Asianet Suvarna News Asianet Suvarna News

ಖರ್ಗೆ ಸಿಎಂ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ : ಗಂಭೀರ ಆರೋಪ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೊದಲು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಭದ್ರಪಡಿಸಿಕೊಳ್ಳಲಿ. ತಮ್ಮ ಸ್ವಪ್ರಯತ್ನದಿಂದ ಗೆದ್ದು ತೋರಿಸಲಿ ನಂತರ ಇನ್ನೊಬ್ಬರ ಬಗ್ಗೆ ಟೀಕಿಸಲಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದರು.

 CM Ibrahim Serious Allegation Against SIddaramaiah snr
Author
First Published Jan 25, 2023, 5:50 AM IST

 ಅಥಣಿ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೊದಲು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಭದ್ರಪಡಿಸಿಕೊಳ್ಳಲಿ. ತಮ್ಮ ಸ್ವಪ್ರಯತ್ನದಿಂದ ಗೆದ್ದು ತೋರಿಸಲಿ ನಂತರ ಇನ್ನೊಬ್ಬರ ಬಗ್ಗೆ ಟೀಕಿಸಲಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸಿದ್ದರಾಮಯ್ಯ ಅವರು ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ ಟೀಮ್‌ ಎಂದು ಟೀಕಿಸುವ ಮೊದಲು ತಾವು ಮಾತಿನಲ್ಲಿ ಬದ್ಧತೆಯಿಂದ ವರ್ತಿಸುವುದನ್ನು ಕಲಿಯಲಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾಂಗ್ರೆಸ್ಸಿನ 13 ಜನ ಶಾಸಕರನ್ನು ಮುಂಬೈಗೆ ಕಳಿಸಿದ್ದು ಇದೇ ಸಿದ್ದರಾಮಯ್ಯ. ಬಿಜೆಪಿಯ ಬಿ ಟೀಮ… ಯಾರು ಎಂಬುದು ಆತ್ಮಾವಲೋಕನೆ ಮಾಡಿಕೊಳ್ಳಲಿ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಲೇಹರಸಿಂಗ್‌ ಅವರಿಗೆ ಕಾಂಗ್ರೆಸ್ಸಿನ ಮತಗಳನ್ನು ಹಾಕಿಸಿದ್ದು, ಇದೇ ಸಿದ್ದರಾಮಯ್ಯನವರು. ದಮ್… ಇದ್ದರೇ, ತಾಕತ್‌ ಇದ್ದರೇ ನನ್ನ ಮೇಲೆ ಭ್ರಷ್ಟಾಚಾರದ ಆರೋಪವನ್ನು ಸಾಬೀತು ಮಾಡಲಿ ಎಂದು ಹೇಳುವ ಸಿದ್ದರಾಮಯ್ಯ ಅವರು ಈಗ ಲೋಕಾಯುಕ್ತಕ್ಕೆ ಬಂದಿರುವ ದೂರುಗಳಿಗೆ ಮೊದಲು ಉತ್ತರವನ್ನು ನೀಡಲಿ. ಆಮೇಲೆ ಬಹಿರಂಗ ಚರ್ಚೆ ಮಾಡಲಿ. ಸಿದ್ದರಾಮಯ್ಯ ಅವರು ಮಂಡಿಸಿದ ಎಲ್ಲಾ ಬಜೆಟ್‌ಗಳ ಹಿಂದೆ ಮತ್ತು ಪ್ರಮುಖ ಯೋಜನೆಗಳ ಹಿಂದೆ ನನ್ನ ಪರಿಶ್ರಮವಿದೆ. ಅದನ್ನು ಸಿದ್ದರಾಮಯ್ಯ ಅವರು ಮರೆಯಬಾರದು ಎಂದರು.

ಸಿದ್ದರಾಮಯ್ಯ ಮತ್ತು ಡಿಕೆಶಿ ಜಂಟಿಯಾಗಿ ನಡೆಸುತ್ತಿರುವ ಎಸಿ ಬಸ್‌ಗಳಲ್ಲಿ ಕುಳಿತು ಐಷಾರಾಮಿ ಯಾತ್ರೆಗಳನ್ನು ಮಾಡುತ್ತಾ ಹೊರಟಿದ್ದಾರೆ. ಇದರಿಂದ ಜನರ ಸಂಕಷ್ಟವನ್ನು ಅರಿಯಲು ಸಾಧ್ಯವಿಲ್ಲ. ಜನರು ಇಂತಹ ಸುಳ್ಳು ಆಶ್ವಾಸನೆಗಳಿಗೆ ಮರುಳಾಗುವುದಿಲ್ಲ. ಎಸಿ ಬಸ್‌ಗಳಲ್ಲಿ ಕುಳಿತು ಜಿಲ್ಲೆಯಿಂದ ಜಿಲ್ಲೆಗೆ ಹೋಗುವ ಮೊದಲು ಪ್ರತಿ ಹಳ್ಳಿಗಳಲ್ಲಿ ಜನರ ಮಧ್ಯೆ ಹೋಗಿ ಅವರ ಸಮಸ್ಯೆ ಅರಿಯಲಿ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಲಾಟರಿ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯನವರ ಮಾತಿಗೆ ತಿರುಗೇಟು ನೀಡಿದ ಅವರು, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ಮಾಡುವ ವಿಚಾರದಲ್ಲಿ ದೇವೇಗೌಡರಿಗೆ ಕುಮಾರಸ್ವಾಮಿ ಅವರ ಬದಲಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರ ವ್ಯಕ್ತಪಡಿಸಿದಾಗ ಅಂದು ಇದೇ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ಅವರು ಯಾವುದೇ ಸಂದರ್ಭದಲ್ಲಿ ಲಾಟರಿ ಮುಖ್ಯಮಂತ್ರಿ ಆಗಿಲ್ಲ. ಅವರು ಮುಖ್ಯಮಂತ್ರಿಯಾಗಿ ಮಾಡಿದ ಜನಪರ ಕಾರ್ಯಗಳು ಜನಪ್ರಿಯವಾಗಿವೆ. ಅಂದಿನಿಂದ ಇಂದಿನವರೆಗೂ ರಾಜ್ಯದ ಜನರು ಮತ್ತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿ ಎಂದು ಬಯಸುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ ಪಕ್ಷ ನುಡಿದಂತೆ ನಡೆದುಕೊಳ್ಳುವ ಪಕ್ಷ. ನಮ್ಮ ಪಕ್ಷಕ್ಕೆ ಸ್ವಯಂ ಪ್ರೇರಿತರಾಗಿ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ. ಗುಲಾಬ್‌ನಬಿ ಯಾದವ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮಗ ಪಕ್ಷದ ಪ್ರಚಾರಕ್ಕಾಗಿ ಬರುತ್ತಿದ್ದಾರೆ. ಪಕ್ಷವನ್ನು ಎಲ್ಲಡೆ ಇನ್ನಷ್ಟುಗಟ್ಟಿಯಾಗಿ ಸಂಘಟಿಸುವ ಮೂಲಕ ಎಲ್ಲ ಕಡೆಗಳಲ್ಲಿಯೂ ಸ್ಪರ್ಧೆ ಮಾಡುತ್ತೇವೆ. ಶೀಘ್ರದಲ್ಲಿಯೇ ಎಲ್ಲ ಮತಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios