National Flag Row: ಕಾಂಗ್ರೆಸ್‌ ಜೀವನ ಪರ್ಯಂತ ಧರಣಿ ಮಾಡಿದ್ರೂ ನಾನು ಕುಗ್ಗಲ್ಲ: ಈಶ್ವರಪ್ಪ

*   ಜನರ ಸಂಕಷ್ಟದ ಬದಲು ಕೇಸರಿ ಬಾವುಟ ಚರ್ಚೆಗೆ ಟೀಕೆ
*  ಸಚಿವರ ರಾಜೀನಾಮೆ ಪ್ರತಿಷ್ಠೆ ಮಾಡಿಕೊಂಡು ಕಲಾಪ ಹಾಳು
*  ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ಕೊಡಲ್ಲ
 

Minister KS Eshwarappa Slams on Congress grg

ಬೆಂಗಳೂರು(ಫೆ.18): ಕಾಂಗ್ರೆಸ್‌(Congress) ಪಕ್ಷದವರು ಜೀವನ ಪರ್ಯಂತ ಧರಣಿ ಮಾಡಿದರೂ ನಾನು ಕುಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಕಡ್ಡಿ ಮುರಿದಂತೆ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ರಾಷ್ಟ್ರಭಕ್ತ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನ್ಯಾಕೆ ರಾಜೀನಾಮೆ ಕೊಡಬೇಕು? ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ತಪ್ಪು ಮಾಡಿದ್ದು ಡಿ.ಕೆ.ಶಿವಕುಮಾರ್‌(DK Shivakumar) ಅವರೇ ಹೊರತು ನಾನಲ್ಲ. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜವನ್ನು(National Flag) ಇಳಿಸಿ ಭಗವಾ ಧ್ವಜ ಹಾರಿಸಲಾಗಿದೆ ಎಂಬ ಸುಳ್ಳು ಹೇಳಿದ್ದು ಶಿವಕುಮಾರ್‌. ಈಗ ರಾಷ್ಟ್ರಧ್ವಜ ದುರುಪಯೋಗ ಮಾಡಿಕೊಂಡು ಧರಣಿ ಮಾಡುತ್ತಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ. ಹೀಗಾಗಿ, ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅವರನ್ನು ಬಂಧಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

Karnataka Politics: ಹರಕುಬಾಯಿ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ: ಡಿಕೆಶಿ

ಕಲಾಪಕ್ಕೆ ಅಡ್ಡಿ ಮಾಡುತ್ತಿರುವವರನ್ನು ಹೊರಹಾಕಿ: ಎಚ್‌ಡಿಕೆ

ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಮತ್ತು ಕಲಾಪದ(Session) ಸಮಯ ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರಹಾಕಿ ಅಥವಾ ಅಧಿವೇಶನದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ(Karnataka) ಜ್ವಲಂತ ಸಮಸ್ಯೆಗಳ ಕುರಿತು ಮತ್ತು ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಕೇಸರಿ ಬಾವುಟ(Saffron Flag) ವಿಷಯವನ್ನಿಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳು ಮಾಡಿದರು. ಸಚಿವರೊಬ್ಬರ ರಾಜೀನಾಮೆ ಪಡೆಯಬೇಕು ಎಂಬುದನ್ನೇ ಪ್ರತಿಷ್ಠೆ ಮಾಡಿಕೊಂಡು ಜನರ ನಿರೀಕ್ಷೆಗಳನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹತ್ತು ನಿಮಿಷ ಧರಣಿ(Protest) ಮಾಡುವುದು, ಆಮೇಲೆ ಸದನವನ್ನು ಮುಂದಕ್ಕೆ ಹಾಕುವುದು, ಕಲಾಪ ನಡೆಸುವ ರೀತಿ ಇದಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನವನ್ನು ಕರೆಯಲಾಗಿದೆ. ಸರ್ಕಾರಕ್ಕೆ ಸದನವನ್ನು ಸಕ್ರಮವಾಗಿ ನಡೆಸುವ ಶಕ್ತಿ ಮತ್ತು ಬದ್ಧತೆ ಇಲ್ಲದಿದ್ದರೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿ. ಸುಮ್ಮನೆ ದಿನಕ್ಕೆ 1.5 ಕೋಟಿ ರು.ನಿಂದ 2 ಕೋಟಿ ರು.ನಷ್ಟುಜನರ ತೆರಿಗೆಯನ್ನು ಯಾಕೆ ಪೋಲು ಮಾಡಲಾಗುತ್ತದೆ. ಕೇವಲ ಟಿಎ, ಡಿಎ ಪಡೆಯಲು ಕಲಾಪ ನಡೆಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Congress Protest: ಸೌಧಕ್ಕೆ ಹಾಸಿಗೆ-ದಿಂಬು.. ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಅಹೋರಾತ್ರಿ ಧರಣಿ

ಹಿಜಾಬ್‌(Hijab) ಮತ್ತು ಕೇಸರಿ ಶಾಲುಗಳ ವಿವಾದಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಅಲ್ಲೆಲ್ಲಾ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಮಕ್ಕಳು ಹೊಡೆದಾಡಿಕೊಳ್ಳುವ ಸನ್ನಿವೇಶ ಉಂಟಾಗಿದೆ. ಈ ವಿಷಯವನ್ನು ಸದನದಲ್ಲಿ ಚರ್ಚೆ ನಡೆಸಬೇಕಿತ್ತು. ಬೇಸಿಗೆ ಬರುವ ಮುನ್ನವೇ ರಾಜ್ಯದಲ್ಲಿ ದಿನಕ್ಕೆ ಎರಡೂವರೆ ಗಂಟೆ ಕಾಲ ಲೋಡ್‌ ಶೆಡ್ಡಿಂಗ್‌ ಶುರುವಾಗಿದೆ. ವಿದ್ಯುತ್‌ ಕಡಿತದಿಂದ ರೈತರು ಬೆಳೆಗಳಿಗೆ ರಾತ್ರಿ ಹೊತ್ತು ನೀರು ಹರಿಸಬೇಕಾದ ಕಷ್ಟದ ಸ್ಥಿತಿ ಎದುರಾಗಿದೆ. ಆಡಳಿತಾರೂಢ ಪಕ್ಷಕ್ಕೆ ಮತ್ತು ಅಧಿಕೃತ ಪ್ರತಿಪಕ್ಷಕ್ಕೆ ಇದರ ಬಗ್ಗೆ ಕಾಳಜಿ ಇಲ್ಲ. ಇದರ ಬಗ್ಗೆ ಪ್ರಸ್ತಾಪ ಮಾಡಲು ಉದ್ದೇಶಿಸಿದ್ದೆ. ಆದರೆ, ಅವಕಾಶ ಸಿಗಲಿಲ್ಲ ಎಂದರು.

ಕೇಸರಿ ಪವಿತ್ರ ವಸ್ತ್ರ- ಎಚ್‌ಡಿಕೆ

ಹಿಂದೂಗಳ(Hindu) ಪಾಲಿಗೆ ಕೇಸರಿ ಪವಿತ್ರ ವಸ್ತ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಯಾರು ಸಹ ಹಾಳು ಮಾಡಬಾರದು ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು.

ಹಿಂದೂ ಸಂಸ್ಕೃತಿ(Hindu Culture), ಪರಂಪರೆಯಲ್ಲಿ ಕೇಸರಿ ಬಣ್ಣ ಮತ್ತು ಕೇಸರಿ ವಸ್ತ್ರಕ್ಕೆ ಪೂಜ್ಯ ಸ್ಥಾನವಿದೆ. ನಮ್ಮ ಪೂರ್ವಿಕರ ಕಾಲದಿಂದ ಇದು ನಡೆದುಕೊಂಡು ಬಂದಿದೆ. ಆದರೆ, ಬಿಜೆಪಿ(BJP), ಆರ್‌ಎಸ್‌ಎಸ್‌(RSS) ಮತ್ತದರ ಸಹ ಸಂಘಟನೆಗಳು ಕೇಸರಿ ಬಾವುಟ ಇಟ್ಟುಕೊಂಡು ಹೋರಾಟ ಮಾಡುತ್ತಿವೆ. ಭಾರತವನ್ನು(India) ಹಿಂದೂ ರಾಷ್ಟ್ರ(Hindu Nation)ಮಾಡಬೇಕು ಎನ್ನುವುದು ಆ ಸಂಘಟನೆಗಳ ಮಹದಾಸೆ. ಅವರ ಅಜೆಂಡಾ ಸಹ ಅದೆ. ಈ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮುಂದೊಂದು ದಿನ ಕೆಂಪುಕೋಟೆಯ ಮೇಲೂ ಕೇಸರಿ ಬಾವುಟವನ್ನು ಯಾರಾದರೂ ಹಾರಿಸಬಹುದು ಎಂದು ಹೇಳಿದ್ದರು. ನಾನೇ ಹಾರಿಸುತ್ತೇನೆ ಎಂದು ಅವರೇನೂ ಹೇಳಿಲ್ಲ. ಹೀಗಿದ್ದರೂ ಕಾಂಗ್ರೆಸ್‌ ಪ್ರತಿಷ್ಠೆಗೆ ಬಿದ್ದು ಕಲಾಪವನ್ನು ಹಾಳು ಮಾಡುತ್ತಿದೆ ಎಂದು ಟೀಕಿಸಿದರು.
 

Latest Videos
Follow Us:
Download App:
  • android
  • ios