ಪಂಚಾಯಿತಿ ಪರಮಾಧಿಕಾರಕ್ಕೆ ಬಿಜೆಪಿ ಕಂಟಕ: ಎಚ್.ಆಂಜನೇಯ

*  ಬಿಜೆಪಿ ದುರಾಡಳಿತ, ಕಾಂಗ್ರೆಸ್ ಅವಧಿಯ ಜನಪರ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು
*  ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು
*  ಬಿಜೆಪಿ ಆಡಳಿತದಿಂದ ಭ್ರಮನಿರಸನಗೊಂಡಿರುವ ಜನತೆ  
 

Former Minister H Anjaneya Slams to BJP Government grg

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜು.10):  ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಪರಮಾಧಿಕಾರ ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ, ಈ ಅಧಿಕಾರವನ್ನು ಮೊಟಕುಗೊಳಿಸುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು. ಚಿತ್ರದುರ್ಗ ತಾಲೂಕಿನ ಬ್ಯಾಲಹಾಳ್ ಗ್ರಾಪಂ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಭರಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಹಳ್ಳಿ ಜನರ ಕೈಯಲ್ಲಿ ಅಧಿಕಾರ ಇರಬೇಕು, ಗ್ರಾಮ ಪಂಚಾಯಿತಿಗಳು ಬಲಾಢ್ಯವಾಗಬೇಕು. ಈ ಮೂಲಕ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬ ದೂರದೃಷ್ಟಿ ಹಿನ್ನೆಯಲ್ಲಿ ಪಂಚಾಯತ್ ರಾಜ್ ನೀತಿಯನ್ನು ರಾಜೀವ್ ಗಾಂಧಿ ಬಲಿಷ್ಠಗೊಳಿಸಿದರು.ಪರಿಣಾಮ ಹಳ್ಳಿಯ ಸಾಮಾನ್ಯ ವ್ಯಕ್ತಿ, ಬಡ, ಕೂಲಿಕಾರನ ಮಗ‌ಕೂಡ ಇಂದು ರಾಜಕೀಯ ಅಧಿಕಾರ ಪಡೆಯಬಹುದಾಗಿದೆ. ಹಳ್ಳಿಯಿಂದ ದಿಲ್ಲಿಯ ಗದ್ದುಗೆ ಏರಬಹುದಾಗಿದೆ. ಅದರಲ್ಲೂ ಗ್ರಾಪಂ ಅಧ್ಯಕ್ಷರಿಗೆ ಶಾಸಕರು, ಸಂಸದರಿಗೆ ಇಲ್ಲದ ಚೆಕ್ ಗೆ ಸಹಿ ಮಾಡುವ ಪರಮಾಧಿಕಾರ ಇದೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ಆದರೆ, ಈಗಿನ ಸರ್ಕಾರ ಇಂತಹ ಅಧಿಕಾರವನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಕೈ ಹಾಕಿರುವುದು ದುರದುಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು. 

ಚಿತ್ರದುರ್ಗ: ಹೆಗಡೆಹಾಳು ಗ್ರಾಮದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

ನರೇಗಾ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದ್ದರೆ, ಬಿಜೆಪಿ ಸರ್ಕಾರ ಅನುದಾನಕ್ಕೆ ಕತ್ತರಿ ಪ್ರಯೋಗ ನಿರಂತರ ಮಾಡುತ್ತಿದೆ. ಹಳ್ಳಿಗಳ ಅಭಿವೃದ್ಧಿಗೆ ನೂರಾರು ಕೋಟಿ ಹಣ ನೀಡಲು ಅವಕಾಶ ಇದ್ದರೂ ಇಂದು ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡದೇ, ಪಂಚಾಯಿತಿಗಳನ್ನು ನಿಶ್ಯಕ್ತಿಗೊಳಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಹಳ್ಳಿ ರಾಜಕಾರಣದ ಮತ್ತೊಂದು ಭಾಗದಂತೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ಜಿಲ್ಲಾ ಮತ್ತು  ತಾಲ್ಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಮೂಲಕ ಗ್ರಾಮೀಣ ಜನರ ಕೈಯಲ್ಲಿ ಇರಬೇಕಾಗಿದ್ದ ಅಧಿಕಾರ ಅಧಿಕಾರಿಗಳ ವಶಕ್ಕೆ ನೀಡಿದೆ. ಪರಿಣಾಮ ಹಳ್ಳಿಗಳ ಅಭಿವೃದ್ಧಿಗೆ ತೀವ್ರ ಹಿನ್ನಡೆ ಆಗಿದೆ. ಅಧಿಕಾರಿಗಳ ಮೂಲಕ ಬಿಜೆಪಿ ಮುಖಂಡರು, ಅನುದಾನ ಹಂಚಿಕೆ, ಕಾಮಗಾರಿಗಳಲ್ಲಿ ತಾರತಮ್ಯ, ಭ್ರಷ್ಟಚಾರ, ಕಳಪೆ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋಮು, ಜಾತಿಗಳ ಮಧ್ಯೆ ಗಲಭೆ ಬಿಜೆಪಿಯ ಕೆಟ್ಟ ಕೊಡುಗೆ ಆಗಿದೆ ಎಂದು ದೂರಿದರು. ಕ್ಷೇತ್ರದ ಜನ ಗೆಲ್ಲಿಸಿದ ಫಲ ಮಂತ್ರಿಯಾಗಿ ಐದು ವರ್ಷ ಆಡಳಿತ ನಡೆಸಿದೆ. ಕ್ಷೇತ್ರದಲ್ಲಿ ಐದು ವರ್ಷದಲ್ಲಿ ಒಂದು ಸಣ್ಣ ಸಂಘರ್ಷ, ಜಾತಿ ಗಲಭೆ ಆಗದಂತೆ ಎಚ್ಚರವಹಿಸಿದ್ದೇ, ಆದರೆ, ಈಗ ರಾಜಕೀಯ ಕಾರಣಕ್ಕಾಗಿ ಕ್ಷೇತ್ರದಲ್ಲಿ ಕೊಲೆ ಯತ್ನಗಳು, ದೌರ್ಜನ್ಯ, ಅಸಹಾಯಕರ ಆಸ್ತಿ ಕಬಳಿಸುವ ಪ್ರಕರಣ ನಡೆಯುತ್ತಿವೆ. ಇದು ನೋವಿನ ವಿಷಯ.ಇದೆಲ್ಲವನ್ನೂ ಮೆಟ್ಟಿ ನಿಲ್ಲುವ, ಜಾತಿ ಗಲಭೆ ಹುನ್ನಾರಕ್ಕೆ ಅವಕಾಶ ಕೊಡದೆ ಗ್ರಾಮದ ಒಗ್ಗಟ್ಡು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ವಿವಿಧ ಯೋಜನೆಯಡಿ ಸಹಾಯಧನ, ಸಾಲ ಸೌಲಭ್ಯ

ವಿವಿಧ ಯೋಜನೆಯಡಿ ಸಹಾಯಧನ, ಸಾಲ ಸೌಲಭ್ಯ, ಕೃಷಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವ ಮೂಲಕ ಕ್ಷೇತ್ರದ ಜನರ ಋಣ ತೀರಿಸುವ ಸಣ್ಣ ಪ್ರಯತ್ನ ಮಾಡಿದೆ. ಎಲ್ಲ ವರ್ಗದ ಸಾವಿರಾರು ಮಂದಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸಿದ್ದ ಪರಿಣಾಮ ಅನೇಕರಿಗೆ ತೋಟ ಮಾಡಲು ಅವಕಾಶ ದೊರೆತಿರುವುದು ನನ್ನಲ್ಲಿ ಹೆಚ್ಚು ತೃಪ್ತಿ ಉಂಟು ಮಾಡಿದೆ. 

ಜೊತೆಗೆ ಸಿರಿಗೆರೆ ಮಠದ ಡಾಕ್ಟರ್ ಜಗದ್ಗುರುಗಳ ಇಚ್ಛಾಶಕ್ತಿ ಫಲ ಇಂದು ಭರಮಸಾಗರ ವ್ಯಾಪ್ತಿಯಲ್ಲಿ ನೀರು ಹರಿದಿದೆ. ದೊಡ್ಡಕೆರೆ ತುಂಬಿದೆ. ಅಂತರ್ಜಲ ವೃದ್ಧಿಸಿ, ಬಹಳಷ್ಡು ಮಂದಿ ಅಡಕೆ ತೋಟದ ಮಾಲೀಕರಾಗಿದ್ದಾರೆ. ಈಗ ರೈತರ ಹಣ ಕೈಯಲ್ಲಿ ಓಡಾಡುತ್ತಿದೆ. ಈ ವೇಳೆ ಮೋಜು-ಮಸ್ತಿ ಎಂದು ದುಂದು ವೆಚ್ಚ ಮಾಡಬಾರದು. ಶ್ರಮದ ಹಣವನ್ನು ಮಕ್ಕಳ ಶಿಕ್ಷಣ, ಆಸ್ತಿ ಗಳಿಕೆ, ತೋಟದ ಅಭಿವೃದ್ಧಿಗೆ ಮೀಸಲಿಡಬೇಕು. ದುಶ್ಚಟಗಳು ಹತ್ತಿರ ಸುಳಿಯದಂತೆ ಎಚ್ಚರ ವಹಿಸಬೇಕು. ಮಕ್ಕಳ ಶಿಕ್ಷಣವೇ ನಿಮ್ಮಗಳ ಮುಖ್ಯ ಧ್ಯೇಯ ಆಗಬೇಕು ಎಂದು ಕಿವಿಮಾತು ಹೇಳಿದರು. 

Chitradurga: ವಿದ್ಯಾರ್ಥಿಗಳ ಅಧ್ಯಯನ ಕಟ್ಟಡ ಕಾಮಗಾರಿಯಲ್ಲಿ ಗೋಲ್ ಮಾಲ್

ಶ್ರೀಮಂತಿಕೆ ಬಂದವರು ತಮ್ಮ ಕುಟುಂಬ, ಒಡಹುಟ್ಟಿದವರು, ಸಂಬಂಧಿಕರ ಸಹಾಯಕ್ಕೆ ಆಗಮಿಸಬೇಕು. ಅವರನ್ನು ಕೂಡ ಮುಖ್ಯವಾಹಿನಿಗೆ ತರುವ ಉದಾತ್ತ ಧ್ಯೇಯ ಹೊಂದಬೇಕು ಎಂದರು. ಬಿಜೆಪಿ ಆಡಳಿತದಿಂದ ಭ್ರಮನಿರಸನಗೊಂಡಿರುವ ಜನರು, ದೇಶ, ರಾಜ್ಯದ ಅಭಿವೃದ್ಧಿಗೆ ನೂರಾರು ಕೊಡುಗೆ ನೀಡಿದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಹಂಬಲ ಎಲ್ಲೆಡೆ ವ್ಯಕ್ತಪಡಿಸುತ್ತಿದ್ದಾರೆ. ಮತದಾರರ ಮನದಾಸೆಗೆ ಪೂರಕವಾಗಿ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. 

ಬಿಜೆಪಿ ದುರಾಡಳಿತ, ಕಾಂಗ್ರೆಸ್ ಅವಧಿಯ ಜನಪರ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕೆಂದು ಆಂಜನೇಯ ಕರೆ ನೀಡಿದರು.
 

Latest Videos
Follow Us:
Download App:
  • android
  • ios