ಬರೀ ಗಾಂಧಿ ಎಂಬ ಹೆಸರನ್ನು ಇಟ್ಟುಕೊಂಡರೆ ಎಲ್ಲರೂ ಮಹಾತ್ಮರಾಗುವುದಿಲ್ಲ: ಈಶ್ವರಪ್ಪ
ಮುಖ್ಯಮಂತ್ರಿಗಳು ಸಹ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವ ಮಾತನ್ನು ಆಡಿದ್ದಾರೆ. ಆದರೆ, ಏಕೆ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದರ ಕುರಿತು ನನಗೆ ನೋವಾಗಿದೆ. ಈ ಕುರಿತು ಸಾಕಷ್ಟು ಅವಮಾನವೂ ಆಗಿದೆ: ಈಶ್ವರಪ್ಪ
ಬಾಗಲಕೋಟೆ(ಡಿ.20): ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಹೋಗುತ್ತಿಲ್ಲ. ಸಂಪುಟದಲ್ಲಿ ಅವಕಾಶ ಸಿಗಲಾರದ ಕಾರಣ ನನಗೆ ನೋವಾಗಿದ್ದು, ಇದು ನನ್ನ ಸೌಜನ್ಯದ ಪ್ರತಿಭಟನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧದಿಂದ ಮುಕ್ತನಾದ ನನ್ನನ್ನು ಯಾವ ಕಾರಣಕ್ಕೆ ಮತ್ತೆ ಸಂಪುಟದಲ್ಲಿ ಸೇರ್ಪಡೆಯಾಗಿಲ್ಲ ಎಂಬ ಸಾರ್ವಜನಿಕ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಿದೆ. ನನ್ನ ವಿಷಯದಲ್ಲಿ ತೀರ್ಪು ಬಂದು ಕ್ಲೀನ್‌ಚಿಟ್ ಸಹ ನೀಡಲಾಗಿದೆ. ಮುಖ್ಯಮಂತ್ರಿಗಳು ಸಹ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವ ಮಾತನ್ನು ಆಡಿದ್ದಾರೆ. ಆದರೆ, ಏಕೆ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದರ ಕುರಿತು ನನಗೆ ನೋವಾಗಿದೆ. ಈ ಕುರಿತು ಸಾಕಷ್ಟು ಅವಮಾನವೂ ಆಗಿದೆ. ಇದನ್ನು ಅರ್ಥ ಮಾಡಿಸುವ ಉದ್ದೇಶದಿಂದ ಸದನದಿಂದ ಹೊರಗುಳಿದು ಸೌಜನ್ಯಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ: ಸಿ.ಎಂ.ಇಬ್ರಾಹಿಂ
ಮಾಜಿ ಸಚಿವ ಜನಾರ್ಧನ ರಡ್ಡಿ ಅವರು ಬಿಜೆಪಿಯಿಂದ ದೂರವಾಗಿ ಹೊಸ ಪಕ್ಷ ಕಟ್ಟುವ ಕುರಿತು ಕೇಳಲಾದ ಪ್ರಶ್ನೆಗೆ ನುಣುಚಿಕೊಂಡ ಈಶ್ವರಪ್ಪ, ಈ ಕುರಿತು ಜನಾರ್ಧನ ರಡ್ಡಿ ಅವರನ್ನೇ ಕೇಳಿ ಎಂದು ಹೇಳಿದರಲ್ಲದೆ, ಹಿಂದೆ ಯಡಿಯೂರಪ್ಪ ಅವರು ಹೊಸ ಪಕ್ಷ ಕಟ್ಟುತ್ತೇನೆ ಎಂದಾಗ ಬೇಡ ಎಂದು ಗಿಣಿ ಹೇಳಿದಹಾಗೆ ಹೇಳಿದ್ದೆ. ಆದರೂ ಅವರು ಪಕ್ಷ ಕಟ್ಟಿಎಷ್ಟುಸ್ಥಾನ ತೆಗೆದುಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ನಮ್ಮ ತಾಯಿ ಸಮ. ಇದು ನಮಗೆ ಸಿಕ್ಕಿರುವ ಸಂಸ್ಕಾರ ಆಗಿರುವುದರಿಂದ ನಾವ್ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಎಚ್.ವಿಶ್ವನಾಥ ಮತ್ತೆ ಕಾಂಗ್ರೆಸ್‌ಗೆ ಹೋದರೆ ಹೋಗಲಿ. ಅವರು ತಮ್ಮ ರಾಜಕೀಯ ನಡೆಯ ನಿರ್ಣಯ ಕೈಗೊಳ್ಳಲು ಸ್ವತಂತ್ರರಿದ್ದಾರೆ ಎಂದರು.
ಸುವರ್ಣಸೌಧದಲ್ಲಿ ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡುತ್ತಿರುವುದು ಸುವರ್ಣಾಕ್ಷರದಲ್ಲಿ ಬರೆದಿಡುವ ವಿಷಯ ಎಂದ ಈಶ್ವರಪ್ಪ, ಸಾವರ್ಕರ ಕುರಿತು ಡಿ.ಕೆ.ಶಿವಕುಮಾರ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿ, ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಅವರು ಮಾಡಲಿ. ಇಡೀ ದೇಶವೇ ಕಾಂಗ್ರೆಸ್ ಬಗ್ಗೆ ಅಸಹ್ಯ ಪಡುವಂತಾಗಿದೆ. ಸಾವರ್ಕರ ದೇಶಕ್ಕೆ ಏನೂ ಕೊಡುಗೆ ನೀಡಿಲ್ಲ ಎಂದು ಬೊಬ್ಬೆ ಇಡುತ್ತಿರುವ ಕಾಂಗ್ರೆಸ್‌ನವರು ದೇಶಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಏನು ಕೊಡುಗೆ ನೀಡಿದ್ದಾರೆ? ಈ ದೇಶಕ್ಕೆ ಅವರು ಏನು ಸಂಬಂಧ ಎಂದು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಬರೀ ಗಾಂಧಿ ಎಂಬ ಹೆಸರನ್ನು ಇಟ್ಟುಕೊಂಡರೆ ಎಲ್ಲರೂ ಮಹಾತ್ಮರಾಗುವುದಿಲ್ಲ. ಇದನ್ನು ಕಾಂಗ್ರೆಸ್‌ನವರು ಅರಿತುಕೊಳ್ಳಬೇಕು. ಇಂದಿರಾಗಾಂಧಿ ಅವರನ್ನು ವಾಜಪೇಯಿ ಅವರು ದೇಶದ ಸಂಕಷ್ಟದ ಸಮಯದಲ್ಲಿ ದುರ್ಗೆ ಎಂದು ಕರೆದಿದ್ದರು. ಅಂಥ ರಾಜಕಾರಣ ಕಾಂಗ್ರೆಸ್‌ಗೆ ಈಗ ಬೇಕಾಗಿದೆ ಎಂದರು.