Chitradurga: ವಿದ್ಯಾರ್ಥಿಗಳ ಅಧ್ಯಯನ ಕಟ್ಟಡ ಕಾಮಗಾರಿಯಲ್ಲಿ ಗೋಲ್ ಮಾಲ್
* ವಿದ್ಯಾರ್ಥಿಗಳ ಅಧ್ಯಯನ ಕಟ್ಟಡ ಕಾಮಗಾರಿಯಲ್ಲಿ ಗೋಲ್ ಮಾಲ್ ಆರೋಪ.
* ಚಿತ್ರದುರ್ಗ ನಗರದ ಐಯುಡಿಪಿ ಬಡವಾಣೆಯಲ್ಲಿ ನಿರ್ಮಾಣ ವಾಗುತ್ತಿರುವ ಕಟ್ಟಡ
* ಕಟ್ಟಡದ ವಿನ್ಯಾಸ ಸರಿಪಡಿಸದೇ ಇದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ತೀವಿ ಎಂದು ಅಧಿಕಾರಿ ಖಡಕ್ ಎಚ್ಚರಿಕೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಜುಲೈ.08) : SC & ST ವಿಧ್ಯಾರ್ಥಿಗಳ ಕಲಿಕೆಗಾಗಿಯೇ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರ್ತಿವೆ. ಆದ್ರೆ ಮಕ್ಕಳಿಗೆ ತರಬೇತಿ ನೀಡ್ತೀವಿ ನೀವು ಅನುದಾನ ಕೊಡಿ ಎಂದು ನೆಪ ಹೇಳಿ NGO ಸಂಸ್ಥೆಯೊಂದು ಸಮಾಜ ಕಲ್ಯಾಣ ಇಲಾಖೆಗೆ ಮಂಕು ಬೂದಿ ಎರಚಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ......,
ಎರಡು ಅಂತಸ್ಥಿನ ಕಟ್ಟಡದ ಕಾಮಗಾರಿ ನಡೆಯುತ್ತಿರೋದು ಯಾವುದೋ ಓರ್ವ ವ್ಯಕ್ತಿಗೆ ಸೇರಿದ ಮನೆಯಂತೂ ಅಲ್ಲ. ಮೇಲಾಗಿ SC & ST ವಿಧ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರ ಸ್ಥಾಪನೆ ಮಾಡ್ತೀವಿ ಅಂತ ಆದರ್ಶ ಯುವಕ/ಯುವತಿ ಸಂಘ ಭೀಮಸಮುದ್ರ ಇವರು ನಿರ್ಮಾಣ ಮಾಡ್ತಿರೋ ಕಟ್ಟಡ. ಚಿತ್ರದುರ್ಗ ನಗರದ ಐಯುಡಿಪಿ ಬಡವಾಣೆಯಲ್ಲಿ, ವಿದ್ಯಾರ್ಥಿಗಳ ಕಲಿಕೆಗಾಗಿ ಯಾವುದೇ ಅಡಚಣೆ ಇರಬಾರದು, ಅದಕ್ಕಾಗಿಯೇ ಅವರ ಕೊಠಡಿಗಳು ಯಾವ ರೀತಿ ಇರಬೇಕು ಎಂದು ಸರ್ಕಾರದ ನಿಯಮಗಳೇ ಇವೆ.
ಹೈಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ಯಾ ಚಿತ್ರದುರ್ಗ ಜಿಲ್ಲಾಡಳಿತ..?
ಆದ್ರೆ ಈ ಆದರ್ಶ ಯುವಕ/ಯುವತಿ ಸಂಘ ಎಂಬ NGO ಸಂಸ್ಥೆ ಮಾತ್ರ ತನಗೆ ಯಾವ ರೀತಿ ಇಷ್ಟವೋ ಆ ರೀತಿ ಭವ್ಯ ಬಂಗಲೆಯನ್ನು ನಿರ್ಮಾಣ ಮಾಡಲು ಹೊರಟಿರುವುದು ಎಷ್ಟು ಸರಿ. ಇದಕ್ಕಾಗಿಯೇ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 25 ಲಕ್ಷ ಹಣ ಬಿಡುಗಡೆಯಾಗಿದೆ ಒಟ್ಟು 50 ಲಕ್ಷದ ಯೋಜನೆಯನ್ನು ಈ NGO ಸಂಸ್ಥೆ ಅಕ್ರಮವಾಗಿ ಬಳಸಿಕೊಳ್ತಿದೆ. ವಿದ್ಯಾರ್ಥಿಗಳ ತರಬೇತಿ ಕೇಂದ್ರದ ಹೆಸರಿನಲ್ಲಿ ತಮಗೆ ಬೇಕಾದಂಗೆ ಭವ್ಯ ಬಂಗಲೆ ನಿರ್ಮಾಣ ಮಾಡಲು ಹೊರಟಿದ್ದಾರೆ. ಕೂಡಲೇ ಈ ಅಕ್ರಮದಲ್ಲಿ ಬಾಗಿಯಾಗಿರುವ ಸಂಸ್ಥೆಯ ಎಲ್ಲರನ್ನೂ ಬಂಧಿಸಿ ಸೂಕ್ತ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಸ್ಥಳೀಯ ಹೋರಾಟಗಾರರ ಒತ್ತಾಯವಾಗಿದೆ.
ಇನ್ನೂ ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನೇ ವಿಚಾರಿಸಿದ್ರೆ, 2019 ರಲ್ಲಿ ನಮ್ಮ ಇಲಾಖೆಯಿಂದ ಆದರ್ಶ ಯುವಕ/ಯುವತಿ ಸಂಘಕ್ಕೆ ವಿಧ್ಯಾರ್ಥಿಗಳ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಲಿಕ್ಕೆಂದು ೫೦ ಲಕ್ಷ ಹಣ ಮಂಜೂರು ಮಾಡಲಾಗಿದೆ. ಅದ್ರಲ್ಲಿ ಮೊದಲೇ ಕಂತಿನಲ್ಲಿ ೨೫ ಲಕ್ಷ ಹಣ ಬಿಡುಗಡೆಯಾಗಿದೆ. ಈ ಕುರಿತು ನಾನು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಕಟ್ಟಡದ ಕಾಮಗಾರಿ ಅಕ್ರಮವಾಗಿ ನಡೆಯುತ್ತಿದೆ ಎಂದು ದೂರು ಬಂದ ಕೂಡಲೇ ಪರಿಶೀಲನೆ ನಡೆಸಿದ್ದೇನೆ. ಕಟ್ಟಡದ ವಿನ್ಯಾಸ ಅಧ್ಯಯನ ಕೇಂದ್ರದ ಮಾದರಿಯಲ್ಲಿ ಇಲ್ಲದೇ, ಗೃಹ ನಿರ್ಮಾಣದ ರೀತಿ ಇರೋದ್ರಿಂದ ಆ ಸಂಸ್ಥೆಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಧ್ಯಯನ ಕೇಂದ್ರಗಳು ಅತ್ಯವಶ್ಯಕ. ಈ ರೀತಿ ತಪ್ಪನ್ನು ತಿದ್ದಿಕೊಳ್ಳದೇ, ಕಟ್ಟಡ ಯಥಾಸ್ಥಿತಿ ಕಂಡು ಬಂದಲ್ಲಿ ಸರ್ಕಾರದ ನಿಯಮಾನುಸಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ಕೊಟ್ಟರು.
ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ NGO ಸಂಸ್ಥೆಗಳು ಕೆಲಸ ಮಾಡ್ತಾವೆ ಎಂದು ಸರ್ಕಾರ ಅನುದಾನ ಬಿಡುಗಡೆ ಮಾಡ್ತಿದೆ. ಆದ್ರೆ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮುಂದಾಗಿರೋ ಇಂತಹ ಸಂಸ್ಥೆಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಲಿ ಎಂಬುದು ಎಲ್ಲರ ಬಯಕೆ......,