Flag Row: ಈಶ್ವರಪ್ಪ ಸಚಿವರಾಗಿರೋದಕ್ಕೆ ನಾಲಾಯಕ್: ಎಚ್.ಎಂ. ರೇವಣ್ಣ
* ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
* ಬೊಮ್ಮಾಯಿಯವರದ್ದು ಮೂರು ಬಾಗಿಲಿನ ಆಡಳಿತ
* ಬಿಜೆಪಿಗರು ಮಾಡುವುದೆಲ್ಲವು ದೇಶದ್ರೋಹಿ ಕೆಲಸಗಳೇ
ಬಾಗಲಕೋಟೆ(ಫೆ.18): ರಾಷ್ಟ್ರಧ್ವಜ(National Flag) ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar) ವಿರುದ್ಧ ಅವಾಚ್ಯ ಶಬ್ದಗಳ ನಿಂದನೆ ಮಾಡಿರುವ ಸಚಿವ ಕೆ. ಎಸ್.ಈಶ್ವರಪ್ಪ(KS Eshwarappa) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಗಲಕೋಟೆಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತಲ್ಲದೆ ನಗರದ ಬಿಜೆಪಿ ಕಚೇರಿಗೆ ತೆರಳಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆಯಬೇಕಾಯಿತು.
ಯುವ ಕಾಂಗ್ರೆಸ್(Congress) ಮುಖಂಡ ವಿನಯ ತಿಮ್ಮಾಪುರ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಸಚಿವ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
National Flag Row: ಕಾಂಗ್ರೆಸ್ ಜೀವನ ಪರ್ಯಂತ ಧರಣಿ ಮಾಡಿದ್ರೂ ನಾನು ಕುಗ್ಗಲ್ಲ: ಈಶ್ವರಪ್ಪ
ರಾಷ್ಟ್ರಧ್ವಜ ಕುರಿತು ಬರುವ ದಿನಗಳಲ್ಲಿ ಭಗವಾ ಧ್ವಜವೇ ರಾಷ್ಟ್ರಧ್ವಜವಾಗಬಹುದು, ಇಂದಲ್ಲಾ ನಾಳೆ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಲಿದೆ ಎಂಬ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷರು ಈಶ್ವರಪ್ಪ ವಿರುದ್ಧ ಮಾಡಿರುವ ದೇಶದ್ರೋಹದ(Treason) ಆರೋಪದಲ್ಲಿ ಏನು ತಪ್ಪಿದೆ ಎಂದು ಹೇಳಿದ ಪ್ರತಿಭಟನಾಕಾರರು ಸಚಿವರ ಹೇಳಿಕೆಯನ್ನು ಖಂಡಿಸಿದರೆ ಡಿ.ಕೆ.ಶಿವಕುಮಾರ ವಿರುದ್ಧವೇ ಏಕವಚನದಲ್ಲಿ ಮಾತನಾಡಿರುವ ಈಶ್ವರಪ್ಪ ಅವರನ್ನು ಬೊಮ್ಮಾಯಿ ಸರ್ಕಾರ ಹೇಗೆ ಸಹಿಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಕೂಡಲೇ ಸಚಿವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಒತ್ತಾಯಿಸಿದರಲ್ಲದೆ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮಂತ್ರಿಯಾದ ಈಶ್ವರಪ್ಪ ಅವರ ಹೇಳಿಕೆ ಅಕ್ಷಮ್ಯವಾಗಿದ್ದು, ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರು ಮಾತನಾಡಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ವಿರುದ್ಧ ಏಕವಚನದಲ್ಲಿ ಪದ ಬಳಕೆ ಮಾಡಿದ ಸಚಿವ ಈಶ್ವರಪ್ಪ ಅವರ ಪದಚ್ಯುತಿ ಆಗದಿದ್ದರೆ ಪಕ್ಷ ಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರಲ್ಲದೆ ರಾಷ್ಟ್ರಧ್ವಜಕ್ಕೆ ಗೌರವ ಕೊಡದ ಸಚಿವರನ್ನು ರಾಜ್ಯಪಾಲರು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವವರು ದೇಶ, ಸಂಸ್ಕೃತಿ, ಪರಂಪರೆಯನ್ನು ರಕ್ಷಿಸುವುದನ್ನು ಬಿಟ್ಟು ದೇಶದ್ರೋಹದಂತಹ ಹೇಳಿಕೆಗಳನ್ನು ಕೊಡುವ ಮೂಲಕ ಸಾಮರಸ್ಯಕ್ಕೆ ಧಕ್ಕೆತರುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ: ಪೊಲೀಸರ ಜೊತೆ ಮಾತಿನ ಚಕಮಕಿ
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ(Protest) ಸಂದರ್ಭದಲ್ಲಿ ಪೊಲೀಸರು(Police) ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕಾಟ ಮತ್ತು ತಳ್ಳಾಟದ ಜೊತೆಗೆ ಮಾತಿನ ಚಕಮಕಿಯು ಸಹ ನಡೆಯಿತು.
ಪ್ರತಿಭಟನಾನಿರತರು ಬಿಜೆಪಿ(BJP) ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ನಗರ ಸಿಪಿಐ ವಿಜಯ ಮರಗುಂಡಿ ನೇತೃತ್ವದ ಪೊಲೀಸರು ಪ್ರತಿಭಟನಾಕಾರರನ್ನು ಅಡ್ಡುಗಟ್ಟಿದರು. ಈ ಸಂದರ್ಭದಲ್ಲಿ ಪೊಲೀಸರನ್ನು ಲೆಕ್ಕಿಸದೆ ಪ್ರತಿಭಟನಾ ಮೆರವಣಿಗೆಗೆ ಮುಂದಾದ ಕಾರ್ಯಕರ್ತರು ಬಿಜೆಪಿ ಕಚೇರಿಯತ್ತ ತೆರಳಲು ಮುಂದಾದಾಗ ಪೊಲೀಸರು ಬಲವಂತವಾಗಿ ಪ್ರತಿಭಟನಾನಿರತರನ್ನು ತಡೆಯಬೇಕಾಯಿತು.
ಬೊಮ್ಮಾಯಿಯವರದ್ದು ಮೂರು ಬಾಗಿಲಿನ ಆಡಳಿತ
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಉಲ್ಲಂಘನೆಯಾಗಿಲ್ಲ ಎಂದು ನೀಡಿರುವ ಹೇಳಿಕೆ ಗಮನಿಸಿದರೆ ಬೊಮ್ಮಾಯಿಯವರದ್ದು ಮೂರು ಬಾಗಿಲಿನ ಆಡಳಿತ ಎಂಬುವುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಚಿವ ಎಚ್.ಎಂ.ರೇವಣ್ಣ(HM Revanna) ಎಂದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ(Basavaraj Bommai) ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತಿದೆ. ಒಂದು ಆರ್‌ಎಸ್‌ಎಸ್‌ನವರ(RSS) ಕಾಟ, ಇನ್ನೊಂದು 17 ಜನ ಬಿಜೆಪಿಗೆ(BJP) ಬಂದವರ ಕಾಟ, ಇನ್ನೊಂದು ಮಂತ್ರಿಯಾಗುವವರ ಕಾಟ ಎಂದು ಹೇಳಿ ಆ ಕಾರಣಕ್ಕಾಗಿಯೇ ಅವರದ್ದು ಮೂರು ಬಾಗಿಲಿನ ಆಡಳಿತವಾಗಿದೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಗಳ ಸ್ಥಿತಿ ಸ್ಯಾಂಡವಿಚ್ ಆದಂತಿದೆ. ಪರಿಸ್ಥಿತಿ ನಿಭಾಯಿಸದೆ ಓಡಾಡುತ್ತಿದ್ದಾರೆ. ದೇವರು ಅವರಿಗೆ ಚೆನ್ನಾಗಿ ಆರೋಗ್ಯ ಕೊಡಲಿ ಎಂದ ಅವರು, ಅದಕ್ಕೆ ನಾನು ಅವರನ್ನು ನೋಡಿ ಅಯ್ಯೋ ಅನಿಸುತ್ತಿದೆ ಎಂದರು. ಬೊಮ್ಮಾಯಿಯವರು ಬರುವ ಬಜೆಟ್ ಅನ್ನು ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾದರಿ ಎಂ ಬಂತೆ ನೀಡಲಿ. ಸಾಮಾಜಿಕ ನ್ಯಾಯದಡಿ ಇದ್ದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮಗನಾಗಿರುವುದರಿಂದ ರಾಜ್ಯಕ್ಕೆ ಒಳ್ಳೆಯದನ್ನು ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Karnataka Politics: ಹರಕುಬಾಯಿ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ: ಡಿಕೆಶಿ
ನೂರಾರು ವರ್ಷಗಳ ಪರಂಪರೆಯನ್ನು ಹೊಂದಿರುವ ಮುಸ್ಲಿಂ(Muslim) ಸಮುದಾಯದ ಹಿಜಾಬ್ ಕುರಿತು ಬಿಜೆಪಿಗರು ಅನಗತ್ಯವಾಗಿ ವಿವಾದ ಹುಟ್ಟುಹಾಕಿದ್ದು, ಬಜೆಟ್‌ನಲ್ಲಿ ಮತ್ತು ಸರ್ಕಾರದಿಂದ ಆ ಸಮುದಾಯಕ್ಕೆ ಯಾವ ನೆರವನ್ನು ನೀಡದೆ ಇದೀಗ ವಿವಾದವನ್ನು ಆರ್‌ಎಸ್‌ಎಸ್ ಹಾಗೂ ಇತರೆ ಹಿಂದೂ ಸಂಘಟನೆಗಳ ಮೂಲಕ ಹುಟ್ಟುಹಾಕಿದೆ ಎಂದು ದೂರಿದರು.
ರಾಷ್ಟ್ರಧ್ವಜ ಕುರಿತು ಮಾತನಾಡಿರುವ ಸಚಿವ ಈಶ್ವರಪ್ಪ ಅವರು ಸಚಿವರಾಗುವುದಕ್ಕೆ ನಾಲಾಯಕ್. ಹಿಂದೆಯೂ ಸಹ ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ರಾಷ್ಟ್ರಧ್ವಜ ಕುರಿತು ಹಾಗೇ ಮಾತನಾಡಿದ್ದಾರೆ. ಬಿಜೆಪಿಗರು ಮಾಡುವುದೆಲ್ಲವು ದೇಶದ್ರೋಹಿ ಕೆಲಸಗಳೇ ಆಗಿದೆ. ಅಭದ್ರತೆ ಎದುರಾದಾಗ ಇಂತಹ ಹೇಳಿಕೆಗಳನ್ನು ನೀಡುವುದು ಅವರ ರೂಢಿಯಾಗಿದೆ ಅಂತ ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.