ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದಾರ್ಥ, ಬುದ್ಧ ಅಂತಾ ಟ್ರಸ್ಟ್ ಮಾಡಿ ನೀವೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಮಿ ಹೊಡಿಬೇಡಿ. ಬಡವರಿಗೆ ಬದುಕಲು ದಾರಿ ಮಾಡಿಕೊಡಿ. ವಿದ್ಯಾವಂತ ಯುವಕರಿಗೆ ಕೆಲಸ ಕೊಡಿ ಎಂದು ಆಗ್ರಹಿಸಿದರು.

ದಾವಣಗೆರೆ (ಜು.08): ಪ್ರಿಯಾಂಕ ಖರ್ಗೆ ಸರ್ ನಿಮ್ಮ ರೀತಿಯ ಅದೃಷ್ಟವಂತರು ಯಾರೂ ಇರಲ್ಲ. ಹತ್ತು, ಹನ್ನೆರಡನೇ ತರಗತಿ ಓದಿ ಸಾವಿರಾರು ಕೋಟಿ ಆಸ್ತಿ ಮಾಡೋದು ದೊಡ್ಡ ಸಾಧನೆ. ಒಂದೇ ಸಂಖ್ಯೆಯ ಹತ್ತಾರು ಕಾರು ಖರೀದಿಸುವ ಶಕ್ತಿ ಎಲ್ಲರಿಗೂ ಸಿಗಲ್ಲ. ಸಿದ್ದಾರ್ಥ, ಬುದ್ಧ ಅಂತಾ ಟ್ರಸ್ಟ್ ಮಾಡಿ ನೀವೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಭೂಮಿ ಹೊಡಿಬೇಡಿ. ಬಡವರಿಗೆ ಬದುಕಲು ದಾರಿ ಮಾಡಿಕೊಡಿ. ವಿದ್ಯಾವಂತ ಯುವಕರಿಗೆ ಕೆಲಸ ಕೊಡುವ ಕೊಡಿಸಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕೆ ಮಾಡಿದರು.

ದಾವಣಗೆರೆಯಲ್ಲಿ ನಡೆದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಜನ್ಮದಿನಾಚರಣೆ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಸಾಹೇಬ್ರೆ ನೀವ್ ನನ್ನನ್ನ ಯಾವುದೇ ಪ್ರಾಣಿಗೆ ಹೋಲಿಸಿ, ನಿಮ್ಮ ಪದಕೋಶದಲ್ಲಿದ್ದ ಅಷ್ಟು ಪದ ಬಳಸಿ ನನ್ನ ಬೈಯಿರಿ. ಪ್ರತಿ ನಿತ್ಯ ಆರ್‌ಎಸ್‌ಎಸ್ ಬಿಜೆಪಿ ವಿರುದ್ಧ ಮಾತನಾಡಿ. ಆದರೆ, ಡಿಪಾರ್ಟ್ಮೆಂಟ್ ಏಜೆನ್ಸಿಗಳನ್ನು ಏನು ಮಾಡಿದ್ದೀರಿ ಹೇಳಿ. ನನ್ನ ಬೈದ್ರೆ ನಿಮಗೆ ಅಷ್ಟ ಖುಷಿ ಸಿಗುತ್ತೆ ಅಂದರೆ ಅದಕ್ಕೂ ಕಲ್ಲು ಹಾಕಲ್ಲ. ಆದರೆ, ರಾಜ್ಯದಲ್ಲಿ ನಿರುದ್ಯೋಗ ಭತ್ಯೆ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು 2 ವರ್ಷವಾದರೂ ಯುವನಿಧಿ ಜಾರಿ ಮಾಡಲಿಲ್ಲ. ಪ್ರತಿವರ್ಷ 1.5 ಲಕ್ಷ ಇಂಜಿನಿಯರಿಂಗ್ ಗ್ರಾಜ್ಯೂಯಟ್ಸ್ ಹೊರ ಬರ್ತಿದ್ದಾರೆ. ಅವರು ಕೆಲಸ ಸಿಗದೇ ಆರ್ಟ್ಸ್ ಕಲಿತವರ ರೀತಿ ಅಲೆದಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ನನ್ನನ್ನ ಎಷ್ಟಾದ್ರೂ ಬೈಯರಿ, ಯುವಕರಿಗೆ ಕೆಲಸ ಕೊಡಿ:

ಪ್ರಿಯಾಂಕ್ ಖರ್ಗೆ ಸರ್ ನಿಮ್ಮ ಇಲಾಖೆಯ ಬಗ್ಗೆ ಮಾತನಾಡಿ, ನಿಮ್ಮ ಇಲಾಖೆ ಸಾಧನೆ ಬಗ್ಗೆ ಮಾತನಾಡಿ. ನಿಮ್ಮ ರೀತಿಯ ಅದೃಷ್ಟವಂತರು ಯಾರೂ ಇರಲ್ಲ ಸರ್. ಹತ್ತು, ಹನ್ನೆರಡನೇ ತರಗತಿ ಓದಿ ಸಾವಿರಾರು ಕೋಟಿ ಆಸ್ತಿ ಮಾಡಿದ್ದೀರಿ. ಒಂದೇ ಸಂಖ್ಯೆಯ ಹತ್ತಾರು ಕಾರು ಖರೀದಿಸುವ ಶಕ್ತಿ ಎಲ್ಲರಿಗೂ ಸಿಗಲ್ಲ ಸರ್. ಬಡವರಿಗೆ ಬದುಕಲು ದಾರಿ ಮಾಡಿಕೊಡಿ. ನನ್ನ ದಿನಾಲೂ ಬೈಯಿರಿ, ಆದರೆ ನಮ್ಮ ಹುಡುಗರಿಗೆ ಕೆಲಸ ಕೊಡಿ. ಸಿದ್ದಾರ್ಥ, ಬುದ್ಧ ಅಂತಾ ಟ್ರಸ್ಟ್ ಮಾಡಿ ನೀವೇ KIADB ಭೂಮಿ ಹೊಡಿಬೇಡಿ ಸರ್. ಹೊಸ ಉದ್ಯಮಿಗಳ ಕಂಪನಿಗಳಿಗೆ ಕೆಐಎಡಿಬಿ ಭೂಮಿ ಕೊಡಿಸಿ ವಿದ್ಯಾವಂತ ಯುವಕರಿಗೆ ಕೆಲಸ ಸಿಗುವ ಹಾಗೇ ಮಾಡಿ ಸರ್ ಎಂದು ವಾಗ್ದಾಳಿ ಮಾಡಿದರು.

ಬಸವರಾಜ ರಾಯರೆಡ್ಡಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಕೊಟ್ಟಿದ್ದಾರೆ. ವಿಶ್ವವಿಖ್ಯಾತ ಅರ್ಥ ಶಾಸ್ತ್ರಜ್ಞ ಸಿದ್ದರಾಮಯ್ಯ ಸಾಹೇಬರು‌ 2023ರ ಚುನಾವಣೆಯಲ್ಲಿ ಹೇಳಿದ್ದರು. ಎಲ್ಲರಿಗೂ ಬಸ್ ಸೇವೆ ಉಚಿತ. ಕಾಕಾ ಪಾಟೀಲ ನೀನಗೂ ಕೊಡ್ತೀನಿ. ಮಹಾದೇವಪ್ಪ ನಿನ್ನ ಹೆಂಡತಿಗೂ ಗೃಹಲಕ್ಷ್ಮೀ ಹಣ ಬರುತ್ತದೆ ಎಂದಿದ್ದರು. ಯುವನಿಧಿ, 10 ಕೆಜಿ ಅಕ್ಕಿ ಕೊಡ್ತೀವಿ ಅಂತೆಲ್ಲಾ ಹೇಳಿದ್ದರು. ಇದೆಲ್ಲ ಹೇಳುವಾಗ ನಿಮಗೆ ರೋಡ್ ಮಾಡಲ್ಲ, ಟಾರ್ ಹಾಕಲ್ಲ, ಅಭಿವೃದ್ಧಿ ಕೆಲಸ ಮಾಡಲ್ಲ, ಮುದ್ರಾಂಕ ಬೆಲೆ ಸೇರಿ ಎಲ್ಲರ ಮೇಲೆ ಬರೆ ಎಳಿತೀವಿ ಅಂತಾ ಹೇಳಿದ್ದರಾ? ಕಾಕಾ ಪಾಟೀಲ್‌ ಗೂ ಫ್ರೀ... ಮಹಾದೇವಪ್ಪಗೂ ಫ್ರೀ ನನ್ನ ಹೆಂಡತಿಗೂ ಫ್ರೀ ಅಂದಿದ್ರಲ್ಲಾ..., ಹನ್ನೊಂದು ತಿಂಗಳಿಂದ ಗೃಹಲಕ್ಷ್ಮೀ ಬಂದಿಲ್ಲ. ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿದ ನಿಮ್ಮನ್ನ ಮನಮೋಹನ ಸಿಂಗ್‌ಗಿಂತ ಒಳ್ಳೆಯ ಅರ್ಥಶಾಸ್ತ್ರ ಅಂತಾ ಜನ ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.

ಮೈಸೂರು ವಿಮಾನ ನಿಲ್ದಾಣ ಪುನಾರಂಭಕ್ಕೆ ಆಶೀರ್ವಾದ ಮಾಡಿದ್ದು ಸಿದ್ದೇಶಣ್ಣ. ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದಾಗ ಕೇಂದ್ರ ವಿಮಾನಯಾನ ಖಾತೆ ಸಚಿವರನ್ನು ಭೇಟಿ ಮಾಡಿ ಅನುಮೋದನೆ ಕೊಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ, ಬೇರೆ ವಿಚಾರಗಳ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ವಿಜಯೇಂದ್ರ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು. ವಿಜಯೇಂದ್ರ ಶಕ್ತಿ ಮೀರಿ ಪಕ್ಷ ಕಟ್ಟುವ ಕೆಲಸ ಮಾಡುತ್ತ ಬಂದಿದ್ದಾರೆ. ಅವರನ್ನು ನಿಯುಕ್ತಿ ಮಾಡಿದ್ದು ರಾಷ್ಟ್ರೀಯ ನಾಯಕರು. ಅವರ ನಿರ್ಧಾರದ ಅನುಗುಣವಾಗಿ ಅವರ ಕೆಳಗಡೆ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಇದರ ಆಚೆಗೆ ನನಗೆ ಯಾವುದೂ ಗೊತ್ತಿಲ್ಲ ಎಂದು ಹೇಳಿದರು.

ಬಿಜೆಪಿ ಇಲ್ಲದೇ ಪ್ರತಾಪ್ ಸಿಂಹಗೆ ಅಸ್ತಿತ್ವ ಇದೆಯಾ? ಬಿಜೆಪಿ ಬಿಟ್ಟರೆ ನಾನೊಬ್ಬ ರೈಟರ್. ಕಮಲ ಅಡಿಯೇ ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ನನ್ನ ಒಳ್ಳೆಯ ಕೆಲಸಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಬಿಜೆಪಿ. ಮೊನ್ನೆ ರಾಜ್ಯಾಧ್ಯಕ್ಷರ ಜೊತೆ ನಾನು ಸುದ್ದಿಗೋಷ್ಠಿ ಮಾಡಿದ್ದೇನೆ. ರಾಜ್ಯಾಧ್ಯಕ್ಷರು ಕರೆದ ಜನಾಕ್ರೋಶ ಯಾತ್ರೆ, ಮೈಸೂರು ಚಲೋದಲ್ಲಿ ಭಾಗಿಯಾಗಿದ್ದೇನೆ. ಪಕ್ಷದ ಕೆಲಸ ಯಾರ ಹೇಳಿದರೂ ನಾನು ಮಾಡುತ್ತೇನೆ. ಪಕ್ಷದ ಅಡಿಯಾಳುಗಳು ನಾವೆಲ್ಲ, ಪಕ್ಷಕ್ಕಾಗಿ ಕೆಲಸ ಮಾಡ್ತಿದೀವಿ ಎಂದು ಹೇಳಿದರು.