Asianet Suvarna News Asianet Suvarna News

Mekedatu Politics: ಕಾರಜೋಳ ಸುಳ್ಳು ಮಾಹಿತಿ ತೋರಿಸಿ ದಾರಿ ತಪ್ಪಿಸುತ್ತಿದ್ದಾರೆ: ಎಂಬಿಪಾ

*  ಮೇಕೆದಾಟು ಬಗ್ಗೆ ಕಾರಜೋಳ ಸುಳ್ಳು ಮಾಹಿತಿ 
*  ಎಲ್ಲ ಪ್ರಕ್ರಿಯೆ ನಡೆದಿದ್ದು ಕಾಂಗ್ರೆಸ್‌ ಅವಧಿಯಲ್ಲೇ
*  ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಏನು ಮಾಡಿದೆ?
 

Former Minister MB Patiil Slams on Minister Govind Karjol grg
Author
Bengaluru, First Published Jan 13, 2022, 4:34 AM IST

ಬೆಂಗಳೂರು(ಜ.13):  ಮೇಕೆದಾಟು ಯೋಜನೆ(Mekedatu Project) ಜಾರಿ ಸಂಬಂಧ ವಿಸ್ತೃತ ಯೋಜನಾ ವರದಿ, ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಕಾಂಗ್ರೆಸ್‌ ಸರ್ಕಾರದ(Congress Government) ಅವಧಿಯಲ್ಲೇ ನಡೆದಿದ್ದು, ಬಿಜೆಪಿ ಸರ್ಕಾರ(BJP Government) ಈ ವಿಷಯದಲ್ಲಿ ಏನೂ ಮಾಡಿಲ್ಲ. ಹೀಗಿದ್ದರೂ ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಅವರು ಸುಳ್ಳು ಮಾಹಿತಿ ನೀಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಎಂದು ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಎಂ.ಬಿ ಪಾಟೀಲ್‌(MB Patil) ಆರೋಪಿಸಿದ್ದಾರೆ.

ಪೂರ್ವ ಕಾರ್ಯಸಿದ್ಧತಾ ವರದಿ (ಪ್ರಿ ಫೀಜಿಬಿಲಿಟಿ ರಿಪೋರ್ಟ್‌-ಪಿಎಫ್‌ಆರ್‌) ಸಿದ್ಧಪಡಿಸಿ, ಪರಿಷ್ಕೃತ ಡಿಪಿಆರ್‌ಗೆ(DPR) ಆಡಳಿತಾತ್ಮಕ ಒಪ್ಪಿಗೆಯನ್ನು ಕಾಂಗ್ರೆಸ್‌ ಆಡಳಿತದಲ್ಲಿ ನೀಡಲಾಗಿತ್ತು. ಯೋಜನೆಗೆ ಒಪ್ಪಿಗೆ ಪಡೆಯಲು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೂ ಡಿಪಿಆರ್‌ ಸಲ್ಲಿಸಲಾಗಿದ್ದು, ಈ ವಿಷಯದಲ್ಲಿ ತಮ್ಮಿಂದಾಗಲಿ, ಸರ್ಕಾರದಿಂದಾಗಲಿ ಯಾವುದೇ ವಿಳಂಬ ಆಗಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಕಳೆದ ಎರಡೂವರೆ ವರ್ಷಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಸರ್ಕಾರ ಏನು ಮಾಡಿದೆ ಎಂಬುದನ್ನು ಹೇಳಬೇಕು ಎಂದೂ ಒತ್ತಾಯಿಸಿದ್ದಾರೆ.

ನನ್ನ ಬಗ್ಗೆ ಮಾತನಾಡೋವಾಗ ನಾಲಿಗೆ ಮೇಲೆ ಹಿಡಿತ ಇರಲಿ: ಪಾಟೀಲ್‌ ವಿರುದ್ಧ ಕಾರಜೋಳ ಗರಂ

ಬುಧವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಯೋಜನೆ ಜಾರಿಗೆ ವಿವಿಧ ಹಂತಗಳಲ್ಲಿ ನಡೆದ ಪ್ರಕ್ರಿಯೆಗಳನ್ನು ದಾಖಲೆಗಳ ಸಹಿತ ವಿವರಿಸಿದ ಎಂ.ಬಿ. ಪಾಟೀಲ್‌, ಯೋಜನೆ ಅನುಷ್ಠಾನದ ವಿಷಯದಲ್ಲಿ ಕಾರಜೋಳ ಅವರು ಅಪೂರ್ಣ ದಾಖಲೆಗಳನ್ನು ತೋರಿಸಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುಮ್ಮನಿರುವ ಮೋದಿ:

ಯೋಜನೆ ಜಾರಿ ಸಂಬಂಧ 2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ(Siddaramaiah) ನೇತೃತ್ವದ ನಿಯೋಗ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಈವರೆಗೆ ಮೋದಿ ಅವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿಲ್ಲ. ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಡಿಪಿಆರ್‌ಗೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ(Kaveri Water Management Authority) ಒಪ್ಪಿಗೆ ಕೊಡಬೇಕು. ಆದರೆ ಐದು ಬಾರಿ ಪ್ರಾಧಿಕಾರದ ಸಭೆ ನಡೆದರೂ ಈ ವಿಷಯ ಚರ್ಚಿಸದೆ ಮುಂದೂಡಲಾಗಿದೆ. ಈ ಬಗ್ಗೆ ಡಬಲ್‌ ಎಂಜಿನ್‌ ಸರ್ಕಾರ ಯೋಜನೆ ಜಾರಿಗೆ ಏನೂ ಮಾಡಲಿಲ್ಲ ಎಂದು ಆರೋಪಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ತಾವೇ ಸ್ವಯಂ ಪ್ರೇರಿತರಾಗಿ ಕಾವೇರಿ ಜಲವಿವಾದ(Kaveri Water Dispute) ಸಂಬಂಧ ನಮ್ಮ ಕಾನೂನು ತಂಡದ ಮುಖ್ಯಸ್ಥರಾದ ಫಾಲಿ ನಾರಿಮನ್‌ ಅವರ ಜೊತೆ ಚರ್ಚಿಸಿ ಅವರು ಮುಂದುವರೆಯುವಂತೆ ಸಲಹೆ ನೀಡಿದ ಮೇಲೆ ಡಿಪಿಆರ್‌, ಪಿಎಫ್‌ಆರ್‌(PFR), ಆಡಳಿತಾತ್ಮಕ ಒಪ್ಪಿಗೆ ಪಡೆಯಲಾಯಿತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌(DK Shiuvakumar) ಪರಿಷ್ಕೃತ ಡಿಪಿಆರ್‌ ಸಿದ್ಧಪಡಿಸಿದರು. ಜತೆಗೆ ಆಗಿನ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನ ಸಹಕರಿಸುವಂತೆ ಮನವಿ ಸಲ್ಲಿಸಿದ್ದರು ಎಂದು ಪಾಟೀಲ್‌ ಹೇಳಿದರು.

ವಿವಿಧ ಕಾರಣಗಳಿಂದ ಬೇಸರಗೊಂಡು ನಾರಿಮನ್‌ ಅವರು ರಾಜ್ಯ ಸರ್ಕಾರದ ಪರವಾಗಿ ವಾದಿಸುವುದರಿಂದ ಹಿಂದೆ ಸರಿಯುವುದಾಗಿ ಹೇಳಿದಾಗ ಅವರ ಮನೆಗೆ ನಾನೇ ಖುದ್ದಾಗಿ ತೆರಳಿ ಮನವೊಲಿಸಿದೆ. ನಂತರ ಅವರು ಮಾಡಿದ ವಾದದ ಪರಿಣಾಮ ತಮಿಳುನಾಡಿಗೆ ನೀಡಬೇಕಿದ್ದ ಸುಮಾರು 14 ಟಿಎಂಸಿ ನೀರು ಕರ್ನಾಟಕಕ್ಕೆ(Karnataka) ಬಳಸಲು ಅವಕಾಶ ಸಿಕ್ಕಿತು. ಈ ನೀರಿನ ಸ್ವಲ್ಪ ಭಾಗವನ್ನು ಬೆಂಗಳೂರು(Bengaluru) ನಗರಕ್ಕೆ ಕುಡಿಯುವ ನೀರು ಬಳಸಿಕೊಳ್ಳಬಹುದಾಗಿದೆ ಎಂದು ಅವರು ವಿವರಿಸಿದರು.

ಕಾರಜೋಳ ಕೊಡುಗೆ ಶೂನ್ಯ:

ಯೋಜನೆ ಸಂಬಂಧ ಮಾಹಿತಿಗಳನ್ನು ತಿರುಚುವುದು, ಸುಳ್ಳು ಹೇಳುವುದು ಅಂತರ್‌ರಾಜ್ಯ ಜಲ ವಿವಾದದಂತಹ ಸೂಕ್ಷ್ಮ ವಿಷಯದಲ್ಲಿ ರಾಜ್ಯಕ್ಕೆ ಒಳ್ಳೆಯದಲ್ಲ. ಜಲಸಂಪನ್ಮೂಲ ಸಚಿವ ಕಾರಜೋಳ ಅವರ ಕೊಡುಗೆ ಶೂನ್ಯವಾಗಿದೆ ಎಂದರು.

ಕಾರಜೋಳ ಅವರು ಪತ್ರಿಕಾಗೋಷ್ಠಿಯಲ್ಲಿ ‘ಮೇಕೆದಾಟು ಯೋಜನೆ ಕುರಿತಂತೆ ಕಾಂಗ್ರೆಸ್‌ ಸರ್ಕಾರ ಹಾಗೂ ನೀರಾವರಿ ಸಚಿವರಾಗಿದ್ದ ಎಂ.ಬಿ. ಪಾಟೀಲ್‌ ಅವರು ಏನೂ ಕಾರ್ಯ ರೂಪಿಸಿಲ್ಲ’ ಎಂದು ಜನತೆಗೆ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಯೋಜನಾ ವರದಿ ತಯಾರಿಸಿಲ್ಲ ಎಂದು ಹೇಳಿದ್ದ ಅವರು ಇದೀಗ ಕಾರ್ಯ ಸಿದ್ಧತಾ ವರದಿ ಮಾತ್ರ ತಯಾರಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ತಾವು ಏನು ಹೇಳುತ್ತಿದ್ದೇವೆ ಎಂಬುದನ್ನು ತಿಳಿಯದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

Mekedatu Padayatra: ಪಾದಯಾತ್ರೆ ನಿರ್ಬಂಧಕ್ಕೆ ಸರ್ಕಾರದ ಅಧಿಕೃತ ಆದೇಶ, ರಾಮನಗರದಲ್ಲಿ ಬಂದೋಬಸ್ತ್!

ಮೇಕೆದಾಟು ಯೋಜನೆ ಮುಂದುವರೆಸಲು ಯಾವುದೇ ಕಾನೂನು ತೊಂದರೆ ಇಲ್ಲ ಎಂದು ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟಿದ್ದನ್ನು ತಿರುಚಿ ಎಂ.ಬಿ. ಪಾಟೀಲರು ಯೋಜನೆ ಕುರಿತು ಆಸಕ್ತಿ ವಹಿಸಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವಾಂಶಗಳನ್ನು ತಿರುಚಿ ಇದುವರೆಗೆ ನೀರಾವರಿ ಮತ್ತು ಮೇಕೆದಾಟು ಯೋಜನೆಗೆ ಯಾವುದೇ ಚಾಲನೆ ಕೊಡುವಲ್ಲಿ ವಿಫಲರಾಗಿರುವ ಗೋವಿಂದ ಕಾರಜೋಳ ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಎಂ.ಬಿ. ಪಾಟೀಲ್‌ ತಿರುಗೇಟು ನೀಡಿದರು.

ಸದ್ಯ ಈ ಯೋಜನೆಗೆ ಪರಿಸರ ಇಲಾಖೆ ಹಾಗೂ ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಒಪ್ಪಿಗೆ ನೀಡಬೇಕಾಗಿದೆ. ಇವುಗಳ ಒಪ್ಪಿಗೆ ಪಡೆಯುವಲ್ಲಿ ರಾಜ್ಯ ವಿಫಲವಾಗಿದೆ ಎಂದು ಪಾಟೀಲ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್‌. ಶಂಕರ್‌, ಕಾನೂನು ಘಟಕದ ಅಧ್ಯಕ್ಷ ಎ.ಎಸ್‌. ಪೊನ್ನಣ್ಣ ಉಪಸ್ಥಿತರಿದ್ದರು.

ವಾದ ಏನು?

- ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್‌ ಅವಧಿಯಲ್ಲಿ ವಿಳಂಬವಾಗಿಲ್ಲ
- 2015ರಲ್ಲಿ ಸಿದ್ದರಾಮಯ್ಯ ನಿಯೋಗ ಮೋದಿ ಭೇಟಿ ಮಾಡಿ ಮನವಿ ಸಲ್ಲಿಸಿತ್ತು
- ಪ್ರಧಾನಿ ಎರಡೂ ರಾಜ್ಯದ ಸಿಎಂಗಳ ಜತೆ ಚರ್ಚಿಸಿ ಬಗೆಹರಿಸಲು ಯತ್ನಿಸಿಲ್ಲ
- ಡಿಪಿಆರ್‌ಗೆ ಕಾವೇರಿ ಪ್ರಾಧಿಕಾರ ಅನುಮತಿ ನೀಡಬೇಕು. ಇನ್ನೂ ಕೊಟ್ಟಿಲ್ಲ
- ಡಬಲ್‌ ಎಂಜಿನ್‌ ಸರ್ಕಾರ ಡ್ಯಾಂ ಯೋಜನೆ ಜಾರಿಗೆ ಏನೂ ಮಾಡಲಿಲ್ಲ
 

Follow Us:
Download App:
  • android
  • ios