ಸಿದ್ದರಾಮಯ್ಯ ಅಲೆಮಾರಿ, ಅಧಿಕಾರದಾಹಿ: ಈಶ್ವರಪ್ಪ ವಾಗ್ದಾಳಿ
* ಸಿದ್ದರಾಮಯ್ಯ ಎಚ್ಚರ ತಪ್ಪಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ, ಇಂಥ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಲಿ
* ಪ್ರಧಾನಿ ಮೋದಿ ಯಾವ ಲೆಕ್ಕ, ನೆಹರೂ - ಮೋದಿಗೆ ಹೋಲಿಕೆಯೇ ಇಲ್ಲ ಎಂದಿರುವುದಕ್ಕೆ ತೀವ್ರ ಆಕ್ಷೇಪ
* ಆರ್‌ಎಸ್‌ಎಸ್ ರಾಷ್ಟ್ರಭಕ್ತರನ್ನು, ಭಾರತ ಮಾತೆಯ ಪುತ್ರರನ್ನು ನಿರ್ಮಾಣ ಮಾಡಿದೆ
ಶಿವಮೊಗ್ಗ(ಮೇ.28): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಒಬ್ಬ ಅಲೆಮಾರಿ. ಯಾವ ಪಕ್ಷದಲ್ಲಿ ಇದ್ದರೂ ಅವರಿಗೆ ಅಧಿಕಾರ ಬೇಕು. ಅವರೊಬ್ಬ ಅಧಿಕಾರದಾಹಿ. ಈ ಅಲೆಮಾರಿಗೆ ಆರ್‌ಎಸ್‌ಎಸ್ ಬಗ್ಗೆ ಕಲ್ಪನೆ ಇಲ್ಲ. ಹೀಗಾಗಿ ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗುಡುಗಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ಧರಾಮಯ್ಯ ಆರ್‌ಎಸ್‌ಎಸ್ ಮತ್ತು ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಎಚ್ಚರ ತಪ್ಪಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಯಾವ ಲೆಕ್ಕ. ನೆಹರೂ ಹಾಗೂ ಮೋದಿಗೆ ಹೋಲಿಕೆಯೇ ಇಲ್ಲ ಎಂದಿದ್ದಾರೆ. ಆಕಾಶಕ್ಕೂ, ಭೂಮಿಗೂ ಎಲ್ಲಿಯ ಹೋಲಿಕೆ ಎಂದಿದ್ದಾರೆ. ಅಲೆಮಾರಿ ಸಿದ್ಧರಾಮಯ್ಯ ಈ ರೀತಿ ಹೇಳಿಕೆ ನೀಡುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದರು.
Shivamogga: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ: ಗ್ರಾಮಸ್ಥರ ವಿವಿಧ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಡಿಸಿ ಸೂಚನೆ
ನೆಹರೂ ಕಾಲದಲ್ಲಿ ಭಾರತದ ವಿರುದ್ಧವಾಗಿ ಪಾಕಿಸ್ತಾನದ ಪರ ಎಲ್ಲಾ ದೇಶಗಳು ಇದ್ದವು. ಆದರೆ, ಇಂದು ಮೋದಿ ಕಾಲದಲ್ಲಿ ಎಲ್ಲವೂ ಬದಲಾಗಿದೆ. ಇಡೀ ವಿಶ್ವವೇ ಇಂದು ಭಾರತವನ್ನು ಮೆಚ್ಚಿಕೊಂಡಿದೆ. ಜಗತ್ತಿನ ಎಲ್ಲಾ ದೇಶಗಳು ಇಂದು ಪಾಕಿಸ್ತಾನದ ವಿರುದ್ಧವಾಗಿ ಹಾಗೂ ಭಾರತದ ಪರವಾಗಿ ನಿಂತಿವೆ. ಇದೇ ಆಕಾಶಕ್ಕೂ ಭೂಮಿಗೂ ಇರುವ ವ್ಯತ್ಯಾಸ. ಹೀಗಾಗಿಯೇ ಮೋದಿ ವಿಶ್ವವೇ ಮೆಚ್ಚಿಕೊಂಡಿರುವ ನಾಯಕರಾಗಿದ್ದಾರೆ ಎಂದು ತಿರುಗೇಟು ನೀಡಿದರು.
ನೆಹರೂ ಮತ್ತು ಅವರ ಕಾಂಗ್ರೆಸ್ಸಿನ ನಾಯಕರು ದೇಶವನ್ನು ವಿಭಾಗ ಮಾಡಿದ್ದರು. ಅಧಿಕಾರದ ಆಸೆಗೆ ಭಾರತಾಂಬೆಯನ್ನು ತುಂಡು ಮಾಡಿದವರು ಅವರು. ಪಾಕಿಸ್ತಾನ, ಹಿಂದೂಸ್ತಾನ ಎಂದು ದೇಶವನ್ನು ಬೇರೆ ಮಾಡಿದರು. ಮೋದಿ ಪ್ರಧಾನಿಯಾದ ಮೇಲೆ ಕಾಶ್ಮೀರವನ್ನು ಒಟ್ಟುಗೂಡಿಸಿದರು. ದೇಶದ ಸಂವಿಧಾನ, ಕಾನೂನು ಎಲ್ಲಾ ಕಡೆಗೆ ಒಂದೇ ಎಂದು ಸಾರಿದ್ದಾರೆ. ಅವರ ಬಗ್ಗೆ ಸಿದ್ಧರಾಮಯ್ಯ ಹೇಳಿಕೆ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವೆಲ್ಲರೂ ಆರ್‌ಎಸ್‌ಎಸ್ ಕಾರ್ಯಕರ್ತರು. ಇಲ್ಲಿ ಹುಟ್ಟಿಬೆಳೆದ ನಾವು ಭಾರತೀಯರಲ್ಲವಾ? ಆರ್‌ಎಸ್‌ಎಸ್ ಸ್ವಾತಂತ್ರ್ಯ ಪೂರ್ವದಿಂದಲೂ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡಲು ಮತ್ತು ಹಿಂದುತ್ವ ಉಳಿಸಲು ಶ್ರಮಿಸುತ್ತಿದೆ. ಇಂದು ದೇಶ ಹಾಗೂ ರಾಜ್ಯದಲ್ಲಿ ಅನೇಕ ನಾಯಕರು ಆರ್‌ಎಸ್‌ಎಸ್‌ನಿಂದ ಬಂದವರಿದ್ದಾರೆ. ಪ್ರಧಾನಿ, ಗೃಹಮಂತ್ರಿ, ಉಪ ರಾಷ್ಟ್ರಪತಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆರ್‌ಎಸ್‌ಎಸ್ ಹಿನ್ನೆಲೆಯವರು. ಅವರು ದೇಶ ಹಾಗೂ ರಾಜ್ಯವನ್ನು ಸಮರ್ಥವಾಗಿ ಮುನ್ನೆಡಸುತ್ತಿದ್ದಾರೆ. ಇದು ಸಿದ್ಧರಾಮಯ್ಯಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.
ಯಾವ ಪಕ್ಷದಲ್ಲಿದ್ದರೂ ಸಿದ್ಧರಾಮಯ್ಯರಿಗೆ ವಿಪಕ್ಷ ನಾಯಕ ಸ್ಥಾನ, ಸಿಎಂ ಸ್ಥಾನ ಬೇಕು. ಯಾವುದಾದರೂ ಸ್ಥಾನಮಾನಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಅಲೆಮಾರಿ ಸಿದ್ಧರಾಮಯ್ಯ ಅಧಿಕಾರಕ್ಕಾಗಿ ಒಂದು ಸಲ ಚಾಮುಂಡೇಶ್ವರಿ, ಇನ್ನೊಮ್ಮೆ ಬಾದಾಮಿ ಕ್ಷೇತ್ರದ ಕಡೆ ಮುಖ ಮಾಡಿದ್ದಾರೆ. ಈಗ ಅಲ್ಲಿಯೂ ಸೋಲುವ ಭೀತಿಯಿಂದ ಜಮೀರ್ ಅಹ್ಮದ್ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Skill India ಕಿರ್ಲೊಸ್ಕರ್ ನಿರ್ವಹಣಾ ಸಂಸ್ಥೆಯೊಂದಿಗೆ ಕುವೆಂಪು ವಿವಿ ಶೈಕ್ಷಣಿಕೆ ಒಪ್ಪಂದ!
ನಾವೆಲ್ಲಾ ಆರ್‌ಎಸ್‌ಎಸ್ ಹಿನ್ನಲೆಯಿಂದ ಬೆಳೆದು ಬಂದವರು. ಆರ್‌ಎಸ್‌ಎಸ್ ರಾಷ್ಟ್ರಭಕ್ತರನ್ನು, ಭಾರತ ಮಾತೆಯ ಪುತ್ರರನ್ನು ನಿರ್ಮಾಣ ಮಾಡಿದೆ. ಆದರೆ, ಕಾಂಗ್ರೆಸ್ ಇಂದು ಇಟಲಿ ಪ್ರೇರಿತ ನಾಯಕತ್ವದ ಹಿಡಿತದಲ್ಲಿದೆ ಎಂದು ಛೇಡಿಸಿದ ಈಶ್ವರಪ್ಪ, ಈ ಹಿಂದೆ ಜೆಡಿಎಸ್‌ನಲ್ಲಿದ್ದ ಸಿದ್ಧರಾಮಯ್ಯ ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡಲು ಆಯೋಗ್ಯರು. ವಿದೇಶಿ ವ್ಯಕ್ತಿ ಸೋನಿಯಾ ಗಾಂಧಿ ಸೆರಗು ಹಿಡಿದುಕೊಂಡು ಓಡಾಡುತ್ತಿರುವ ಸಿದ್ಧರಾಮಯ್ಯ ಕೂಡಲೇ ದೇಶದ ಜನ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಇತಿಹಾಸಕಾರರು ದೇಶದಲ್ಲಿ 36 ಸಾವಿರ ದೇವಾಲಯಗಳಲ್ಲಿ ಮಸೀದಿ ನಿರ್ಮಿಸಿದ್ದಾರೆ ಎಂದು ಸಂಶೋಧನೆಗಳ ಮೂಲಕ ತೋರಿಸಿದ್ದಾರೆ. ಅವುಗಳ ಮರು ನಿರ್ಮಾಣ ಆಗಬೇಕಿದೆ. ಔರಂಗಜೇಬ್ ಕೆಡವಿದ್ದ ಕಾಶಿ ದೇವಾಲಯವನ್ನು ಅಹಲ್ಯಾಬಾಯಿ ಹೋಳ್ಕರ್ ಮರು ನಿರ್ಮಾಣ ಮಾಡುತ್ತಾರೆ. ನಾನು ಮತ್ತು ಸಿದ್ಧರಾಮಯ್ಯ ಅದೇ ಸಂತತಿಯವರು. ಆದರೀಗ ಸಿದ್ಧರಾಮಯ್ಯ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಅವರು ಅಹಲ್ಯಾಬಾಯಿ ಹೋಳ್ಕರ್ ಅವರ ರಕ್ತ ಹಂಚಿಕೊಂಡಿದ್ದಾರೋ, ಇಲ್ಲವೋ ಎನ್ನುವ ಅನುಮಾನ ಮೂಡುತ್ತಿದೆ. ಅವರು ಜಿನ್ನಾ ಸಂತತಿಯವರು ಅನಿಸುತ್ತದೆ. ಅವರೀಗ ಸೋನಿಯಾ ಸಂತತಿಯವರು ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.