ಸಚಿವ ಸೋಮಶೇಖರ್ ಮಾತನಾಡಿರುವ ವಿಡಿಯೋವನ್ನು ಆಯೋಗಕ್ಕೆ ದೂರಿನೊಂದಿಗೆ ಸಲ್ಲಿಕೆ ಮಾಡಿದ ಜೆಡಿಎಸ್‌ನ ಕಾನೂನು ಘಟಕ ಅಧ್ಯಕ್ಷ ಎ.ಪಿ.ರಂಗನಾಥ್.
ಬೆಂಗಳೂರು(ಏ.11): ಜೆಡಿಎಸ್ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡುವುದರ ಜತಗೆ ಮತದಾರರಿಗೆ ಬಿರಿಯಾನಿ, ಹಣ ಹಂಚಿದ್ದಾರೆ ಎಂದು ಆರೋಪಿಸಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಜೆಡಿಎಸ್‌ನ ಕಾನೂನು ಘಟಕ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ದೂರು ನೀಡಿದ್ದಾರೆ. ಸಚಿವ ಸೋಮಶೇಖರ್ ಮಾತನಾಡಿರುವ ವಿಡಿಯೋವನ್ನು ಆಯೋಗಕ್ಕೆ ದೂರಿನೊಂದಿಗೆ ಸಲ್ಲಿಕೆ ಮಾಡಿದ್ದಾರೆ. ಅಗರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಜೆಡಿಎಸ್ ಮತ್ತು ಇತರೆ ಪಕ್ಷಗಳ ಕುರಿತು ಮನಬಂದಂತೆ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಬಿರಿಯಾನಿ, ಹಣ ನೀಡಿರುವ ಬಗ್ಗೆನೂ ಮಾತನಾಡಿದ್ದಾರೆ. ಇದರ ಜತೆಗೆ ಅಮೂಲ್, ನಂದಿನಿ ಬಗ್ಗೆನೂ ಚರ್ಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ವರುಣಾ ಅಭ್ಯರ್ಥಿ ಅಭಿಷೇಕ್ ಕಾಣೆ..ಕಂಗಲಾದ ಜೆಡಿಎಸ್ ಕಾರ್ಯಕರ್ತರು..!
ಸಭೆಯಲ್ಲಿ ತಮ್ಮ ಆದೇಶವನ್ನು ಪಾಲನೆ ಮಾಡದಿದ್ದರೆ ನಾಯಕರನ್ನು ಜೈಲಿಗೆ ಕಳುಹಿಸುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ದೂರಿನಲ್ಲಿ ಜೆಡಿಎಸ್ ನಾಯಕರ ಬಗ್ಗೆ ಸತ್ಯಕ್ಕೆ ದೂರವಾದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಚುನಾವಣೆ ವೇಳೆ ಪ್ರಚೋದನೆ ಮತ್ತು ದುರುದ್ದೇಶಪೂರಿತ ಆಧಾರ ರಹಿತ ಸಂದೇಶಗಳನ್ನು ಹರಡುವುದು ಸಾಮಾನ್ಯವಾಗಿದೆ. ಇದು ಗಂಭೀರ ಸಮಸ್ಯೆಯಾಗಿದ್ದು, ಚುನಾವಣೆಯ ಮೇಲೆ ಫಲಿತಾಂಶದ ಮೇಳೆ ಪರಿಣಾಮ ಬೀರಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಪರಿಚಿತರು ಇಂತಹ ಸಂದೇಶ ಹರಡದಂತೆ ತಡೆಯಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
