ಕಡಿಮೆ ಸೀಟು ಬಂದ್ರೂ ಗುದ್ದಾಡಿ ಬಿಜೆಪಿ ಅಧಿಕಾರಕ್ಕೆ: ರಮೇಶ್ ಜಾರಕಿಹೊಳಿ
ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ನವರು ಸುಮ್ಮನೇ ಹವಾ ಸೃಷ್ಟಿಸುತ್ತಿದ್ದಾರೆ. ನಾವು ಹೇಗಾದರೂ ಮಾಡಿ ಸರ್ಕಾರ ರಚಿಸುತ್ತೇವೆ. ಎಲ್ಲ ಶಕ್ತಿಗಳನ್ನು ಬಳಸಿ ಸರ್ಕಾರ ರಚಿಸುವುದು ಪಕ್ಕಾ: ಜಾರಕಿಹೊಳಿ
ಬೆಳಗಾವಿ(ಜ.25): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸೀಟು ಬಂದರೂ ಗುದ್ದಾಡಿ ಬಿಜೆಪಿ ಸರ್ಕಾರ ರಚಿಸುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. ಈ ಮೂಲಕ ಚುನಾವಣೆ ಫಲಿತಾಂಶಕ್ಕೂ ಮೊದಲೇ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ನವರು ಸುಮ್ಮನೇ ಹವಾ ಸೃಷ್ಟಿಸುತ್ತಿದ್ದಾರೆ. ನಾವು ಹೇಗಾದರೂ ಮಾಡಿ ಸರ್ಕಾರ ರಚಿಸುತ್ತೇವೆ. ಎಲ್ಲ ಶಕ್ತಿಗಳನ್ನು ಬಳಸಿ ಸರ್ಕಾರ ರಚಿಸುವುದು ಪಕ್ಕಾ. ಒಂದು ವೇಳೆ ಕಡಿಮೆ ಸೀಟ್‌ಗಳು ಬಂದರೂ ಗುದ್ದಾಡಿ ಬಿಜೆಪಿ ಸರ್ಕಾರ ರಚಿಸುತ್ತೇವೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.
ಖರ್ಗೆ ಸಿಎಂ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ : ಗಂಭೀರ ಆರೋಪ
ಚುನಾವಣೆ ಸಮೀಪ ಬರುತ್ತಿದ್ದು, ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಹಬ್ಬಿಸುವ ವದಂತಿಗಳಿಗೆ ಕಿವಿಗೊಡಬೇಡಿ. ಇವರು ಮೂರು ತಿಂಗಳು ಮಾತ್ರ ಪ್ರತ್ಯಕ್ಷರಾಗಿ ನಂತರದ ನಾಲ್ಕೂವರೆ ವರ್ಷ ಕಾಣೆಯಾಗುತ್ತಾರೆ. ಚುನಾವಣೆ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಅಪಪ್ರಚಾರ ಮಾಡುವ ಇಂಥ ಷಡ್ಯಂತ್ರಗಳಿಂದ ದೂರವಿರಿ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಪುನರುಚ್ಚರಿಸಿದರು. ಇದೇ ವೇಳೆ, ತಾವು ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿಯಲ್ಲೇ ಇದ್ದು ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದರು.