ಅಧಿಕಾರಕ್ಕೆ ಬಂದು ನೂರು ದಿನ ಪೂರೈಸುವುದರೊಳಗೇ ಇಷ್ಟೊಂದು ಆರೋಪಗಳು ಬಂದಿವೆ. ಸರ್ಕಾರ ನೂರು ದಿನ ಪೂರೈಸುವ ಹೊತ್ತಿಗೆ ನಿಮ್ಮದು 100 ಪರ್ಸೆಂಟ್‌ ಭ್ರಷ್ಟಸರ್ಕಾರವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಟೀಕಿಸಿದ ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌ 

ಕಾರ್ಕಳ(ಆ.13): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನೂರು ದಿನ ತುಂಬುವಷ್ಟರಲ್ಲಿ 100 ಪರ್ಸೆಂಟ್‌ ಸರ್ಕಾರವಾಗಲಿದೆ ಎಂದು ಶಾಸಕ, ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮರು ದಿನದಿಂದಲೇ ಅಧಿಕೃತವಾಗಿ ಭ್ರಷ್ಟಾಚಾರದ ಅಂಗಡಿ ಬಾಗಿಲು ತೆರೆದ ಕಾಂಗ್ರೆಸ್ಸಿಗರು ತಮ್ಮ ಮೇಲಿನ ಆರೋಪಗಳೆಲ್ಲ ನಕಲಿ ಎಂದು ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ 15 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದಾರೆ. 

ಕಾಂಗ್ರೆಸ್ ಸರ್ಕಾರಕ್ಕೆ ಹಿಂದುಗಳ ಧ್ವನಿ ಹತ್ತಿಕ್ಕಲು ಸಾಧ್ಯವಾಗದು: ಡಾ.ಭರತ್‌ ಶೆಟ್ಟಿ

ಈ ಸರ್ಕಾರದ ಧನದಾಹಕ್ಕೆ ಈಗ ಗುತ್ತಿಗೆದಾರ ಗೌತಮ್‌ ಪ್ರಾಣ ತೆತ್ತಿದ್ದಾರೆ ಎಂದು ಆರೋಪಿಸಿದ ಅವರು ‘ಈ ಆತ್ಮಹತ್ಯೆಯೂ ನಕಲಿ ಎಂದು ಹೇಳುತ್ತೀರಾ?’ ಎಂದು ಪ್ರಶ್ನಿಸಿದರು. ಅಧಿಕಾರಕ್ಕೆ ಬಂದು ನೂರು ದಿನ ಪೂರೈಸುವುದರೊಳಗೇ ಇಷ್ಟೊಂದು ಆರೋಪಗಳು ಬಂದಿವೆ. ಸರ್ಕಾರ ನೂರು ದಿನ ಪೂರೈಸುವ ಹೊತ್ತಿಗೆ ನಿಮ್ಮದು 100 ಪರ್ಸೆಂಟ್‌ ಭ್ರಷ್ಟ ಸರ್ಕಾರವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಟೀಕಿಸಿದರು.