ಪಕ್ಷ ಬೇಡದವರು ಹೋದರೆ ಬಿಜೆಪಿ ಶುದ್ಧವಾಗುತ್ತೆ: ಸಿ.ಟಿ.ರವಿ
ಸ್ವಾಭಾವಿಕವಾಗಿ ಒಂದು ಪಕ್ಷ ಚುನಾವಣೆಯಲ್ಲಿ ಸೋತಾಗ, ಅದರ ಪ್ರಭಾವ ಇದ್ದೇ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ಸಂಘಟಿತ ಹೋರಾಟ ಮಾಡಲು ಕೆಲವು ಕಾಲ ಆಳುವ ಸರ್ಕಾರಕ್ಕೆ ಸಮಯ ಕೊಡಬೇಕಾಗುತ್ತದೆ. ನಿಜ, ಸೋತಾಗ ಕೆಲವು ಕಾಲ ಮಾನಸಿಕವಾಗಿ ಕುಗ್ಗಿರುತ್ತೇವೆ. ಆದರೆ ನಾವು ಸಿದ್ಧಾಂತಕ್ಕಾಗಿ ರಾಜಕಾರಣ ಮಾಡುತ್ತಿರುವುದರಿಂದ 24 ಗಂಟೆಯಲ್ಲಿಯೇ ಸೋಲಿನ ಪರಾಮರ್ಶೆ ಮಾಡಿಕೊಂಡು ಮುಂದಿನ ಚಟುವಟಿಕೆಗಳಿಗೆ ಹೆಜ್ಜೆ ಹಾಕಿದ್ದೇವೆ: ಸಿ.ಟಿ.ರವಿ

ವಿಜಯ್ ಮಲಗಿಹಾಳ
ಬೆಂಗಳೂರು(ಅ.26): ಲೋಕಸಭಾ ಚುನಾವಣೆ ಸಮೀಪಿಸಿರುವ ಹೊತ್ತಿನಲ್ಲಿ ರಾಷ್ಟ್ರೀಯ ಬಿಜೆಪಿ ತೀವ್ರ ಚಟುವಟಿಕೆಯಲ್ಲಿ ನಿರತವಾಗಿದ್ದರೂ ಕರ್ನಾಟಕ ಬಿಜೆಪಿ ಘಟಕದಲ್ಲಿ ಮಾತ್ರ ಹೇಳಿಕೊಳ್ಳುವಂಥ ಉತ್ಸಾಹ ಕಂಡು ಬರುತ್ತಿಲ್ಲ. ಸಂಘಟಿತ ಹೋರಾಟ ನಡೆಯುತ್ತಿಲ್ಲ ಎಂಬ ಅಳಲು ಕೇಳಿಬರುತ್ತಿದೆ. ರಾಜ್ಯ ಬಿಜೆಪಿ ನಾಯಕರೂ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಈಗಿರುವ ರಾಜ್ಯಾಧ್ಯಕ್ಷರು ಬದಲಾಗುತ್ತಾರೆಯೋ ಅಥವಾ ಅವರೇ ಮುಂದುವರೆಯುತ್ತಾರೆಯೋ ಎಂಬುದೂ ಖಚಿತವಾಗಿಲ್ಲ. ಪ್ರತಿಪಕ್ಷದ ನಾಯಕನ ಆಯ್ಕೆಯೇ ಆಗಿಲ್ಲ. ಇಂಥ ಸನ್ನಿವೇಶದಲ್ಲಿ ಹಲವರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು ''ಕನ್ನಡಪ್ರಭ''ದೊಂದಿಗೆ ''ಮುಖಾಮುಖಿ''ಯಾದದ್ದು ಹೀಗೆ..
ಚುನಾವಣೆ ನಡೆದು ಐದು ತಿಂಗಳಾಯಿತು. ಬಿಜೆಪಿಯಲ್ಲಿ ಇನ್ನೂ ಮಂಕು ಕವಿದ ವಾತಾವರಣ ಇದೆಯಲ್ಲ?
-ನಾನು ಈ ಮಾತನ್ನು ಒಪ್ಪುವುದಿಲ್ಲ. ಯಾಕೆಂದರೆ ಪಕ್ಷವನ್ನು ನಿರಂತರ ಚಟುವಟಿಕೆಗಳಲ್ಲಿ ಇಟ್ಟಿದ್ದೇವೆ. ಸಾಕಷ್ಟು ವಿಷಯದಲ್ಲಿ ಹೋರಾಟಗಳು ನಡೆಯುತ್ತಿವೆ. ಒಂದು ಪಕ್ಷ ಚುನಾವಣೆಯಲ್ಲಿ ಸೋತ ನಂತರ ಸರ್ಕಾರ ಮಾಡುವ ತಪ್ಪುಗಳಿಗೆ ಕೆಲಕಾಲ ಸುಮ್ಮನೆ ಇರುವುದು ಸ್ವಾಭಾವಿಕ. ಆದರೆ, ನಾವು ಒಂದೆರಡು ತಿಂಗಳಲ್ಲಿಯೇ ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುವುದನ್ನು ಪ್ರಾರಂಭಿಸಿದ್ದೇವೆ.
ಉಪ್ಪು ತಿಂದವ ನೀರು ಕುಡಿಬೇಕು: ಡಿಕೆಶಿಗೆ ಟಕ್ಕರ್ ಕೊಟ್ಟ ಸಿ.ಟಿ.ರವಿ
ದೊಡ್ಡ ಮಟ್ಟದ ಸಂಘಟಿತ ಹೋರಾಟ ಕಾಣಿಸುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುತ್ತಿಲ್ಲ. ಮುಖಂಡರು ಸೇರುತ್ತಿಲ್ಲ?
-ಸ್ವಾಭಾವಿಕವಾಗಿ ಒಂದು ಪಕ್ಷ ಚುನಾವಣೆಯಲ್ಲಿ ಸೋತಾಗ, ಅದರ ಪ್ರಭಾವ ಇದ್ದೇ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ಸಂಘಟಿತ ಹೋರಾಟ ಮಾಡಲು ಕೆಲವು ಕಾಲ ಆಳುವ ಸರ್ಕಾರಕ್ಕೆ ಸಮಯ ಕೊಡಬೇಕಾಗುತ್ತದೆ. ನಿಜ, ಸೋತಾಗ ಕೆಲವು ಕಾಲ ಮಾನಸಿಕವಾಗಿ ಕುಗ್ಗಿರುತ್ತೇವೆ. ಆದರೆ ನಾವು ಸಿದ್ಧಾಂತಕ್ಕಾಗಿ ರಾಜಕಾರಣ ಮಾಡುತ್ತಿರುವುದರಿಂದ 24 ಗಂಟೆಯಲ್ಲಿಯೇ ಸೋಲಿನ ಪರಾಮರ್ಶೆ ಮಾಡಿಕೊಂಡು ಮುಂದಿನ ಚಟುವಟಿಕೆಗಳಿಗೆ ಹೆಜ್ಜೆ ಹಾಕಿದ್ದೇವೆ.
ಚುನಾವಣೆ ಸೋತ ಬಳಿಕ ಐದು ತಿಂಗಳಾದರೂ ಪಕ್ಷದ ವರಿಷ್ಠರು ಆಗಮಿಸಿ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಲಿಲ್ಲವಲ್ಲ?
-ಸ್ವಾಭಾವಿಕವಾಗಿ ವರಿಷ್ಠರು ಪಂಚರಾಜ್ಯ ಚುನಾವಣೆಗಳ ಕಡೆಗೆ ಗಮನ ಕೇಂದ್ರೀಕರಿಸಿದ್ದಾರೆ. ನಾನೂ ಸೇರಿದಂತೆ ಅನೇಕ ಮುಖಂಡರು ಹಾಗೂ ಶಾಸಕರನ್ನು ವಿವಿಧ ರಾಜ್ಯಗಳ ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ನಮ್ಮೆಲ್ಲರ ಆದ್ಯತೆ ಈ ಐದು ರಾಜ್ಯಗಳ ಚುನಾವಣೆಗೆ ಕಡೆ ಇದೆ.
ಪಂಚರಾಜ್ಯಗಳ ಚುನಾವಣೆ ಎದುರಾಗಿದ್ದು ಇತ್ತೀಚೆಗೆ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ವರಿಷ್ಠರು ಕರ್ನಾಟಕಕ್ಕೆ ಬಂದು ವಿಶ್ವಾಸ ತುಂಬುವ ಕೆಲಸ ಮಾಡಬಹುದಿತ್ತಲ್ಲವೇ?
-ಹೌದು. ಸ್ವಾಭಾವಿಕವಾಗಿ ಅಂತಹ ನಿರೀಕ್ಷೆ ಇರುತ್ತದೆ. ಸೋಲಿನ ಸಂದರ್ಭದಲ್ಲಿ ವಿಶ್ವಾಸ ತುಂಬುವ ಮತ್ತು ಸಾಂತ್ವನ ಹೇಳುವ ಕೆಲಸ ಎಲ್ಲಾ ಹಂತದಲ್ಲಿ ಇರುತ್ತದೆ. ಇದು ಕೇವಲ ರಾಜ್ಯಕ್ಕೆ ಅಂತಲ್ಲ, ಕೆಳಗಡೆ ಹಂತದವರಿಗೂ ಇರುತ್ತದೆ. ಯಾಕೆಂದರೆ ಗೆದ್ದಾಗ, ನಾನು ಬಹಳ ಸಲ ಹೇಳಿದ್ದೇನೆ. ಗೆಲುವಿಗೆ ನೂರಾರು ಅಪ್ಪಂದಿರು. ಸೋತಾಗ ಅನಾಥ. ಅಂತಹ ಸಂದರ್ಭದಲ್ಲಿ ವಿಶ್ವಾಸ ತುಂಬುವ ಅವಶ್ಯಕತೆ ಇದೆ.
ವರಿಷ್ಠರಿಗೆ ಕರ್ನಾಟಕದ ವಿದ್ಯಮಾನಕ್ಕೆ ಸಮಯ ಕೊಡದಿರಲು ಸೋಲಿನ ಕೋಪವೇನಾದರೂ ಕಾರಣವೇ?
-ಅದನ್ನು ಸಾರ್ವಜನಿಕ ರೂಪದಲ್ಲಿ ಚರ್ಚೆ ಮಾಡಲು ಬಯಸುವುದಿಲ್ಲ. ಸೋಲು ಕೇವಲ ರಾಜ್ಯದ್ದಲ್ಲ. ಯಾಕೆಂದ್ರೆ ಪ್ರತಿ ನಿರ್ಣಯದ ಹಿಂದೆ, ಇಲ್ಲಿ ಆಗಿರುವ ತಪ್ಪುಗಳಿಗೆ ಮೇಲಿನವರು ಹೊಣೆಯಲ್ಲ. ಅದರೆ, ನಿರ್ಣಯದ ಹಿಂದೆ ಮೇಲಿನವರ ಸಹಮತ ಅಥವಾ ನಿರ್ಣಯವನ್ನು ಸ್ವೀಕರಿಸಿದ್ದೇವೆ. ಅದು ನೇತೃತ್ವದ ವಿಷಯ ಇರಬಹುದು. ಸರ್ಕಾರದ ನೇತೃತ್ವದ ಪ್ರಶ್ನೆ ಬಂದಾಗ ಮೇಲಿನವರ ನಿರ್ಣಯ ಸ್ವೀಕರಿಸಿದ್ದೇವೆ. ತಪ್ಪುಗಳು ನಮ್ಮದೂ ಇರಬಹುದು. ಆದರೆ ನಿರ್ಣಯ ನೂರಕ್ಕೆ ನೂರು ರಾಜ್ಯದ್ದಲ್ಲ. ರಾಜ್ಯದ ಅಭಿಪ್ರಾಯ ಇರಬಹುದು. ನಿರ್ಣಯ ರಾಷ್ಟ್ರೀಯ ಘಟಕದ್ದಾಗಿದೆ. ಹಾಗಿದ್ದಾಗ ಒಳ್ಳೆಯದಕ್ಕೆ ಹೇಗೆ ನಾವು ಸಮಪಾಲುದಾರರೋ ಹಾಗೆಯೇ ತಪ್ಪುಗಳಿಗೂ ಸಮಪಾಲುದಾರರಾಗಬೇಕಾಗುತ್ತದೆ.
ಅಂದರೆ, ಚುನಾವಣೆಯ ಕಹಿ ಸೋಲಿಗೆ ವರಿಷ್ಠರ ಜವಾಬ್ದಾರಿಯೂ ಇದೆ ಎನ್ನುತ್ತೀರಿ?
-ನಾನು ಆ ರೀತಿ ಹೇಳುವುದಿಲ್ಲ. ಯಾವುದೇ ನಿರ್ಣಯಗಳು, ಪ್ರಮುಖ ನಿರ್ಣಯಗಳು ಮೇಲಿನವರ ಅನುಮತಿ ಅಥವಾ ಮೇಲಿನ ಸೂಚನೆಯಿಂದ ಆಗಿರುತ್ತವೆ. ಕೆಲವು ತಪ್ಪುಗಳು, ವ್ಯಕ್ತಿಗತ ಆಗಿರುವಂತಹದ್ದು, ವೈಫಲ್ಯಗಳು ನಮ್ಮ ತಪ್ಪು. ಆದರೆ ನೇತೃತ್ವ, ಮುಖ್ಯಮಂತ್ರಿಗಳ ಆಯ್ಕೆಯಿಂದ ಮೊದಲಗೊಂಡು ಕೆಲವು ಪ್ರಮುಖ ಜವಾಬ್ದಾರಿಗಳವರೆಗೆ ಮೇಲಿನವರ ಸಹಮತ, ಒಪ್ಪಿಗೆ ಅಥವಾ ಅವರ ಸೂಚನೆಯಂತೆ ಆಗಿರೋದು. ಹೀಗಾಗಿ ಎಲ್ಲವೂ ನಮ್ಮದೇ ಅಂತ ಅಲ್ಲ. ನಮ್ಮದು ಎನ್ನಬಹುದು. ಕೇವಲ ರಾಜ್ಯದ್ದಲ್ಲ. ರಾಜ್ಯ ಮತ್ತು ಕೇಂದ್ರದ್ದು ಇದೆ.
ಈ ತಪ್ಪುಗಳ ಬಗ್ಗೆ ನೀವು ರಾಷ್ಟ್ರೀಯ ನಾಯಕರ ಜತೆ ಚರ್ಚೆ ಮಾಡಿದ್ದೀರಾ?
-ಮಾಡಿದ್ದೇವೆ. ವ್ಯಕ್ತಿಗತ ನೆಲೆಯಲ್ಲಿ ನನ್ನ ಜತೆ ಮಾತನಾಡಿದ್ದಾರೆ. ಕಾರಣಗಳೇನು ಅಂತ ಕೇಳಿದ್ದಾರೆ. ಹತ್ತಾರು ಕಾರಣಗಳಿವೆ. ನನ್ನದೇ ತಪ್ಪು ಎಂದು ಹೇಳಿ, ಇನ್ನುಳಿದ ಕಾರಣಗಳನ್ನು ಹೇಳಬೇಕೆಂದರೆ ಹೇಳುತ್ತೇನೆ ಎಂದಿದ್ದೇನೆ. ಹೇಳಿ ಎಂದಾಗ ಮೊದಲನೆಯದು ನನ್ನ ತಪ್ಪು. ಎರಡನೇಯದು ನೀವು ಕೊಟ್ಟ ಜವಾಬ್ದಾರಿಗಳನ್ನು ಗೆಲುವಿನ ದಡಕ್ಕೆ ಮುಟ್ಟಿಸಬೇಕಿತ್ತು. ಹೀಗಾಗಿ ಅದು ನನ್ನ ತಪ್ಪು. ಕ್ಷಮೆಯಾಚಿಸುತ್ತೇನೆ ಎಂದು ಹೇಳಿ ಆಮೇಲೆ ನಮ್ಮ ಕಡೆಯಿಂದ ಏನೇನು ತಪ್ಪುಗಳಾಗಿವೆ ಎಂಬುದನ್ನು ಹೇಳಿದ್ದೇನೆ. ಆದರೆ ಸಾರ್ವಜನಿಕವಾಗಿ ಹೇಳಲು ಬಯಸುವುದಿಲ್ಲ. ರಾಷ್ಟ್ರೀಯ ಅಧ್ಯಕ್ಷರು, ಅಮಿತ್ ಶಾ ಅವರು, ಸಂತೋಷ್ ಅವರು, ಪ್ರಧಾನಿ ಒಬ್ಬರನ್ನು ಬಿಟ್ಟರೆ ಇನ್ನುಳಿದವರ ಜತೆ ಒನ್ ಟು ಒನ್ ಮಾತಾಡಿ ಹೇಳಿದ್ದೇನೆ.
ಟಿಕೆಟ್ ಹಂಚಿಕೆಯಲ್ಲೂ ರಾಷ್ಟ್ರೀಯ ಘಟಕದ ಪಾತ್ರವೇ ಪ್ರಮುಖವಾಗಿತ್ತಲ್ಲವೇ?
-ಶಿಫಾರಸ್ಸು ರಾಜ್ಯದ್ದು. ಅಂತಿಮವಾಗಿ ನಿರ್ಣಯ ಸಂಸದೀಯ ಮಂಡಳಿಯದ್ದು. ನಮ್ಮ ಶಿಫಾರಸ್ಸನ್ನು ತಿರಸ್ಕರಿಸುವ ಅಥವಾ ಅಂಗೀಕರಿಸುವ ಅಧಿಕಾರ ಸಂಸದೀಯ ಮಂಡಳಿಯದ್ದು. ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಜಿಲ್ಲೆಯಿಂದ ಹೆಸರು ತೆಗೆದುಕೊಂಡು ರಾಜ್ಯದ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಿ ಆಕಾಂಕ್ಷಿಗಳ ಹೆಸರಿನ ಜತೆಗೆ ನಮ್ಮ ಶಿಫಾರಸ್ಸನ್ನು ನಾವು ಮಾಡಿದ್ದೆವು. ಅಂತಿಮ ನಿರ್ಣಯ ಸಂಸದೀಯ ಮಂಡಳಿಯೇ ತೆಗೆದುಕೊಂಡಿದೆ.
ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಆಗಿದೆ ಎನ್ನುತ್ತೀರಿ. ಆದರೆ ವರಿಷ್ಠರಿಂದ ಸರ್ವಾಧಿಕಾರಿ ಧೋರಣೆ ಕಾಣಿಸುತ್ತಿದೆ ಎಂಬ ನೇರ ಆರೋಪ ಪಕ್ಷದ ಮುಖಂಡರಿಂದಲೇ ಕೇಳಿಬರುತ್ತಿದೆಯಲ್ಲ?
-ಬಿಜೆಪಿಯಂತಹ ಪಕ್ಷದಲ್ಲಿ ಸರ್ವಾಧಿಕಾರಿಯಂತಹ ಧೋರಣೆ ಬರಲು ಸಾಧ್ಯವೇ ಇಲ್ಲ. ನಮ್ಮದು ಅಂತಹ ವ್ಯವಸ್ಥೆ ಇರುವ ಪಕ್ಷವೇ ಅಲ್ಲ. ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಸರ್ವಾಧಿಕಾರಿ ಧೋರಣೆ ಎಂದರೆ ಯಾರನ್ನೂ ಕೇಳದೆ ಒಬ್ಬರೇ ನಿರ್ಣಯ ಕೈಗೊಳ್ಳುವುದು. ನಮ್ಮ ಬಹುತೇಕ ನಿರ್ಣಯಗಳು ಚರ್ಚೆಗಳು ಆಗಿಯೇ ಆಗುತ್ತವೆ. ಮತ್ತು ಆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಇರುವುದು ಸಂಸದೀಯ ಮಂಡಳಿಗೆ. ಹಾಗಿದ್ದಾಗ ಸರ್ವಾಧಿಕಾರ ಪ್ರಶ್ನೆ ಎಲ್ಲಿ ಬರುತ್ತದೆ.
ಸದಾನಂದಗೌಡ, ರೇಣುಕಾಚಾರ್ಯ ಸೇರಿದಂತೆ ಅನೇಕರು ಸರ್ವಾಧಿಕಾರಿ ಧೋರಣೆ ಪ್ರಸ್ತಾಪ ಮಾಡಿದ್ದಾರೆ?
-ಮಂಡಳಿಯಲ್ಲಿ ಅನುಭವಿಗಳು, ವರಿಷ್ಠರು ಇರುತ್ತಾರೆ. ಅವರು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಒಳ್ಳೆಯ ದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಣಯಗಳು ಕೆಲವು ಸಲ ತಪ್ಪಾಗಬಹುದು. ಆದರೆ ಸಂಸದೀಯ ಮಂಡಳಿಯ ಸಭೆಯಲ್ಲಿ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಯಾರೋ ಒಬ್ಬ ವ್ಯಕ್ತಿ ನಿರ್ಣಯ ತೆಗೆದುಕೊಳ್ಳುವ ಪದ್ಧತಿ ನಮ್ಮ ಪಕ್ಷದಲ್ಲಿಲ್ಲ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಸೋಲಿಗೆ ಪ್ರಮುಖ ಕಾರಣವಾಯಿತೇ?
-ಆ ರೀತಿಯ ಅಭಿಪ್ರಾಯ ನಿರ್ಮಾಣ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತು. ಆ ಟ್ರ್ಯಾಪ್ ಒಳಗೆ ನಾವು ಬಿದ್ದೆವು. ಈಗ ಕೆಲವರು ಆ ರೀತಿ ಒಂದು ನಿರೂಪಣೆ ಸೆಟ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಖುದ್ದು ಯಡಿಯೂರಪ್ಪ ಅವರೇ ಅದನ್ನು ಅಲ್ಲಗಳೆದಿದ್ದಾರೆ. ಪಕ್ಷ ಎಲ್ಲ ಅವಕಾಶಗಳನ್ನು ಮಾಡಿಕೊಟ್ಟಿದೆ. ಸ್ವಯಿಚ್ಛೆಯಿಂದ, ಸಂತೃಪ್ತಿಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಮಾತನ್ನು ಯಡಿಯೂರಪ್ಪ ಹೇಳಿದ್ದಾರೆ. ಆಪಾದನೆ ಮಾಡುವ ಮಾತನ್ನು ನಂಬುತ್ತೀರೋ ಅಥವಾ ಸ್ವಯಂ ಯಡಿಯೂರಪ್ಪ ಮಾತು ನಂಬುತ್ತೀರೋ.
ಹಿಂದುತ್ವಕ್ಕೆ ಸಂಬಂಧಪಟ್ಟಂತೆ ಹಿಜಾಬ್, ಹಲಾಲ್, ಮುಸ್ಲಿಮರಿಗೆ ವ್ಯಾಪಾರ ನಿಷೇಧ ಮತ್ತಿತರ ಅಂಶಗಳ ಬಗ್ಗೆ ಬಿಜೆಪಿ ನಾಯಕರ ಅತಿರೇಕದ ಹೇಳಿಕೆಗಳಿಂದ ತಾವು ಸೋತೆವು ಎಂಬ ಮಾತನ್ನು ಹಲವು ಅಭ್ಯರ್ಥಿಗಳು ಆಫ್ ದಿ ರೆಕಾರ್ಡ್ ಹೇಳುತ್ತಿದ್ದಾರೆ
-ನೋಡಿ, ನೋಡಿ ತಾತ್ವಿಕ ವಿಷಯಗಳನ್ನು ಹೇಳಬೇಕಾದರೆ ಲಾಭ-ನಷ್ಟದ ಲೆಕ್ಕಾಚಾರ ಹಾಕಲು ಬರುವುದಿಲ್ಲ. ಇದು ರಾಜಕೀಯ ಲಾಭ- ನಷ್ಟದ ಪ್ರಶ್ನೆಯಲ್ಲ. ಈಗ ಓಲೈಕೆ ರಾಜಕಾರಣ ಮಾಡುವವರು ಈ ನಿಯಮವನ್ನು ಮೀರಿ ಓಲೈಸಬಹುದು. ಆದರೆ ನಾವು ತಾತ್ವಿಕ ರಾಜಕಾರಣ ಮಾಡುವವರಿಗೆ ಓಲೈಕೆ ಮಾಡುವ ಅವಶ್ಯಕತೆ ಇಲ್ಲ. ಉಳಿದವರನ್ನು ಮನವೊಲಿಸುವಲ್ಲಿ ಸೋತಿದ್ದೇವೆ ಎಂದು ಹೇಳಬೇಕಾಗುತ್ತದೆ. ನಮ್ಮ ಸೋಲು ವಾಸ್ತವಿಕತೆಯನ್ನು ಮನವರಿಕೆ ಮಾಡಿಕೊಡದಿರುವುಕ್ಕೆ ಆಗಿರುವ ಸೋಲು ಎಂದು ನಾನು ಒಪ್ಪುತ್ತೇನೆ. ಆದರೆ ತಾತ್ವಿಕ ನಿಲುವು ಪ್ರತಿಪಾದಿಸಿದಕ್ಕೆ ಸೋಲು ಎನ್ನುವುದನ್ನು ನಾನು ಒಪ್ಪಲ್ಲ.
ಬಿಜೆಪಿಯ ಹಲವು ಹಾಲಿ ಶಾಸಕರು ಕಾಂಗ್ರೆಸ್‌ನತ್ತ ಹೆಜ್ಜೆ ಹಾಕಿದ್ದಾರಲ್ಲ?
-ಊಹಾಪೋಹದ ಪ್ರಶ್ನೆಯಾಗಿರುವುದರಿಂದ ಇದನ್ನು ನಾನು ಸ್ವೀಕರಿಸುವುದಿಲ್ಲ. ಒಂದು ವೇಳೆ ಯಾರಾದರೂ ಹೋಗುತ್ತಾರೆ ಎನ್ನುವುದಾದರೆ ಒಂದ ಸಲ ಪಕ್ಷ ಫಿಲ್ಟರ್ ಆಗಲಿ ಎಂದು ಬಯಸುತ್ತೇನೆ. ಸ್ವಾರ್ಥದ ರಾಜಕಾರಣ, ಅಧಿಕಾರ ರಾಜಕಾರಣವೇ ಮುಖ್ಯ ಎಂದು ಹೋಗುವವರು ಕಾಂಗ್ರೆಸ್‌ಗೆ ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಈಗಾಗಲೇ ಒಳಬೇಗುದಿಯಿಂದ ಬೇಯುತ್ತಿರುವ ಕಾಂಗ್ರೆಸ್ ಮುಂದೆ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಅಂಥವರು ಹೋಗುವುದಾದರೆ ಹೋಗಲಿ. ನಮಗೆ ಪಕ್ಷ ಶುದ್ಧವಾಗಲು ಅನುಕೂಲವಾಗುತ್ತದೆ.
ಹೋಗಲು ಸಜ್ಜಾಗಿರುವವರನ್ನು ತಡೆಯುವ ಪ್ರಯತ್ನ ಗಂಭೀರವಾಗಿ ನಡೆಯುತ್ತಿಲ್ಲವಲ್ಲ?
-ವ್ಯಕ್ತಿಗತವಾದ ಅಭಿಪ್ರಾಯ ಇದ್ದರೆ ಸರಿಪಡಿಸಬಹುದು. ಸ್ವಾರ್ಥದ ರಾಜಕಾರಣ ಮಾಡುವವರಿಗೆ ಅವರ ಸ್ವಾರ್ಥದ ರಾಜಕಾರಣ ಈಡೇರಿಸುವ ಮಂತ್ರದಂಡ ಇಲ್ಲ ನಮ್ಮ ಹತ್ತಿರ ಇಲ್ಲ. ಮಂತ್ರ ದಂಡ ಇದ್ದಿದ್ದರೆ ಸ್ವಾರ್ಥದ ರಾಜಕಾರಣ ಈಡೇರಿಸಬಹುದಿತ್ತು. ಬಿಜೆಪಿಯನ್ನು ಅರ್ಥ ಮಾಡಿಕೊಳ್ಳದೆ ಬಂದಿದ್ದರು ಅನಿಸುತ್ತದೆ. ನಮ್ಮ ವಿಚಾರ ಮೊದಲು ದೇಶ ಎನ್ನುವ ತತ್ವ. ಮುಂದೆಯೂ ದೇಶವೇ ಮೊದಲು ಎನ್ನುವ ತತ್ವದಲ್ಲಿಯೇ ಇರುತ್ತೇವೆ. ಅದರಲ್ಲಿ ಇರುತ್ತೇವೆ. ಬಹುಶಃ ಕೆಲವರು ನಮ್ಮನ್ನು ಅರ್ಥ ಮಾಡಿಕೊಳ್ಳದೆ ಬಂದಿದ್ದರೆ ಅವರು ಈಗ ಬಿಜೆಪಿ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
*ಆದರೆ, ಈ ಬಾರಿಯೂ ಮತ್ತೆ ಕಾಂಗ್ರೆಸ್‌ನಿಂದ ಶಾಸಕರನ್ನು ಕರೆತರಲು ಬಿಜೆಪಿ ಆಪರೇಷನ್ ನಡೆಸಲಿದೆ ಎಂಬ ಪರೋಕ್ಷ ಮಾತುಗಳು ಕೇಳಿಬರುತ್ತಿವೆಯಲ್ಲ?
-ನಮಗಿರುವುದು 66 ಶಾಸಕರು. ಒಂದು ಸರ್ಕಾರ ರಚನೆ ಮಾಡಬೇಕೆಂದರೆ ಇನ್ನು 50 ಸ್ಥಾನಗಳ ಅವಶ್ಯಕತೆ ಇದೆ. ಈಗ ಜೆಡಿಎಸ್‌ನ 19 ಶಾಸಕರನ್ನು ಸೇರಿಸಿಕೊಂಡರೂ ಇನ್ನು 30 ಸ್ಥಾನಗಳ ಕೊರತೆ ಎದುರಾಗಲಿದೆ. ಆಡಳಿತ ಪಕ್ಷದೊಳಗೆ ದೊಡ್ಡ ಸ್ಥಾನಪಲ್ಲಟವಾಗದೆ ಇದ್ಯಾವುದೂ ಸಾಧ್ಯವಿಲ್ಲ. ಆ ಥರದ ಲಕ್ಷಣಗಳು ಈಗ ಕಂಡುಬರುತ್ತಿಲ್ಲ. ಒಳಬೇಗುದಿ ಕಂಡು ಬರುತ್ತಿದೆಯೇ ಹೊರತು ದೊಡ್ಡ ಸ್ಥಾನಪಲ್ಲಟವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.
ಮತ್ತೊಮ್ಮೆ ಶಾಸಕರನ್ನು ಕರೆತರುವುದನ್ನು ನೀವು ಒಪ್ಪುತ್ತೀರಾ?
-ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ನಾವು ನಮ್ಮ ವಿಚಾರದ ಜತೆಗೆ ಆಡಳಿತ ಪಕ್ಷ ಮಾಡುವ ತಪ್ಪುಗಳನ್ನು ಇಟ್ಟುಕೊಂಡು ಹೋರಾಟ ಮಾಡೋಣ. ಇವತ್ತಲ್ಲ, ನಾಳೆ ಜನ ಅಧಿಕಾರ ಕೊಡುತ್ತಾರೆ ಎನ್ನುವುದೇ ನನ್ನ ನಿಲುವು. ಅಧಿಕಾರಕ್ಕಾಗಿ ಸಮ್ಮಿಶ್ರ ಸರ್ಕಾರ ಬಿದ್ದುಹೋಗಿ ಶುದ್ಧ ಮನಸ್ಥಿತಿಯ ಯಾವುದೇ ಪೂರ್ಣ ಬಹುಮತದ ಸರ್ಕಾರ ಬರುತ್ತಿದೆ. ಬಂದವರಿಂದ ಅಧಿಕಾರ ಅನುಭವಿಸಿದ್ದೇವೆ. ಬಂದವರಿಗೂ ಅಧಿಕಾರ ಸಿಕ್ಕಿದೆ. ಪರಿಣಾಮ ನಾಲ್ಕೇ ವರ್ಷದಲ್ಲಿ ವಿಶ್ವಾಸ ಕಳೆದುಕೊಳ್ಳುವುದಕ್ಕೂ ಕಾರಣವಾಯಿತು. ಬಂದವರಿಂದ ಅಧಿಕಾರ ಹೋಯಿತು ಎಂದು ಹೇಳಿಲ್ಲ. ನಮ್ಮೆಲ್ಲರ ಒಟ್ಟು ಕಾರಣದಿಂದಾಗಿ ಜನರ ವಿಶ್ವಾಸ ಕಳೆದುಕೊಳ್ಳಬೇಕಾಯಿತು.
*ಕಳೆದ ಚುನಾವಣೆಯಲ್ಲಿ ನಾವು ಕಾಂಗ್ರೆಸ್- ಜೆಡಿಎಸ್ ವಿರುದ್ಧ ಹೋರಾಡುವುದಕ್ಕಿಂತ ನಮ್ಮನಮ್ಮವರ ವಿರುದ್ಧವೇ ಕತ್ತಿ ಗುರಾಣಿ ಹಿಡಿದುಕೊಂಡು ಹೋರಾಡಿದೆವು ಎಂಬ ಮಾತನ್ನು ಸದಾನಂದಗೌಡರು ಹೇಳಿದ್ದಾರೆ?
-ಸೋಲಿನ ಹತ್ತಾರು ಕಾರಣಗಳಲ್ಲಿ ಇದು ಒಂದು ಇರಬಹುದು. ಕೆಲವು ಸಂಗತಿಗಳನ್ನು ನಾನು ಸಾರ್ವಜನಿಕವಾಗಿ ವಿಶ್ಲೇಷಣೆ ಮಾಡುವುದಿಲ್ಲ. ಕಾಂಗ್ರೆಸ್- ಜೆಡಿಎಸ್ ವಿರುದ್ಧ ಹೋರಾಡುವ ಶಕ್ತಿ ಖಂಡಿತ ಇತ್ತು. ಅದರೆ ನಮ್ಮೊಳಗಿನ ನಾವು ಯಾರನ್ನು ಶತ್ರುಗಳೆಂದು ಪರಿಗಣಿಸಿಲ್ಲ. ಹೀಗಾಗಿ ಈ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ.
ನಿಮಗೂ ಸ್ವಪಕ್ಷೀಯರಿಂದಲೇ ಸೋಲು ಉಂಟಾಯಿತಂತೆ ಹೌದೇ?
-ಈಗ ಇದನ್ನು ಸಾರ್ವಜನಿಕವಾಗಿ ಚರ್ಚಿಸಲು ಬಯಸಲ್ಲ. ಇನ್ನೊಬ್ಬರ ಕಡೆ ಬೊಟ್ಟು ಮಾಡಲ್ಲ. ಎಲ್ಲಿ ಹೇಳಬೇಕೊ ಅಲ್ಲಿ ಹೇಳಿದ್ದೇನೆ.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಪ್ರತಿಪಕ್ಷದ ನಾಯಕ ನೇಮಕಕ್ಕೆ ಮುಹೂರ್ತ ಕೂಡಿ ಬರುತ್ತಿಲ್ಲವೇ?
-ಪ್ರತಿಪಕ್ಷ ನಾಯಕ ಸಾಂವಿಧಾನಿಕ ಹುದ್ದೆ. ಅದನ್ನು ನಾವು ನೇಮಕ ಮಾಡಲೇಬೇಕಾಗಿತ್ತು. ಯಾಕೆ ಏನು ಅಂತ ಗೊತ್ತಿಲ್ಲ. ಯಾವುದೋ ಒಂದು ಉದ್ದೇಶ ಇಟ್ಟುಕೊಂಡು ಸಂಸದೀಯ ಮಂಡಳಿ, ಪಕ್ಷದ ವರಿಷ್ಠರು ನೇಮಕ ಮಾಡಿಲ್ಲ ಎಂಬುದು ನನ್ನ ನಂಬಿಕೆ. ಆದರೆ, ಜನಸಾಮಾನ್ಯರಿಗೆ ಇನ್ನೂ ಮಾಡಿಲ್ಲ ಎಂಬ ಭಾವನೆ ಇರುವುದು ಸ್ಪಷ್ಟ. ನನ್ನ ಹತ್ತಿರ ಅದನ್ನು ಮನವರಿಕೆ ಮಾಡಲು ಕಾರಣಗಳಿಲ್ಲ. ಉಳಿದಿರುವುದು ನಂಬಿಕೆ ಮಾತ್ರ. ಏನೋ ಉದ್ದೇಶ ಇಟ್ಟುಕೊಂಡು ಮಾಡದಿರಬಹುದು. ಅ ನಂಬಿಕೆ ಹುಸಿಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಪಕ್ಷದಲ್ಲಿನ ಬಣ ರಾಜಕೀಯವೇ ಈ ನೇಮಕಗಳ ವಿಳಂಬಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ?
-ಇವತ್ತಿನ ಕಾಲಕ್ಕೆ ಪಕ್ಷಕ್ಕೆ ಯಾರಿಂದ ಒಳ್ಳೆಯದು ಆಗುತ್ತದೆ ಎನ್ನುವುದನ್ನು ಆಧರಿಸಿ ನಿರ್ಣಯ ಮಾಡಬೇಕು. ನಿರ್ಣಯ ಮಾಡಿದ ನಂತರ ನಮ್ಮಲ್ಲರ ಸಾಮೂಹಿಕ ಹೋರಾಟ. ಈಗ ಯಾರೊಬ್ಬರನ್ನೋ ನೇಮಕ ಮಾಡಿದ್ದೇವೆ ಎಂದಾಕ್ಷಣ ಅವರಿಂದಲೇ ಎಲ್ಲವೂ ನಡೆಯುವುದಿಲ್ಲ. ಆದರೆ, ಅವರ ನೇತೃತ್ವ ಇರುತ್ತದೆ. ಉಳಿದೆಲ್ಲವೂ ಸಾಮೂಹಿಕ ಸಹಕಾರ, ಪ್ರಯತ್ನದ ಮೂಲಕವೇ ನಡೆಯಬೇಕಾಗುತ್ತದೆ. ಹೀಗಾಗಿ ಅಭಿಪ್ರಾಯ ತೆಗೆದುಕೊಂಡು ನಿರ್ಣಯ ಮಾಡಬೇಕಿರುವುದು ಸಂಸದೀಯ ಮಂಡಳಿ ಜವಾಬ್ದಾರಿ.
ನಿಮ್ಮ ಹೆಸರು ಕೂಡ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಇದೆಯಂತೆ?
-ಯೋಗಾಯೋಗ. ಎಲ್ಲ ಹುದ್ದೆಗಳಿಗೂ ನನ್ನ ಹೆಸರು ಕೇಳಿಬರುತ್ತದೆ. ಆದರೆ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಜವಾಬ್ದಾರಿಯನ್ನು ಯೋಗ್ಯತೆ ಮತ್ತು ಸಂದರ್ಭಕ್ಕೆ ಸೂಕ್ತವೇ ಎಂಬುದನ್ನು ನಿರ್ಣಯಿಸಬೇಕಾಗಿರುವುದು ನಮಗಿಂತ ಹಿರಿಯರು. ನಾವಲ್ಲ. ಈ ಸಂದರ್ಭಕ್ಕೆ ಯಾರು ಸೂಕ್ತ ಎನ್ನುವುದನ್ನು ಪಕ್ಷ ಮಾಡುತ್ತದೆ. ಇದು ನಮಗೆ ಶಾಶ್ವತವಾಗಿ ಉಳಿದಿರುವ ಹುದ್ದೆಗಳಲ್ಲ. ಅದು ಮೂರು ವರ್ಷ. ಕೆಲವರನ್ನು ಮೂರು ತಿಂಗಳಿಗೆ ಬದಲಿಸಲಾಗುತ್ತದೆ. ಕೆಲವರನ್ನು ಮೂರು ವರ್ಷದ ಬಳಿಕವೂ ಮುಂದುವರಿಸಲಾಗುತ್ತದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಲಿಂಗಾಯತ ಸಮುದಾಯ ಕೈಕೊಟ್ಟಿದೆ ಎಂಬ ಕಾರಣಕ್ಕಾಗಿ ರಾಜ್ಯಾಧ್ಯಕ್ಷರ ಹುದ್ದೆಗೆ ಆ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಆ ಸಮುದಾಯದ ಮುಖಂಡರಿಂದ ಕೇಳಿಬಂದಿದೆ?
-ಲಿಂಗಾಯತ ಸಮುದಾಯ ಕೈಕೊಟ್ಟಿದೆ ಎನ್ನುವುದು ನಾನು ಒಪ್ಪಲ್ಲ. ನಮಗೆ ಕಳೆದ ಸಲ ಅಧಿಕಾರಕ್ಕೆ ಬಂದಾಗಲೂ ಶೇ.36 ಮತ. ಈ ಬಾರಿಯೂ ಶೇ.36 ಮತ. ಲಿಂಗಾಯತ ಸಮುದಾಯ ಕೈಕೊಟ್ಟಿದ್ದರೆ ಶೇ.36 ಮತ ಗಳಿಕೆ ಎಲ್ಲಿಂದ ಬರುತ್ತಿತ್ತು? ನಮ್ಮ ಪಕ್ಷವನ್ನು ಬಹುಕಾಲ ನೇತೃತ್ವ ವಹಿಸಿದ್ದೇ ಲಿಂಗಾಯತ ಸಮುದಾಯ. ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ, ಬೊಮ್ಮಾಯಿ. ಅದಕ್ಕೂ ಮುಂಚೆ ಜಗದೀಶ್ ಶೆಟ್ಟರ್. ಹನ್ನೊಂದು ತಿಂಗಳ ಅವಧಿಗೆ ಸದಾನಂದಗೌಡರು ಅಗಿದ್ದರು. ಇನ್ನುಳಿದ ಎಲ್ಲ ಸಮುದಾಯದಲ್ಲಿ ಲಿಂಗಾಯತ ಸಮುದಾಯಕ್ಕೆ ನೇತೃತ್ವ ನೀಡಲಾಗಿದೆ.
ಬಿಜೆಪಿಯಲ್ಲಿ ಒಂದು ಜಾತಿಗೆ ಪ್ರಾಧಾನ್ಯತೆ ನೀಡುವುದು ಮುಂದುವರೆದಿದೆಯಲ್ಲವೇ?
- ರಾಷ್ಟ್ರೀಯತೆ, ಹಿಂದುತ್ವ, ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎನ್ನುವುದೇ ಪಕ್ಷದ ವಿಚಾರ. ಜಾತಿ ಆಧಾರಿತವಾಗಿರುವುದು ಪಕ್ಷದ ವಿಚಾರವಲ್ಲ. ನಮಗೆ ಒಂದು ರಣನೀತಿಯಾಗಿ ಜಾತಿ ಬಳಕೆ ಮಾಡುವುದು ಬೇರೆ. ಆದರೆ, ಸಿದ್ಧಾಂತವಾಗಿ ಜಾತಿ ಬಳಕೆ ಮಾಡಬಾರದು. ನಮ್ಮದು ದೇಶ ಮೊದಲು ಎಂಬ ತತ್ವ. ಹಿಂದುತ್ವವೇ ತತ್ವ. ರಣನೀತಿಯಾಗಿ ಆ ಸಂದರ್ಭಕ್ಕೆ ಜಾತಿ ಬಳಕೆ ತಪ್ಪಲ್ಲ. ಸಿದ್ಧಾಂತವಾಗಿ ಬಳಕೆಯಾದರೆ ಮುಂದೊಂದು ದಿನ ದೊಡ್ಡ ಹಾನಿ ಪಕ್ಷಕ್ಕೆ ಆಗುತ್ತದೆ. ಹಾಗಾಗಿ ಸಿದ್ದಾಂತವಾಗಿ ಬಳಕೆ ಮಾಡಬಾರದು.
*ಲೋಕಸಭಾ ಚುನಾವಣೆ ಗುರಿಯಾಗಿಸಿಕೊಂಡು ನಿಮ್ಮ ಪಕ್ಷ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದೆ?
-ಎನ್‌ಡಿಎ ಭಾಗವಾಗಿ ಜೆಡಿಎಸ್ ಅನ್ನು ಸ್ವೀಕಾರ ಮಾಡಲಾಗಿದೆ. ಪಕ್ಷದ ಕಟ್ಟಾಳು ಕಾರ್ಯಕರ್ತನಾಗಿ ಪಕ್ಷದ ನಿಲುವನ್ನು ಸ್ವಾಗತ ಮಾಡಿದ್ದೇನೆ. ಎರಡೂ ಪಕ್ಷದೊಳಗೆ ಕೆಲವು ಮುಖಂಡರು, ಕಾರ್ಯಕರ್ತರ ನಡುವಿನ ಅಪನಂಬಿಕೆ ದೂರ ಮಾಡಬೇಕು. ವಿಶ್ವಾಸವನ್ನು ಮೂಡಿಸುವ ಕೆಲಸ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ. ಇಲ್ಲದಿದ್ದರೆ ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿಯಿಂದ ಏನಾಯಿತು ನಿದರ್ಶನ ನಮ್ಮ ಮುಂದಿದೆ.
ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್..ಡ್ಯಾಶ್..: ಡಿಕೆಶಿಗೆ ತಿವಿದ ಮಾಜಿ ಸಚಿವ ಸಿ.ಟಿ. ರವಿ
ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರು ರಾಜ್ಯ ನಾಯಕರನ್ನು ಸಂಪೂರ್ಣವಾಗಿ ದೂರ ಇಟ್ಟಿದ್ದಾರಲ್ಲವೇ?
-ರಾಷ್ಟ್ರದ ದೃಷ್ಟಿಯಿಂದ ಮೈತ್ರಿ ಬಗ್ಗೆ ನಿರ್ಣಯ ಆಗಿದೆ. ಯಾರಿಗೆ ಎಷ್ಟು ಕ್ಷೇತ್ರ ಎಂಬುದನ್ನು ಚರ್ಚೆ ಮಾಡಬೇಕು. ಆಗ ರಾಜ್ಯ ಘಟಕವನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡಬೇಕಾಗುತ್ತದೆ. ಈಗ ಆಗಿರುವುದು ಕೇವಲ ಎನ್‌ಡಿಎ ಭಾಗ ಮಾತ್ರ. ಉಳಿದ ವಿಚಾರಗಳನ್ನು ಐದು ರಾಜ್ಯಗಳ ಚುನಾವಣೆ ಬಳಿಕ ಚರ್ಚಿಸುತ್ತಾರೆ.
ನೀವು ವಿಧಾನಸಭಾ ಚುನಾವಣೆಯಲ್ಲಿ ಸೋತಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಂತೆ?
-ಇಲ್ಲ ಎಂಬುದನ್ನು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಪಕ್ಷ ನಿಲ್ಲಿಸಬೇಕು ಎಂದು ತೀರ್ಮಾನ ಮಾಡಿದರೆ ಅದು ಪಕ್ಷದ ತೀರ್ಮಾನ. ನಾನು ಕೇಳಲು ಹೋಗಲ್ಲ. ಪಕ್ಷದ ತೀರ್ಮಾನವನ್ನು ಸದಾಕಾಲ ಒಪ್ಪಿಕೊಂಡಿದ್ದೇನೆ.