿ ನಮ್ಮ ಹೊಂದಾಣಿಕೆ ಇಲ್ಲ ಎಂದರು. ಸಂವಿಧಾನದ ತಿದ್ದುಪಡಿ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಬದಲಾವಣೆ ಬಗ್ಗೆ ನಮ್ಮ ಆಕ್ಷೇಪವಿದೆ. ಸಂವಿಧಾನದ ವಿಚಾರದಲ್ಲಿ ಹೇಳಿಕೆ ನೀಡಿ ಅನಂತಕುಮಾರ್ ಹೆಗಡೆ ಸಚಿವ ಸ್ಥಾನ ಕಳೆದುಕೊಂಡರು. ನಾವು ಈ ಹಿಂದೆ ಅನಂತಕುಮಾರ ಹೆಗಡೆ ಹೇಳಿಕೆ ವಿರೋಧಿಸಿ ಕೇಂದ್ರ ನಾಯಕರಿಗೆ ದೂರು ನೀಡಿದ್ದೆವು ಎಂಬುದನ್ನು ನೆನಪಿಸಿಕೊಂಡರು.

ಬಿಎಸ್‌ವೈ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್‌ ಸ್ಫೋಟಗಳಾಗಿರಲಿಲ್ಲವೆ?: ಸಚಿವ ಸಂತೋಷ್‌ ಲಾಡ್‌

ದಲಿತ ಸಂಘಟನೆಗಳು ಎಲ್ಲಿವೆ ಹುಡುಕಿಕೊಡಿ: ಸರ್ಕಾರ ದಲಿತರಿಗೆ ಮೀಸಲಾಗಿದ್ದ ಎಸ್‌ಇಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ. ಈ ಮೂಲಕ ಸರ್ಕಾರ ದಲಿತರ ಹಣವನ್ನು ದುರ್ಬಳಕೆ ಮಾಡಿದೆ. ದಲಿತರ ಹಣ ಸರ್ಕಾರ ಬೇರೆ ಬೇರೆ ಯೋಜನೆಗಳಿಗೆ ಬಳಸಿದರೂ ಇದರ ಬಗ್ಗೆ ಯಾವುದೇ ಸಂಘಟನೆಗಳು ಏನು ಮಾತನಾಡುತ್ತಿಲ್ಲ. ಎಲ್ಲದಕ್ಕೂ ಹೋರಾಟ ಮಾಡುವ ಸಂಘಟನೆಗಳು ಈ ವಿಚಾರದಲ್ಲಿ ಯಾಕೆ ಸುಮ್ಮನಾಗಿವೆ. ದಲಿತ ಸಂಘಟನೆಗಳು ಎಲ್ಲಿವೆ ಹುಡುಕಿಕೊಡಿ ಎಂದರು.

ಮಹದೇವಪ್ಪ ವಿರುದ್ಧ ಆಕ್ರೋಶ: ಮಹಾದೇವಪ್ಪನವರಿಗೆ ಹಾಗೂ ಸಿದ್ದರಾಮಯ್ಯನವರಿಗೆ ಗೆಳೆತನ ಕೆಟ್ಟೋಗಿದೆ. ಮತ ನಮ್ಮದು ನಾಯಕತ್ವ ಬೇರೆಯವರದ್ದು ಎಂದು ಹೇಳುತ್ತಿದ್ದಾರೆ. ನಾನು ಕಾಂಗ್ರೆಸ್‌ನಲ್ಲಿದ್ದಾಗ ಎರಡೂವರೇ ವರ್ಷ ದಲಿತರಿಗೆ ಬಿಟ್ಟುಕೊಡಿ ಎಂದು ಹೇಳಿದ್ದೆ. ಆಗ ಇದೇ ಮಹಾದೇವಪ್ಪ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಹೇಳಿದ್ದರು. ಅವತ್ತು ಮಾತಾಡೋಕೆ ಏನಾಗಿತ್ತು ಕಡಬು ತಿಂತಾ ಇದ್ದೀರಾ? ದಲಿತರಿಗಿಂತ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಮಾಡಿದ್ದು ಒಳ್ಳೆಯದು. ಅವರಿಗಿಂತ ದಲಿತ ನಾಯಕ ಯಾರೂ ಇಲ್ಲ ಎಂದು ಹೇಳಿದ್ದೀರಿ. ನಿಮಗೆ ಇವತ್ತು ದಲಿತರು ಕಾಣ್ತಾ ಇದಾರಾ ಎಂದು ಪ್ರಶ್ನಿಸಿದರು. 25 ಸಾವಿರ ಕೋಟಿ ದಲಿತರಿಗೆ ಮೀಸಲಿರುವ ಹಣ ನಿಮ್ಮನ್ನು ಮುಂದೆ ಇಟ್ಟುಕೊಂಡು ಲೂಟಿ ಮಾಡಿದ್ದಾರೆ. ಅಂಬೇಡ್ಕರ್ ರಕ್ತ ನಿಮ್ಮಲ್ಲಿ ಹರಿತಾ ಇದ್ರೆ ಮಹಾದೇವಪ್ಪನವರು ರಾಜೀನಾಮೆ ನೀಡಿ ಹೊರ ಬರಬೇಕೆಂದು ಆಗ್ರಹಿಸಿದರು.

ಸಚಿವ ಸಂತೋಷ ಲಾಡ್‌ಗೆ ತಲೆ ಸರಿ ಇದೆಯಾ?: ಸಂವಿಧಾನಕ್ಕೆ ಎಲ್ಲರೂ ಗೌರವ ನೀಡಬೇಕು. ಆದರೆ ಸಂವಿಧಾನ ನೀಡಿದ್ದು ಸೋನಿಯಾಗಾಂಧಿ, ರಾಜೀವಗಾಂಧಿ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದು ಖಂಡನೀಯ‌. ಇದನ್ನು ಕಾಂಗ್ರೆಸ್ ಯಾಕೆ ಪ್ರಶ್ನೆ ಮಾಡಲ್ಲ ಎಂದು ಕಿಡಿಕಾರಿದರು. ಈ ವೇಳೆ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ್ ಘಟಕಾಂಬಳೆ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ಚಿದಾನಂದ ಚಲವಾದಿ, ಬಿ. ಆರ್ ಎಂಟಮಾನ್, ವಿಜಯ ಜೋಶಿ ಉಪಸ್ಥಿತರಿದ್ದರು.

ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದು ಕಾಂಗ್ರೆಸ್ ಸರ್ಕಾರ: ಸಚಿವ ಸಂತೋಷ್‌ ಲಾಡ್

ಈಶ್ವರಪ್ಪ ಸ್ವತಂತ್ರವಾಗಿ ನಿಲ್ಲಲ್ಲ: ಕೆ.ಎಸ್.ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಆವೇಶದಲ್ಲಿ ಒಂದು ಮಾತು ಆಡಿರುತ್ತಾರೆ. ನನಗೂ ಟಿಕೆಟ್ ಸಿಗಲಿಲ್ಲ ಎಂದರೆ ನಾನು ಹಾಗೆ ಮಾತನಾಡುತ್ತಿದ್ದೆ. ಯಾವುದೇ ಕಾರಣಕ್ಕೂ ಅವರು ಸ್ವತಂತ್ರವಾಗಿ ನಿಲ್ಲಲ್ಲ, ಯಾಕೆಂದರೆ ಅವರಲ್ಲಿ ದೊಡ್ಡತನವಿದೆ. ಮನೆಯವರಿಗೂ ಅವರು ಉತ್ತರ ಕೊಡಬೇಕಲ್ಲ. ಮಗನಿಗೆ ಟಿಕೆಟ್ ಕೊಡಿಸಲೇಬೇಕು ಎಂದು ಹಠ ಹಿಡಿದಿದ್ದರು. ಈ ತೀರ್ಮಾನ ಮಾಡಿದ್ದು ಯಡಿಯೂರಪ್ಪನವರು ಅಥವಾ ವಿಜಯೇಂದ್ರ ಅಲ್ಲ. ಸೆಂಟ್ರಲ್‌ನವರು ತೀರ್ಮಾನ ಮಾಡಿದ್ದಾರೆ. ಸಾಧಕ-ಬಾಧಕ ಅವರು ಪರಿಶೀಲನೆ ಮಾಡಿಯೇ ಮಾಡಿದ್ದಾರೆ. ಹಾಗಾಗಿ ನಾವೆಲ್ಲರೂ ಸೇರಿ ಪಕ್ಷ ಕಟ್ಟೋಣ. ಮತ್ತೆ ನಮ್ಮ ಸರ್ಕಾರ ಬಂದು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ‌ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸುತ್ತೇವೆ ಎಂದು ಚಲವಾದಿ ನಾರಾಯಣಸ್ವಾಮಿ ಹೇಳಿದರು.

Follow Us:
Download App:
  • android
  • ios