ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಯೊಬ್ಬರು ಮಹಾರಾಷ್ಟ್ರದ ಜಲ್ನಾದ ಮುನ್ಸಿಪಾಲ್ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. 2001-06ರ ತನಕ ಅವಿಭಜಿತ ವಸೇನೆಯಿಂದ ಪಾಲಿಕೆಯಲ್ಲಿ ಗೆದ್ದು ಸದಸ್ಯರಾಗಿದ್ದ ಶ್ರೀಕಾಂತ್ ಪಂಗಾರ್ಕರ್
ಜಲ್ನಾ: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಯೊಬ್ಬರು ಮಹಾರಾಷ್ಟ್ರದ ಜಲ್ನಾದ ಮುನ್ಸಿಪಾಲ್ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. 2001-06ರ ತನಕ ಅವಿಭಜಿತ ವಸೇನೆಯಿಂದ ಪಾಲಿಕೆಯಲ್ಲಿ ಗೆದ್ದು ಸದಸ್ಯರಾಗಿದ್ದ ಶ್ರೀಕಾಂತ್ ಪಂಗಾರ್ಕರ್, 2024ರ ವಿಧಾನಸಭಾ ಚುನಾವಣೆ ಮುನ್ನ ಏಕನಾಥ್ ಶಿಂದೆ ಬಣವನ್ನು ಸೇರಲು ಮುಂದಾಗಿದ್ದರು. ಆದರೆ ವಿರೋಧದ ಕಾರಣ ಪಕ್ಷದಿಂದ ಹೊರಗಿಡಲಾಗಿತ್ತು. ಹೀಗಾಗಿ ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಇವರ ಬಳಿ 2018ರಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆ ಮಹಾರಾಷ್ಟ್ರ ಎಟಿಎಸ್ ಶ್ರೀಕಾಂತ್‌ರನ್ನು ಬಂಧಿಸಿತ್ತು. ಗೌರಿ ಕೇಸಿನಲ್ಲಿ 2024ರಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2025ರಲ್ಲಿ 2000 ಕೋಟಿ ಮೌಲ್ಯದ 1.33 ಲಕ್ಷ ಕೆಜಿ ಡ್ರಗ್ಸ್ ವಶ: ಎನ್‌ಸಿಬಿ
ನವದೆಹಲಿ: ಕಳೆದ ವರ್ಷ ದೇಶಾದ್ಯಂತ ಅಂದಾಜು 2000 ಕೋಟಿ ರು .ಮೌಲ್ಯದ 1.33 ಲಕ್ಷ ಕೇಜಿ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದ್ದು, 994 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. 37 ಇಂಟರ್‌ಪೋಲ್ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ ಎಂದು ಮಾದಕ ವಸ್ತು ನಿಗ್ರಹ ಸಂಸ್ಥೆ (ಎನ್‌ಸಿಬಿ) ತಿಳಿಸಿದೆ.2025ರಲ್ಲಿ ಸಂಸ್ಥೆಯ ಕಾರ್ಯಾಚರಣೆ ಕುರಿತು ಅದು ವರದಿ ಬಿಡುಗಡೆ ಮಾಡಿದೆ. ಅದರನ್ವಯ, 3889 ಕೋಟಿ ರು. ಮೌಲ್ಯದ 77,000 ಕೇಜಿ ಡ್ರಗ್ಸ್‌ನನ್ನು ನಾಶಪಡಿಸಲಾಗಿದೆ. 131 ಕೇಸುಗಳು ಇತ್ಯರ್ಥಗೊಂಡಿದ್ದು, ಅವುಗಳಲ್ಲಿ 265 ದೋಷಿಗಳಿಗೆ ಶಿಕ್ಷೆ ಪ್ರಕಟವಾಗಿದೆ. 2024ರ 60.8%ಗೆ ಹೋಲಿಸಿದರೆ, ಶಿಕ್ಷೆ ದೊರಕಿಸಿದ ಪ್ರಮಾಣವು ಶೇ.67ಕ್ಕೆ ಏರಿಕೆಯಾಗಿದೆ. 14 ಇಂಟರ್‌ಪೋಲ್ ರೆಡ್ ನೋಟಿಸ್, 22 ಬ್ಲೂ ನೋಟಿಸ್, 1 ಸಿಲ್ವರ್ ನೋಟಿಸ್ ನೋಟಿಸ್ ಹೊರಡಿಸಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
ಬಾಂಗ್ಲಾ ಹಿಂದೂ ದೀಪು ಹತ್ಯೆ ರೂವಾರಿ ಇಮಾಮ್ ಬಂಧನ
ಢಾಕಾ: ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ದೀಪು ಚಂದ್ರ ದಾಸ್‌ನನ್ನು ಬರ್ಬರವಾಗಿ ಹತ್ಯೆಗೈದ ಪ್ರಮುಖ ಆರೋಪಿಯನ್ನು ಬಾಂಗ್ಲಾ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಮಸೀದಿಯೊಂದರಲ್ಲಿ ಇಮಾಮ್ ಆಗಿದ್ದ ಯಾಸಿನ್ ಅರಾಫತ್ (21) ಎಂದು ಗುರುತಿಸಲಾಗಿದೆ. ಈ ಮೂಲಕ ದೀಪು ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು ಭಾರತವಿರೋಧಿ ವಿದ್ಯಾರ್ಥಿ ನಾಯಕ ಉನ್ಮಾನ್ ಹದಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅದರ ಬೆನ್ನಲ್ಲೇ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿಮೀರಿತ್ತು. ಮತಾಂಧರು ಮೈಮೆನ್‌ಸಿಂಗ್‌ನ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದೀಪು ಸಿಂಗ್‌ನನ್ನು ಹತ್ಯೆ ಮಾಡಿ, ಶವವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.
ಅಮೆರಿಕ ವಶವಾದ ರಷ್ಯಾದ ಹಡಗಿನಲ್ಲಿ 3 ಭಾರತೀಯರಿದ್ರು
ನವದೆಹಲಿ: ತನ್ನ ನಿರ್ಬಂಧವನ್ನು ಮೀರಿ ಸಂಚರಿಸುತ್ತಿದೆಯೆಂಬ ಕಾರಣ ನೀಡಿ ಬುಧವಾರ ಅಮೆರಿಕ ಉತ್ತರ ಅಟ್ಲಾಂಟಿಕ್‌ನಲ್ಲಿ ವಶಪಡಿಸಿಕೊಂಡಿದ್ದ ರಷ್ಯಾ ಧ್ವಜವಿದ್ದ ‘ಮರಿನೇರಾ’ ಹೆಸರಿನ ತೈಲ ಟ್ಯಾಂಕರ್‌ನಲ್ಲಿ ರಷ್ಯಾದ ಸಿಬ್ಬಂದಿಯೊಂದಿಗೆ 3 ಭಾರತೀಯರೂ ಇದ್ದರು ಎಂದು ತಿಳಿದುಬಂದಿದೆ. ಜತೆಗೆ, ಉಕ್ರೇನ್‌ನ 20, ಜಾರ್ಜಿಯಾದ 6 ಸೇರಿ 28 ಮಂದಿ ಇದ್ದರು ಎನ್ನಲಾಗಿದೆ.
ಜರ್ಮನಿ ಜತೆ ಶೀಘ್ರ 71,000 ಕೋಟಿ ಸಬ್‌ಮರೀನ್ ಡೀಲ್?
ನವದೆಹಲಿ: ಚೀನಾ ಗಮನದಲ್ಲಿಟ್ಟುಕೊಂಡು ತನ್ನ ನೌಕಾಪಡೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲು ಮುಂದಾಗಿರುವ ಭಾರತ ಇದೀಗ ಜರ್ಮನಿಯ ಜತೆಗೆ 71 ಸಾವಿರ ಕೋಟಿ ರು. ಮೌಲ್ಯದ ಸಬ್‌ಮರೀನ್ ನಿರ್ಮಾಣ ಒಪ್ಪಂದಕ್ಕೆ ಮುಂದಾಗಿದೆ.
ಜರ್ಮನಿ ಛಾನ್ಸಲರ್ ಫೆಡ್ರಿಚ್ ಮರ್ಜ್ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ತಂತ್ರಜ್ಞಾನ ವರ್ಗಾವಣೆಯೊಂದಿಗೆ ನಡೆಯುವ ಈ ಡೀಲ್ ಕುರಿತು ಎರಡೂ ದೇಶಗಳು ಈಗಾಗಲೇ ಮಹತ್ವದ ಚರ್ಚೆ ಆರಂಭಿಸಿವೆ. ಒಂದು ವೇಳೆ ಈ ಒಪ್ಪಂದವೇನಾದರೂ ಕುದುರಿದರೆ ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದ ಆಗಲಿದೆ.
ಸದ್ಯ ಭಾರತೀಯ ನೌಕಾಪಡೆಯು ರಷ್ಯಾ ನಿರ್ಮಿತ 12 ಹಾಗೂ ಆರು ಹೊಸ ಫ್ರಾನ್ಸ್ ನಿರ್ಮಿತ ಸಬ್‌ಮರೀನ್‌ಗಳನ್ನು ಹೊಂದಿದೆ. ಒಂದು ವೇಳೆ ಈ ಡೀಲ್ ನಡೆದರೆ ಫ್ರಾನ್ಸ್ ಜತೆಗೆ ನಡೆಸಲುದ್ದೇಶಿಸಿದ್ದ ಇನ್ನೂ ಮೂರು ಹೊಸ ಸಬ್‌ಮರೀನ್ ಖರೀದಿ ಯೋಜನೆಯನ್ನು ಭಾರತ ಕೈಬಿಡುವ ನಿರೀಕ್ಷೆ ಇದೆ. ಜರ್ಮನಿಯ ಥಿಸೆನ್‌ಕ್ರುಪ್ ಮರೈನ್ ಸಿಸ್ಟಮ್ಸ್ ಜಿಎಂಬಿಎಚ್ ಮತ್ತು ಭಾರತದ ಸರ್ಕಾರಿ ಸ್ವಾಮ್ಯದ ಮಜ್‌ಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿ. ಜಂಟಿಯಾಗಿ ಈ ಸಬ್‌ಮರೀನ್ ನಿರ್ಮಾಣ ಮಾಡಲಿವೆ.ಈ ಸಬ್‌ಮರೀನ್‌ಗಳು ಏರ್ ಇಂಡಿಪೆಂಡೆಂಟ್ ಪ್ರೊಪುಲ್ಷನ್ ಸಿಸ್ಟಂಗಳನ್ನು ಹೊಂದಿರಲಿದೆ. ಡೀಸೆಲ್ ಎಲೆಕ್ಟ್ರಿಕ್ ಪ್ರೊಪುಲ್ಷನ್‌ಗೆ ಹೋಲಿಸಿದರೆ ವೇಗ ಹಾಗೂ ಹೆಚ್ಚಿನ ಅವಧಿಗೆ ನೀರಿನಡಿ ಉಳಿಯಲು ಅವಕಾಶ ಮಾಡಿಕೊಡುತ್ತದೆ.


