ಜೆಡಿಎಸ್ ಪಕ್ಷವು ಪ್ರಬಲವಾಗಿರುವ ಹಳೆ ಮೈಸೂರು ಭಾಗದ ಮಂಡ್ಯ, ಹಾಸನ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದೇನೆ. ಇದೇ ವೇಳೆ ಉತ್ತರ ಕರ್ನಾಟಕದ ರಾಯಚೂರು, ವಿಜಯಪುರ ಜಿಲ್ಲೆಗಳಿಗೂ ಪ್ರಚಾರ ಮಾಡಲಿದ್ದೇನೆ: ಎಚ್.ಡಿ.ದೇವೇಗೌಡ
ಬೆಂಗಳೂರು(ಏ.11): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಂಗಳವಾರದಿಂದ ರಾಜ್ಯದ ವಿವಿಧೆಡೆ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷವು ಪ್ರಬಲವಾಗಿರುವ ಹಳೆ ಮೈಸೂರು ಭಾಗದ ಮಂಡ್ಯ, ಹಾಸನ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದೇನೆ. ಇದೇ ವೇಳೆ ಉತ್ತರ ಕರ್ನಾಟಕದ ರಾಯಚೂರು, ವಿಜಯಪುರ ಜಿಲ್ಲೆಗಳಿಗೂ ಪ್ರಚಾರ ಮಾಡಲಿದ್ದೇನೆ. ನಾನು ಈ ಭಾಗದ ರೈತರ ಉಳಿವಿಗಾಗಿ ಸಾಕಷ್ಟುಕೆಲಸ ಮಾಡಿದ್ದೇನೆ. ನೆರೆಯ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದವಿದೆ. ಈ ಭಾಗದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ಈ ಭಾಗಗಳಲ್ಲಿ ನಾನು ಪ್ರಚಾರ ಮಾಡುತ್ತೇನೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಉಳಿದ ಭಾಗಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು.
ಸಚಿವ ಎಸ್‌ಟಿಎಸ್ ವಿರುದ್ಧ ಆಯೋಗಕ್ಕೆ ಜೆಡಿಎಸ್ ದೂರು
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೌಡರು, ಚುನಾವಣೆ ಬಳಿಕ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜತೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬಿಜೆಪಿ, ಕಾಂಗ್ರೆಸ್ ಟಿಕೆಟ್ ಪಟ್ಟಿಗೆ ಕಾಯುತ್ತಿರುವ ಜೆಡಿಎಸ್
ತಮ್ಮ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ನಾಳೆ, ನಾಡಿದ್ದು ಪ್ರಕಟಿಸಲಾಗುವುದು ಎನ್ನುತ್ತಲೇ ಪ್ರತಿ ದಿನ ಹೇಳಿಕೆ ನೀಡುತ್ತಿರುವ ಜೆಡಿಎಸ್ ನಾಯಕರು ವಾಸ್ತವವಾಗಿ ಬಿಜೆಪಿಯ ಮೊದಲ ಪಟ್ಟಿಮತ್ತು ಕಾಂಗ್ರೆಸ್‌ನ ಮೂರನೇ ಪಟ್ಟಿಬಿಡುಗಡೆಯಾಗುವುದನ್ನೇ ಕಾತರದಿಂದ ಕಾಯುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಪಟ್ಟಿ ಹೊರಬಿದ್ದ ಬಳಿಕ ಆ ಉಭಯ ಪಕ್ಷಗಳಲ್ಲಿ ಬಂಡಾಯ ಸ್ಫೋಟಗೊಂಡು ಅದರ ಲಾಭ ತಮ್ಮ ಪಕ್ಷಕ್ಕಾಗಲಿದೆ ಎನ್ನುವುದು ಜೆಡಿಎಸ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.
ಇತರ ಎಲ್ಲ ರಾಜಕೀಯ ಪಕ್ಷಗಳಿಗಿಂತ ಮುಂಚಿತವಾಗಿ ಕೆಲವು ತಿಂಗಳ ಹಿಂದೆ 93 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಪ್ರಕಟಿಸಿದ ಜೆಡಿಎಸ್ ನಾಯಕರು ನಂತರದಿಂದ ಇದುವರೆಗೆ ಎರಡನೇ ಪಟ್ಟಿಪ್ರಕಟಿಸುವ ಬಗ್ಗೆ ಹೇಳಿಕೆ ನೀಡುತ್ತಲೇ ಇದ್ದಾರೆ. ಇನ್ನೇನು ಸಂಜೆ ಬಿಡುಗಡೆಯಾಗಲಿದೆ, ನಾಳೆ ಬಿಡುಗಡೆ ಮಾಡಲಾಗುವುದು, ಇನ್ನೆರಡು ದಿನಗಳಲ್ಲಿ ಪಟ್ಟಿಪ್ರಕಟ ಖಚಿತ ಎಂಬ ಹೇಳಿಕೆ ನೀಡುತ್ತಿದ್ದರೂ ವಾಸ್ತವವಾಗಿ ಅನ್ಯ ಪಕ್ಷಗಳಿಂದ ವಲಸೆ ಬರುವವರಿಗಾಗಿ ಕಾಯಲಾಗುತ್ತಿದೆ. ಈ ನಡುವೆ ಹಾಸನ ಟಿಕೆಟ್ ಹಂಚಿಕೆ ಗೊಂದಲದ ಹಿನ್ನೆಲೆಯಲ್ಲಿ ಜೆಡಿಎಸ್ ಪಟ್ಟಿವಿಳಂಬವಾಗುತ್ತಿದೆ ಎಂಬ ನೆಪವೊಡ್ಡಿದರೂ ಅದು ನಿಜವಲ್ಲ. ಹಾಸನ ಕ್ಷೇತ್ರ ಬಿಟ್ಟು ಇತರ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಪ್ರಕಟಿಸಬಹುದಾಗಿತ್ತು ಎಂದು ಮೂಲಗಳು ತಿಳಿಸಿವೆ.
ರೇವಣ್ಣನ ಮನವೊಲಿಸುವ ಶಕ್ತಿ ಗೌಡರಿಗೂ ಇಲ್ಲ: ಕೆಲವ್ರು ಶಕುನಿಗಳಂತೆ ಬ್ರೈನ್ ವಾಶ್ ಮಾಡ್ತಿದ್ದಾರೆ: ಎಚ್‌ಡಿಕೆ
ಉಭಯ ಪಕ್ಷಗಳಲ್ಲಿ ಬಂಡಾಯ ತೀವ್ರ ಪ್ರಮಾಣದಲ್ಲಿ ಸ್ಫೋಟಗೊಳ್ಳುವುದೇ ಪಟ್ಟಿಗಳು ಪ್ರಕಟಗೊಂಡ ಬಳಿಕ. ಹೀಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಪಟ್ಟಿಬಿಡುಗಡೆಗೊಂಡ ಬಳಿಕ ಜೆಡಿಎಸ್‌ನ ಅಭ್ಯರ್ಥಿಗಳ ಎರಡನೇ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
