ಚಿತ್ರದುರ್ಗ: ಹೆಗಡೆಹಾಳು ಗ್ರಾಮದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು
* ಹರ್ ಘರ್ ಜಲ್ ಯೋಜನೆ ಯಡಿ ಯಶಸ್ವಿ ಅನುಷ್ಠಾನ
* ಗ್ರಾಮದ 119 ಮನೆಗಳಿಗೆ ನಳದ ಸಂಪರ್ಕ
* 24×7 ನೀರಿನ ಸಂಪರ್ಕ ಒಲ್ಲೇ ಅಂದ ಎಮ್ಮೆಹಟ್ಟಿ ಗ್ರಾಮಸ್ಥರು
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಜು.09): ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ "ಹರ್ ಘರ್ ಜಲ್" ಯೋಜನೆ ಚಿತ್ರದುರ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಯೋಜನೆಯ ಭಾಗವಾಗಿ ಚಿತ್ರದುರ್ಗ ತಾಲೂಕಿನ ಕೊಳಹಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗಡೆಹಾಳು ಗ್ರಾಮವನ್ನು ಶೇ.100 ಸಾಧನೆ ತೋರಿದ ಗ್ರಾಮಗಳ ಪಟ್ಟಿಗೆ ಸೇರಿಸಲಾಗಿದೆ.
ಕೊಳಹಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಹಳ್ಳಿಗಳಲ್ಲಿ "ಹರ್ ಘರ್ ಜಲ್" ಯೋಜನೆ ಪೂರ್ಣಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಹೆಗಡೆಹಾಳು ಗ್ರಾಮದ 119 ಮನೆಗಳಿಗೆ 24×7 ಕುಡಿಯುವ ನೀರು ಸಂಪರ್ಕ ಕಲ್ಪಿಸಲಾಗಿದೆ. ಯೋಜನೆಯ ಯಶಸ್ವಿ ಅನುಷ್ಠಾನದಿಂದಾಗಿ ಗ್ರಾಮದ ಬಹುದಿನಗಳ ಬವಣೆಗೆ ಶಾಶ್ವತವಾಗಿ ಮುಕ್ತಿ ದೊರೆತಂತಾಗಿದೆ. ನಿರಂತರವಾಗಿ ಶುದ್ಧ ಕುಡಿಯುವ ನೀರು ಹರಿಸಲಾಗುತ್ತಿದೆ. ವಿಶೇಷ ಗ್ರಾಮ ಸಭೆಯಲ್ಲಿ ಹೆಗಡೆಹಾಳು ಗ್ರಾಮವನ್ನು 24×7 ನೀರಿನ ಸಂಪರ್ಕ ಪಡೆದ ಗ್ರಾಮವಾಗಿ ಘೋಷಣೆ ಮಾಡಲಾಗಿದೆ.
CHITRADURGA: ವಿದ್ಯಾರ್ಥಿಗಳ ಅಧ್ಯಯನ ಕಟ್ಟಡ ಕಾಮಗಾರಿಯಲ್ಲಿ ಗೋಲ್ ಮಾಲ್
ಪಂಚಾಯತಿ ವ್ಯಾಪ್ತಿಯ ಕೊಳಹಾಳು, ಕೊಳಹಾಳು ಗೊಲ್ಲರಹಟ್ಟಿ, ಹೆಗ್ಗೆರೆ ಗ್ರಾಮಗಳಲ್ಲಿ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಹಂಪನೂರು ಸೇರಿದಂತೆ ಇತರೆ ಗ್ರಾಮಗಳಲ್ಲೂ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.
24×7 ನೀರಿನ ಸಂಪರ್ಕ ಒಲ್ಲೇ ಅಂದ ಎಮ್ಮೆಹಟ್ಟಿ ಗ್ರಾಮಸ್ಥರು
Chitradurga: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಬೆಂಬಲಿಗನಿಂದ ದರ್ಪ: ಮಾರಣಾಂತಿಕ ಹಲ್ಲೆ ಆರೋಪ
ಕೊಳಹಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಮ್ಮೆಹಟ್ಟಿ ಗ್ರಾಮಸ್ಥರು 24×7 ನೀರಿನ ಸಂಪರ್ಕ ಬೇಡ ಎಂದರು. ಗ್ರಾಮದಲ್ಲಿ ಈಗ ಇರುವ ನೀರಿನ ಸಂಪರ್ಕ ಜಾಲ ಉತ್ತಮವಾಗಿದೆ, ಕುಡಿಯುವ ನೀರಿನ ತೊಂದರೆಯೇನು ಇಲ್ಲ. ಕುಡಿಯುವ ನೀರಿನ ಪೈಪುಗಳು ಹಾದು ಹೋದ ರಸ್ತೆಗಳನ್ನು ಸಿ.ಸಿ.ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈಗ ಮತ್ತೆ ನಳದ ಸಂಪರ್ಕ ಕಲ್ಪಿಸಲು ಸಿ.ಸಿ.ರಸ್ತೆ ಅಗೆದರೆ, ರಸ್ತೆ ಹಾಳುಗತ್ತದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಠರಾವು ನಿರ್ಣಯಿಸಿ ಯೋಜನೆ ಲಾಭ ಪಡೆಯುವುದರಿಂದ ದೂರ ಉಳಿದಿದ್ದಾರೆ.
ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಜಿ.ಪಂ.ಸಿಇಓ ಉತ್ತಮ ರೀತಿಯ ಮಾರ್ಗದರ್ಶನ ನೀಡುತ್ತಿದ್ದಾರೆ. ಶೀಘ್ರವಾಗಿ ಕೊಳಹಾಳು, ಕೊಳಹಾಳು ಗೊಲ್ಲರಹಟ್ಟಿ, ಹೆಗ್ಗರೆ ಗ್ರಾಮಗಳಲ್ಲಿ ನಿರಂತರ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.