ಬಿಎಸ್‌ವೈ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಸ್ಫೋಟಗಳಾಗಿರಲಿಲ್ಲವೆ?: ಸಚಿವ ಸಂತೋಷ್ ಲಾಡ್
ಹಿಂದೆ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ರಾಜ್ಯದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆದಿಲ್ಲವೆ? ಆವಾಗ ಇವರು ರಾಜೀನಾಮೆ ನೀಡಿದ್ದರಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ಹುಬ್ಬಳ್ಳಿ (ಮಾ.07): ಹಿಂದೆ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ರಾಜ್ಯದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆದಿಲ್ಲವೆ? ಆವಾಗ ಇವರು ರಾಜೀನಾಮೆ ನೀಡಿದ್ದರಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ಪರ ಘೋಷಣೆ ಹಾಕಿದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಏಕೆ ರಾಜೀನಾಮೆ ನೀಡಬೇಕು?. ಹಿಂದೆ ಬಿಜೆಪಿ ಕಾರ್ಯಕರ್ತರೇ ಮಂಡ್ಯದಲ್ಲಿ ಘೋಷಣೆ ಹಾಕಿದ್ದಾರಲ್ಲ, ಮೋದಿ, ಗೃಹ ಸಚಿವರು ರಾಜೀನಾಮೆ ಕೊಡುತ್ತಾರೆಯೇ?. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಸ್ಪೋಟಗಳಾಗಿವೆ. ಆಗ ಇವರಿಗೆ ನೈತಿಕತೆ ಇರಲಿಲ್ಲವೆ?.
ಅಭಿವೃದ್ಧಿಯ ವಿಚಾರವೇ ಗೊತ್ತಿಲ್ಲ: ಇಂತಹ ಚಟುವಟಿಕೆಗಳಿಗೆ ಯಾವುದೇ ಪಕ್ಷ ಬೆಂಬಲ ಕೊಡುವುದಿಲ್ಲ. ಚುನಾವಣೆ ಬಂದಿರುವುದರಿಂದಾಗಿ ಪಾಕಿಸ್ತಾನ್, ಬ್ಲಾಸ್ಟ್ ಇತ್ಯಾದಿ ಮುನ್ನೆಲೆಗೆ ಬರುತ್ತಿವೆ. ಪಾಕಿಸ್ತಾನ, ಅಪಘಾನಿಸ್ತಾನ್, ಟೆರರಿಸ್ಟ್ ಈ ಪದ ಬಿಟ್ಟರೆ ಬಿಜೆಪಿಯವರಿಗೆ ಅಭಿವೃದ್ಧಿಯ ವಿಚಾರವೇ ಗೊತ್ತಿಲ್ಲ. ಇಂತಹ ವಿಚಾರಗಳ ಮೇಲೆಯೇ ಇವರು ಚುನಾವಣೆಗೆ ಹೋಗುತ್ತಾರೆ. ಕಳೆದ ಹತ್ತು ವರ್ಷದಿಂದಲೂ ಅದನ್ನೇ ಮಾಡಿದ್ದಾರೆ ಎಂದು ಆರೋಪಿಸಿದರು. ಪಾಕಿಸ್ತಾನ, ಅಪಘಾನಿಸ್ತಾನ, ಮುಸಲ್ಮಾನ, ಹಿಂದು, ಹಿಂದುತ್ವ ಈ ಐದು ವಿಷಯಗಳ ಮೇಲೆ ಬಿಜೆಪಿಯವರು ಲೋಕಸಭಾ ಚುನಾವಣೆ ಮಾಡುತ್ತಾರೆ. ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಹಾಗೂ ಬಿಜೆಪಿಯ ಸುಳ್ಳಿನ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್ ಜಾರಿಗೆ ಬದ್ಧ: ಸಚಿವ ಸಂತೋಷ್ ಲಾಡ್
ನರೇಗಾ ಯೋಜನೆ ಕೂಲಿ ಹಣ ಬಿಡುಗಡೆಯಾಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಲಾಡ್, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಆದರೆ, ಕೂಲಿ ಮಾಡಿ 4-5 ತಿಂಗಳಾದರೂ ಸಹ ಹಣ ಬಿಡುಗಡೆಯಾಗಿಲ್ಲ. ರಾಜ್ಯಕ್ಕೆ ₹1400 ಕೋಟಿ ಬಾಕಿ ಹಣವಿದೆ. ಬರ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50 ದಿನ ಹೆಚ್ಚಿನ ಕೆಲಸ ಕೇಳಿದ್ದೇವೆ. ಆದರೆ, ಇದುವರೆಗೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ. ಬರಗಾಲದ ಪರಿಹಾರವಾಗಿ ನಾವು ಕೈಲಾದಷ್ಟು ಕೊಟ್ಟಿದ್ದೇವೆ. ಆದರೆ, ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದರು.