ಭಯೋತ್ಪಾದಕರನ್ನು ಬೆಂಬಲಿಸಿದರೆ ಕಾಂಗ್ರೆಸ್ ಬ್ಯಾನ್: ಕೆ.ಎಸ್.ಈಶ್ವರಪ್ಪ
ಭಯೋತ್ಪಾದಕರಿಗೆ ಹೀಗೆ ಬೆಂಬಲ ಕೊಡುತ್ತಾ ಇದ್ದರೆ ಕಾಂಗ್ರೆಸ್ ಅನ್ನೇ ಜನರು ಬ್ಯಾನ್ ಮಾಡುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವಮೊಗ್ಗ (ಡಿ.18): ಭಯೋತ್ಪಾದಕರಿಗೆ ಹೀಗೆ ಬೆಂಬಲ ಕೊಡುತ್ತಾ ಇದ್ದರೆ ಕಾಂಗ್ರೆಸ್ ಅನ್ನೇ ಜನರು ಬ್ಯಾನ್ ಮಾಡುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದಿನಿಂದಲೂ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುತ್ತಾ ಬಂದಿದೆ. ಗಲಭೆಗಳು ಆದಾಗ ಭಯೋತ್ಪಾದಕರ ಪರವಾಗಿ ಮತ್ತು ಉಗ್ರ ಚಟುವಟಿಕೆ ನಡೆಸುವವರ ಪರವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಈಗ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಾಕ್ಷಿ ಸಮೇತ ಸಿಕ್ಕಿದ ಉಗ್ರನನ್ನು ಬೆಂಬಲಿಸುವ ಹೇಳಿಕೆ ನೀಡಿದೆ.
ಕಾಶ್ಮೀರ ಭಯೋತ್ಪಾದಕರು ಮತ್ತು ಬಾಂಬೆ ಬ್ಲಾಸ್ಟ್ ನಡೆದಾಗಲೂ ಕೂಡ ಕಾಂಗ್ರೆಸ್ ಉಗ್ರರ ಓಲೈಸಿ ಹೇಳಿಕೆ ನೀಡಿತ್ತು ಎಂದು ಟೀಕಿಸಿದರು. ಪಿಎಫ್‌ಐ ಮತ್ತು ಎಸ್‌ಡಿಪಿಐ ಬ್ಯಾನ್ ಮಾಡಬೇಕೆಂಬ ಒತ್ತಾಯ ಹೆಚ್ಚಿದಾಗ ಕೂಡ ಕಾಂಗ್ರೆಸ್ ನಿರಂತರವಾಗಿ ಯಾರು ಈ ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೋ ಅವರ ಪರವಾಗಿಯೇ ಹೇಳಿಕೆ ನೀಡುತ್ತಾ ಬಂದಿತ್ತು. ನ್ಯಾಯಾಲಯ ಕೂಡ ಪಿಎಫ್‌ಐ ಬ್ಯಾನ್ ಮಾಡಿದ್ದು ಸರಿಯಿದೆ ಎಂದು ಹೇಳಿದಾಗಲೂ, ಕಾಂಗ್ರೆಸ್ ಪಿಎಫ್‌ಐ ಪರ ಬ್ಯಾಟಿಂಗ್ ಮಾಡುತ್ತಾ ಬಂದಿದೆ. ಇನ್ನಾದರೂ ಕಾಂಗ್ರೆಸ್ ಎಚ್ಚೆತ್ತು ದೇಶದ್ರೋಹಿಗಳ ಪರ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಖಾರವಾಗಿ ಹೇಳಿದರು.
ರಾಜ್ಯದಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳನ್ನು ತೆರೆಯಲು ಅವಕಾಶ ಇಲ್ಲ: ಕೆ.ಎಸ್.ಈಶ್ವರಪ್ಪ
ಜಿನ್ನಾ ರಕ್ತ ಹರಿಯುತ್ತಿದೆ: ಬಿಜೆಪಿ ಪಕ್ಷದವರ ಮೈಯಲ್ಲಿ ಚಂದ್ರಶೇಖರ್, ಆಜಾದ್, ಸಾವರ್ಕರ್, ಸುಭಾಷ್‌ಚಂದ್ರ ಬೋಸ್‌ರಂತಹ ಕಾಂಗ್ರೆಸ್ ನಾಯಕರ ರಕ್ತ ಹರಿಯುತ್ತಿದೆ. ಆದರೆ, ಈಗಿನ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮೈಯಲ್ಲಿ ಭುಟ್ಟೋ, ಜಿನ್ನಾ ರಕ್ತ ಹರಿಯುತ್ತಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಿರುದ್ಧ ಶನಿವಾರ ಶಿವಪ್ಪ ನಾಯಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿರುವ ದೇಶದ್ರೋಹಿಯಾಗಿದ್ದಾನೆ. ತಿಹಾರ್ ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್ ಕೈಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ನಲಪಾಡ್ ಕೈಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವಿದೆ. ಇಂತಹವರ ಕೈಯಲ್ಲಿ ಕಾಂಗ್ರೆಸ್ ಪಕ್ಷ ಇರುವಾಗ ಇವರಿಂದ ರಾಷ್ಟ್ರಭಕ್ತಿ ನಿರೀಕ್ಷಿಸಲು ಸಾಧ್ಯವೇ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ‘ನಾನು’ ಎಂಬ ಅಹಂಕಾರ ಬಿಡಲಿ: ಈಶ್ವರಪ್ಪ
ಮಂಗಳೂರು ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಇದನ್ನು ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಕುಕ್ಕರ್ ಬ್ಲಾಸ್ಟ್ ಮಾಡಿದವನು ಭಯೋತ್ಪಾದಕ ಅಲ್ಲ ಎಂದಿದ್ದಾರೆ. ಬ್ಲಾಸ್ಟ್ ಆರೋಪದ ಮೇಲೆ ಬಂಧಿತನಾಗಿರುವ ಶಾರೀಕ್ ಮೇಲೆ ಹಲವು ರಾಷ್ಟ್ರದ್ರೋಹದ ಪ್ರಕರಣಗಳಿವೆ. ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಒಬ್ಬ ಕಾಂಗ್ರೆಸ್ ನಾಯಕನು ತಪ್ಪು ಎಂದು ಹೇಳಿಲ್ಲ. ಇದು ಕಾಂಗ್ರೆಸ್ ಪಕ್ಷದ ವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಹರಿಹಾಯ್ದರು.